ಆಂಧ್ರಪ್ರದೇಶ: ಸಾಮಾನ್ಯವಾಗಿ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತಾದಿಗಳು ತಮಗೆ ಒಳ್ಳೆಯದಾಗಲಿ, ಮನೆ ಮಂದಿಗೆಲ್ಲಾ ಸುಖ-ಶಾಂತಿ ಸಿಗಲಿ ಎಂದು ದೇವರಲ್ಲಿ ಮೊರೆ ಇಡುತ್ತಾರೆ. ಆದರೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಿಂದ ಇಡೀ ಸಮಾಜವೇ ಮೂಗಿನ ಮೇಲೆ ಬೆರಳಿಡುವಂತಹ ವಿಲಕ್ಷಣ ಪ್ರಸಂಗವೊಂದು ಮುನ್ನೆಲೆಗೆ (Viral News) ಬಂದಿದೆ. ಅತ್ತೆಯ ಕಿರುಕುಳದಿಂದ ಸಂಪೂರ್ಣವಾಗಿ ಜಿಗುಪ್ಸೆಗೊಂಡ ಸೊಸೆಯೊಬ್ಬಳು, ತನ್ನ ಅತ್ತೆ ಇಷ್ಟರಲ್ಲೇ ಸಾಯುವಂತೆ ಅನುಗ್ರಹಿಸು ಎಂದು ನೇರವಾಗಿ ದೇವರಿಗೇ ಪತ್ರ ಬರೆದು ಹುಂಡಿಗೆ ಎಸೆದು ಬಂದಿದ್ದಾಳೆ!
ಎಲ್ಲಿ ನಡೆದಿದ್ದು ಈ ಘಟನೆ?
ಈ ಕುತೂಹಲಕಾರಿ ಘಟನೆ ನಡೆದಿರುವುದು ಅನಂತಪುರ ಜಿಲ್ಲೆಯ ಆತ್ಮಕೂರು ಮಂಡಲದ ವ್ಯಾಪ್ತಿಗೆ ಬರುವ ಪಂಪನೂರು ಎಂಬ ಹಳ್ಳಿಯ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ. ಇತ್ತೀಚೆಗೆ ಮಂದಿರದ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ನೌಕರರು ಹುಂಡಿಯಲ್ಲಿದ್ದ ಭಕ್ತರ ಕಾಣಿಕೆಯನ್ನು ಒಟ್ಟಾಗಿ ಕುಳಿತು ಎಣಿಸುತ್ತಿದ್ದರು. ಈ ವೇಳೆ ರಾಶಿ ಹಾಕಿದ್ದ ನಗದು ಹಣದ ಮಧ್ಯೆ ಇಂಕ್‌ನಲ್ಲಿ ಏನನ್ನೋ ಗೀಚಿದ್ದ ಇಪ್ಪತ್ತು ರೂಪಾಯಿಯ ನೋಟು ಸಿಬ್ಬಂದಿಯ ಕೈಗೆ ಸಿಕ್ಕಿದೆ. ಕುತೂಹಲದಿಂದ ಆ ನೋಟಿನಲ್ಲಿದ್ದ ಅಕ್ಷರಗಳನ್ನು ಓದಿದ ದೇವಸ್ಥಾನದ ಸಿಬ್ಬಂದಿ ಒಂದು ಕ್ಷಣ ದಂಗಾಗಿದ್ದಾರೆ. ಅದರಲ್ಲಿ, “ದೇವನೇ, ಅತ್ತೆಯ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ನನ್ನ ಕೈಯಲ್ಲಿ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಆಕೆಯನ್ನು ಆದಷ್ಟು ಬೇಗ ನಿನ್ನ ಬಳಿಗೆ ಕರೆಸಿಕೊ” ಎಂದು ತೆಲುಗು ಭಾಷೆಯಲ್ಲಿ ಭಿನ್ನಹ ಮಾಡಿಕೊಳ್ಳಲಾಗಿತ್ತು.
స్వామీ.. మా అత్త చనిపోయేలా చూడు'.. దేవుడికి నోటుపై వినతి
— Telugu Feed (@Telugufeedsite) June 19, 2026
అనంతపురం జిల్లా ఆత్మకూరు మండలం పంపనూరు సుబ్రహ్మణ్యేశ్వర స్వామి ఆలయంలో వెలుగులోకి ఒక వింత ఘటన
ఆలయ హుండీని లెక్కించగా, ఓ రూ.20 నోటుపై 'స్వామీ.. మా అత్త వేధింపులు తట్టుకోలేకపోతున్నాను, ఆమె త్వరగా చనిపోయేలా చూడు' అని రాసి… pic.twitter.com/j1W7NAH3i9
ವೈರಲ್ ಆದ ಸುದ್ದಿ
ಕಾಣಿಕೆ ಎಣಿಸುವಾಗ ಎದುರಾದ ಈ ಅಭೂತಪೂರ್ವ ಬೇಡಿಕೆಯನ್ನು ಕಂಡು ಸ್ಥಳದಲ್ಲಿದ್ದ ಅಧಿಕಾರಿಗಳು ಹಾಗೂ ಭಕ್ತ ಮಹಾಶಯರು ದಿಗಿಲುಗೊಳ್ಳುವ ಜೊತೆಗೆ ನಗಲಾರಂಭಿಸಿದ್ದಾರೆ. ಸದ್ಯ ಈ ವಿಚಿತ್ರ ಬರಹವಿರುವ 20 ರೂಪಾಯಿ ಮುಖಬೆಲೆಯ ನೋಟಿನ ಚಿತ್ರಗಳು ಇಂಟರ್ನೆಟ್‌ನಲ್ಲಿ ತೀವ್ರ ಸಂಚಲನ ಸೃಷ್ಟಿಸುತ್ತಿದ್ದು, ವೈರಲ್ ಆಗುತ್ತಿವೆ. ಇದನ್ನು ನೋಡಿದ ನೆಟ್ಟಿಗರು ಸೊಸೆಯ ಅಸಹಾಯಕತೆಗೆ ಮರುಗುತ್ತಲೇ ತರಹೇವಾರಿ ಜೋಕ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅತ್ತೆ-ಸೊಸೆಯರ ಕದನ ಬೀದಿ ರಂಪಾಟವಾಗಿ ಕೋರ್ಟ್-ಕಚೇರಿ ತಲುಪುವುದನ್ನು ನೋಡಿದ್ದೆವು, ಆದರೆ ಹೀಗೆ ದೇವರ ಹುಂಡಿಯನ್ನೇ ಮಧ್ಯಸ್ಥಿಕೆಗೆ ಬಳಸಿಕೊಂಡಿರುವುದು ಇದೇ ಮೊದಲು ಎಂದು ಜನರು ಕಾಲೆಳೆಯುತ್ತಿದ್ದಾರೆ.
