ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಅಸ್ತಿತ್ವ ಹಾಗೂ ಆರ್ಥಿಕ ಪಾರದರ್ಶಕತೆಯನ್ನು ಪ್ರಶ್ನಿಸಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿರುವ ವಿಚಾರವಾಗಿ ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ (CT Ravi) ಆಕ್ರೋಶ ಹೊರಹಾಕಿದ್ದಾರೆ. ಸಚಿವರಿಗೆ ಆರ್‌ಎಸ್‌ಎಸ್ ಕಾರ್ಯಾಚರಣೆಯ ಬಗ್ಗೆ ನಿಜವಾದ ಕುತೂಹಲವಿದ್ದರೆ, ಪತ್ರ ಬರೆಯುವುದನ್ನು ಬಿಟ್ಟು ನೇರವಾಗಿ ಸಂಘದ ಶಾಖೆಗೆ ಬಂದು ವೀಕ್ಷಿಸಲಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.
ದಾಖಲೆಗಳು ಸರ್ಕಾರದ ಬಳಿಯೇ ಇವೆ, ಇಲಾಖೆ ಚೆಕ್ ಮಾಡಲಿ!
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, ಪ್ರಿಯಾಂಕ್ ಖರ್ಗೆ ಅವರು ವೈಯಕ್ತಿಕವಾಗಿ ಅಲ್ಲದೆ ಗೃಹ ಸಚಿವರ ಅಧಿಕೃತ ಜವಾಬ್ದಾರಿಯಲ್ಲಿ ಈ ಪತ್ರ ಬರೆದಿದ್ದಾರೆ ಎಂದಾದರೆ, ಅವರು ಕೇಳುತ್ತಿರುವ ಎಲ್ಲಾ ಪ್ರಶ್ನೆಗಳು ಮತ್ತು ಸಂಘದ ಇತಿಹಾಸದ ದಾಖಲೆಗಳು ಸ್ವತಃ ಸರ್ಕಾರಿ ಇಲಾಖೆಗಳಲ್ಲೇ ಇವೆ ಎಂದು ನೆನಪಿಸಿದರು. ಇತಿಹಾಸದ ಪುಟಗಳಲ್ಲಿ ಆರ್‌ಎಸ್‌ಎಸ್ ಅನ್ನು ಮೂರು ಬಾರಿ ನಿಷೇಧಕ್ಕೊಳಪಡಿಸಿದಾಗಲೂ, ಎರಡು ಬಾರಿ ನ್ಯಾಯಾಲಯಗಳೇ ಆ ನಿಷೇಧವನ್ನು ರದ್ದುಗೊಳಿಸಿದ್ದವು ಹಾಗೂ ಒಂದು ಬಾರಿ ಸರ್ಕಾರವೇ ಅದನ್ನು ಹಿಂಪಡೆದಿತ್ತು. ಹೀಗಾಗಿ ಸಚಿವರು ಎತ್ತುತ್ತಿರುವ ಕಾನೂನಾತ್ಮಕ ಗೊಂದಲಗಳಿಗೆ ಈಗಾಗಲೇ ಕೋರ್ಟ್ ಮತ್ತು ಸರ್ಕಾರದ ಮಟ್ಟದಲ್ಲಿ ಸ್ಪಷ್ಟ ಉತ್ತರ ಸಿಕ್ಕಿದೆ. ದೇಶದ ಸಂವಿಧಾನದಲ್ಲಿ ನೋಂದಣಿ ರಹಿತವಾಗಿಯೂ ಸಂಸ್ಥೆಗಳನ್ನು ನಡೆಸಲು ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ ಎಂದು ಅವರು ಪ್ರತಿಪಾದಿಸಿದರು.
ಆರ್‌ಎಸ್‌ಎಸ್ ವ್ಯಾಖ್ಯಾನಿಸಿದ ಸಿ.ಟಿ. ರವಿ; ನೋಂದಣಿ ಏಕೆ ಬೇಕಿಲ್ಲ?
ಸಂಘವು ಏಕೆ ರಿಜಿಸ್ಟರ್ ಆಗಿಲ್ಲ ಎಂಬ ಸಚಿವರ ಆಕ್ಷೇಪಕ್ಕೆ ಕೌಂಟರ್ ನೀಡಿದ ರವಿ, “ಯಾವುದೇ ಒಂದು ಸಂಸ್ಥೆಯು ಸಾರ್ವಜನಿಕ ನಿಧಿ ಅಥವಾ ಆರ್ಥಿಕ ಸಹಾಯ ಪಡೆಯುತ್ತಿದ್ದರೆ, ಇಲ್ಲವೇ ಅದೊಂದು ಸೊಸೈಟಿ, ಟ್ರಸ್ಟ್ ಅಥವಾ ರಾಜಕೀಯ ಪಕ್ಷದ ಚೌಕಟ್ಟಿನಲ್ಲಿದ್ದರೆ ಮಾತ್ರ ನೋಂದಣಿ ಮಾಡಿಸುವುದು ಕಡ್ಡಾಯ. ಆದರೆ ಆರ್‌ಎಸ್‌ಎಸ್ ಯಾವುದೇ ಕಂಪನಿ ಅಥವಾ ಟ್ರಸ್ಟ್ ಅಲ್ಲ. ಅದು ಕೇವಲ ನಾಗರಿಕರಲ್ಲಿ ದೇಶಪ್ರೇಮದ ಮೌಲ್ಯಗಳನ್ನು ಬಿತ್ತುವ ಒಂದು ವೈಚಾರಿಕ ಆಂದೋಲನ. ಹೀಗಾಗಿ ಇದನ್ನು ಪ್ರತ್ಯೇಕವಾಗಿ ನೋಂದಣಿ ಮಾಡುವ ಅಗತ್ಯವೇ ಬಾರದು” ಎಂದು ತಾಂತ್ರಿಕ ವಿವರಣೆ ನೀಡಿದರು.
ರಾಜಕೀಯ ಅಹಂ ಬಿಟ್ಟು ಮುಕ್ತ ಮನಸ್ಸಿನಿಂದ ಬನ್ನಿ
ಸಂಘದ ಸ್ಥಾಪನೆಯಾದ ದಿನದಿಂದಲೂ ಅಂದರೆ ಕಳೆದ ನೂರು ವರ್ಷಗಳಿಂದ ಅದರ ವಿರುದ್ಧ ಅಪಪ್ರಚಾರದ ವ್ಯವಸ್ಥಿತ ಪಿತೂರಿ ನಡೆಯುತ್ತಲೇ ಇದೆ ಎಂದು ದೂರಿದ ಸಿ.ಟಿ. ರವಿ, ದ್ವೇಷದ ಕನ್ನಡಕ ಧರಿಸಿ ನೋಡುವವರಿಗೆ ಸಂಘದ ರಾಷ್ಟ್ರ ನಿರ್ಮಾಣ ಕಾರ್ಯಗಳು ಎಂದಿಗೂ ಕಾಣಿಸುವುದಿಲ್ಲ ಎಂದರು. “ಸಂಘದ ಶಾಖೆಗೆ ಬಂದು ಕುಳಿತುಕೊಂಡರೆ ತಮ್ಮ ರಾಜಕೀಯ ಅಹಂಕಾರಕ್ಕೆ ದೆಬ್ಬೆ ಬೀಳಬಹುದು ಎಂದು ಪ್ರಿಯಾಂಕ್ ಖರ್ಗೆ ಹೆದರುತ್ತಿರಬಹುದು. ಆದರೆ ಶಾಖೆಯ ಒಳಗೆ ಬಂದರೆ ಅಂತಹ ಅಹಂ ಭಾವ ತಾನಾಗಿಯೇ ಕರಗಿ ಹೋಗುತ್ತದೆ. ಅಲ್ಲಿ ಹಾಡುವ ದೇಶಭಕ್ತಿ ಗೀತೆಗಳು ಮತ್ತು ಅಮೃತ ವಚನಗಳನ್ನು ಒಮ್ಮೆಯಾದರೂ ಮುಕ್ತ ಮನಸ್ಸಿನಿಂದ ಆಲಿಸಿ ಸಂಘವನ್ನು ಅರ್ಥೈಸಿಕೊಳ್ಳಲಿ” ಎಂದು ಲೇವಡಿ ಮಾಡಿದರು. ಈಗಾಗಲೇ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೇ ನೋಂದಣಿ ವಿಚಾರವಾಗಿ ಸೂಕ್ತ ಸಮಜಾಯಿಷಿ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ ಸಿ.ಟಿ. ರವಿ, ಸಚಿವರು ಪೂರ್ವಾಗ್ರಹ ಬಿಟ್ಟು ಯೋಚಿಸಲಿ ಎಂದು ಕಿವಿಮಾತು ಹೇಳಿದರು.
“ರಾಮನ ಹೆಸರಲ್ಲಿ ರಾಜಕೀಯ ಮಾಡುವವರು ಲೆಕ್ಕ ಕೊಡಲ್ವಾ?”: ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಮತ್ತೊಂದು ಸವಾಲು!
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನೋಂದಣಿ ಪ್ರಕ್ರಿಯೆ ಹಾಗೂ ಹಣಕಾಸು ವ್ಯವಹಾರಗಳ ಪಾರದರ್ಶಕತೆಯನ್ನು ಪ್ರಶ್ನಿಸಿ ತಾವು ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಬರೆದಿರುವ ಪತ್ರದ ವಿಚಾರವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ವಾಗ್ದಾಳಿ ಮುಂದುವರಿಸಿದ್ದಾರೆ. ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೆಸ್‌ಮೀಟ್‌ನಲ್ಲಿ ತಮ್ಮ ಪತ್ರದ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ಬಿಜೆಪಿ ನಾಯಕರಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿರುವ ಅವರು, “ಅಯೋಧ್ಯೆ ರಾಮಮಂದಿರದ ದೇಣಿಗೆಯಲ್ಲಿ ಅವ್ಯವಹಾರದ ಆರೋಪ ಕೇಳಿಬಂದಾಗ ನಮ್ಮ ದೇಶದಲ್ಲಿ ಸಾಕ್ಷಾತ್ ಶ್ರೀರಾಮನೇ ಲೆಕ್ಕ ಒಪ್ಪಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಾಗಿರುವಾಗ ದೇವರ ಹೆಸರನ್ನೇ ಮುಂದಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ನಾಯಕರು ದೇಶದ ಕಾನೂನಿಗೆ ಉತ್ತರದಾಯಿತ್ವ ಹೊಂದಲು ಯಾಕೆ ಹಿಂಜರಿಯುತ್ತಿದ್ದಾರೆ?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ.
ಸಾರ್ವಜನಿಕ ಸಂಸ್ಥೆಗಳ ಚಟುವಟಿಕೆಗೆ ನೋಂದಣಿ ಕಡ್ಡಾಯವಾಗಿರಬೇಕು
ತಮ್ಮ ನಡೆಯನ್ನು ಆಕ್ಷೇಪಿಸುತ್ತಿರುವ ಕೇಸರಿ ಪಡೆಯ ನಾಯಕರನ್ನು “ಸಂಘದ ಆಳುಮಕ್ಕಳು” ಎಂದು ಕಟುವಾಗಿ ಜರೆದಿರುವ ಸಚಿವರು, ಸಂಘವನ್ನು ರಕ್ಷಿಸಲು ಬಿಜೆಪಿ ನಾಯಕರು ಮುಗಿಬೀಳುತ್ತಿರುವುದು ಹೊಸದೇನಲ್ಲ ಎಂದರು. “ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವ ದೊಡ್ಡ ಸಂಸ್ಥೆಯೊಂದರಲ್ಲಿ ಪಾರದರ್ಶಕತೆ ಇರಬೇಕು ಎಂದು ಅಪೇಕ್ಷಿಸುವುದು ಅಪರಾಧವೇ? ನೆಲದ ಕಾನೂನಿಗೆ ವಿರುದ್ಧವಾಗಿ ನಾನೇನು ಕೇಳಿಲ್ಲ” ಎಂದು ಸಮರ್ಥಿಸಿಕೊಂಡರು. ಆರ್‌ಎಸ್‌ಎಸ್‌ನದ್ದೇ ಉನ್ನತ ಮಟ್ಟದ ಸಮಿತಿಯಾದ ಅಖಿಲ ಭಾರತ ಪ್ರತಿನಿಧಿ ಸಭೆಯ ವರದಿಗಳನ್ನು ಉಲ್ಲೇಖಿಸಿ, ರಾಜ್ಯದ ಮೂಲೆ ಮೂಲೆಗಳಲ್ಲಿ ನಿತ್ಯ ಸಾವಿರಾರು ಶಾಖೆಗಳು ನಡೆಯುತ್ತಿವೆ ಮತ್ತು ಸಾರ್ವಜನಿಕವಾಗಿ ಪಥಸಂಚಲನಗಳನ್ನು ಆಯೋಜಿಸಲಾಗುತ್ತಿದೆ. ಹೈಕೋರ್ಟ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಇಂತಹ ಬೃಹತ್ ಕಾರ್ಯಕ್ರಮಗಳನ್ನು ಮಾಡುವಾಗ ಜವಾಬ್ದಾರಿಯುತ ಸ್ಥಾನದಲ್ಲಿರುವ ಸರ್ಕಾರ ಮೂಕಪ್ರೇಕ್ಷಕನಾಗಿರಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕಾನೂನಿನ ಮುಖವಾಡ ಕಳಚಲಿ; ಧರ್ಮದ ಹೆಸರಿನಲ್ಲಿ ಜಾರಿಕೊಳ್ಳಬೇಡಿ
ಯಾವುದೇ ಸಿದ್ಧಾಂತ ಅಥವಾ ಧರ್ಮದ ಹಿನ್ನೆಲೆಯುಳ್ಳ ಸಂಸ್ಥೆಯಾಗಿದ್ದರೂ ಭಾರತದ ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲೇ ಕಾರ್ಯಾಚರಣೆ ನಡೆಸಬೇಕು ಎಂದ ಖರ್ಗೆ, ಸಾರ್ವಜನಿಕವಾಗಿ ಜನಾಂದೋಲನ ರೂಪಿಸುವಾಗ ಪೊಲೀಸರ ಪೂರ್ವಾನುಮತಿ ಪಡೆಯುವುದು ಸಂಘಕ್ಕೂ ಅನ್ವಯಿಸುತ್ತದೆ ಎಂದರು. “ಸಂಘಟನೆಯ ಆಡಳಿತ ಮಂಡಳಿಯಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ಕನಿಷ್ಠ ವಿವರಗಳು ಆಡಳಿತ ವ್ಯವಸ್ಥೆಗೆ ಸಿಗಬಾರದೇ? ಅವರು ಸಂಗ್ರಹಿಸುತ್ತಿರುವ ಕೋಟ್ಯಂತರ ರೂಪಾಯಿ ನಿಧಿ ಎಲ್ಲಿಗೆ ತಲುಪುತ್ತಿದೆ? ಕೇವಲ ಕೋರ್ಟ್ ಕಚೇರಿಗಳ ಕಾನೂನು ಹೋರಾಟಕ್ಕಾಗಿಯೇ ಸಂಘವು ಬರೋಬ್ಬರಿ ಮೂರು ಕೋಟಿ ರೂಪಾಯಿ ವೆಚ್ಚ ಮಾಡಿದೆ ಮತ್ತು ಪ್ರಮುಖ ನಾಯಕರು ವಿದೇಶಿ ಪ್ರವಾಸಗಳನ್ನು ಕೈಗೊಳ್ಳುತ್ತಿದ್ದಾರೆ. ಈ ಎಲ್ಲಾ ಸರಣಿ ಚಟುವಟಿಕೆಗಳಿಗೆ ಇಷ್ಟೊಂದು ಅಗಾಧ ಪ್ರಮಾಣದ ಧನಸಹಾಯ ಎಲ್ಲಿಂದ ಲಭ್ಯವಾಗುತ್ತಿದೆ ಎಂಬುದನ್ನು ಸಾರ್ವಜನಿಕಗೊಳಿಸಲಿ” ಎಂದು ಆಗ್ರಹಿಸಿದರು.
ದೇಶದಲ್ಲಿ ಅತ್ಯಂತ ಕೆಳಹಂತದಲ್ಲಿ ಕೆಲಸ ಮಾಡುವ ಸಫಾಯಿ ಕರ್ಮಚಾರಿಗಳ ಸಂಘಗಳಿಗೂ ಅಧಿಕೃತ ನೋಂದಣಿ ಸಂಖ್ಯೆ ಅತ್ಯಗತ್ಯವಾಗಿರುವಾಗ, ದೇಶದ ಅತಿ ದೊಡ್ಡ ಸಂಸ್ಥೆಗೆ ಈ ನಿಯಮ ಬೇಡವೇ ಎಂದು ಸಚಿವರು ಚುಚ್ಚಿದ್ದಾರೆ. “ಬಿಜೆಪಿ ನಾಯಕರು ಪ್ರತಿಯೊಂದು ಆಡಳಿತಾತ್ಮಕ ಪ್ರಶ್ನೆಗೂ ಧರ್ಮದ ಬಣ್ಣ ಬಳಿಯುತ್ತಾರೆ. ನಾನು ಬರೆದಿರುವ ಪತ್ರದ ಯಾವುದೇ ಸಾಲಿನಲ್ಲಿ ‘ಹಿಂದೂ’ ಎಂಬ ಪದ ಬಳಕೆಯಾಗಿದ್ದರೆ ತೋರಿಸಲಿ. ನಾನು ಧರ್ಮದ ನೋಂದಣಿ ಕೇಳುತ್ತಿಲ್ಲ, ಸಂಘಟನೆಯ ಅಧಿಕೃತ ದಾಖಲೆಗಳನ್ನು ಕೇಳುತ್ತಿದ್ದೇನೆ” ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಜೂನ್ 13 ರಂದು ತ್ರಿಶೂರ್‌ನಲ್ಲಿ ಮೋಹನ್ ಭಾಗವತ್ ನೀಡಿದ ಹಳೆಯ ಹೇಳಿಕೆಯನ್ನು ತಮ್ಮ ಪತ್ರಕ್ಕೆ ನೀಡಿದ ಕೌಂಟರ್ ಎಂದು ಬಿಂಬಿಸುತ್ತಿರುವುದನ್ನು ತಳ್ಳಿಹಾಕಿದ ಖರ್ಗೆ, ತಾವು ಜೂನ್ 15 ರಂದು ಪತ್ರ ಬಿಡುಗಡೆ ಮಾಡಿರುವುದರಿಂದ ಅದಕ್ಕೂ ಮುನ್ನ ಬಂದ ಹೇಳಿಕೆ ಉತ್ತರವಾಗಲು ಸಾಧ್ಯವಿಲ್ಲ. ಹೀಗಾಗಿ ಮೋಹನ್ ಭಾಗವತ್ ಅವರೇ ನೇರವಾಗಿ ತಮ್ಮ ಪ್ರಶ್ನೆಗಳಿಗೆ ಅಧಿಕೃತವಾಗಿ ಪ್ರತಿಕ್ರಿಯಿಸಲಿ ಎಂದು ಸವಾಲು ಹಾಕಿದರು.
ಚುನಾವಣಾ ಆಯೋಗದ ನಿಯಮಗಳ ಅಡಿಯಲ್ಲಿ ತಮಗೆ ಬೇಕಾದ ದಾಖಲೆ ಪತ್ರಗಳನ್ನು ನೀಡಲು ಸದಾ ಮುಂಚೂಣಿಯಲ್ಲಿ ನಿಲ್ಲುವ ಸಂಘಟನೆಯ ನಾಯಕರು, ಈಗ ತಮ್ಮದೇ ಸಂಸ್ಥೆಯ ಅಧಿಕೃತ ನೋಂದಣಿ ದಾಖಲೆಗಳನ್ನು ಕೇಳಿದರೆ ಉತ್ತರ ನೀಡಲು ಹೆಣಗಾಡುತ್ತಿದ್ದಾರೆ ಎಂದು ಖರ್ಗೆ ಲೇವಡಿ ಮಾಡಿದರು. “ನಾನು ಪತ್ರ ಬರೆದಿರುವುದು ಆರ್‌ಎಸ್‌ಎಸ್ ಸುಪ್ರೀಮೋ ಅವರಿಗೆ. ಆದರೆ ಅದಕ್ಕೆ ಉತ್ತರ ನೀಡಲು ಧಾವಿಸುತ್ತಿರುವುದು ಮಾತ್ರ ಬಿಜೆಪಿಯ ನಾಯಕರು. ಆರ್‌ಎಸ್‌ಎಸ್ ತಾನು ರಾಜಕೀಯದಿಂದ ದೂರವಿರುವ ಸ್ವತಂತ್ರ ಸಂಸ್ಥೆ ಎಂದು ಹೇಳಿಕೊಳ್ಳುತ್ತಿರುವಾಗ, ಬಿಜೆಪಿಯವರು ಯಾಕೆ ಇಷ್ಟೊಂದು ತಲೆಕೆಡಿಸಿಕೊಂಡು ವಕಾಲತ್ತು ವಹಿಸುತ್ತಿದ್ದಾರೆ?” ಎಂದು ಕೇಳುವ ಮೂಲಕ ಇಬ್ಬರ ನಡುವಿನ ಆಂತರಿಕ ಸಂಬಂಧವನ್ನು ಪ್ರಶ್ನಿಸಿದರು. ತಾವು ಸಂಘದ ಸಾಂಸ್ಕೃತಿಕ ಚಟುವಟಿಕೆಗಳ ವಿರೋಧಿಯಲ್ಲ ಮತ್ತು ಯಾವುದಕ್ಕೂ ಅಡ್ಡಿಪಡಿಸುವುದಿಲ್ಲ, ಆದರೆ ನೆಲದ ಕಾನೂನು ಎಲ್ಲರಿಗೂ ಒಂದೇ ಆಗಿರುತ್ತದೆ ಎಂದರು.
ಸಂವಿಧಾನದ ಚೌಕಟ್ಟಿನಲ್ಲಿ ಹಾಗೂ ಪಾರದರ್ಶಕವಾಗಿ ಆರ್‌ಎಸ್‌ಎಸ್ ಯಾವುದೇ ಕೆಲಸ ಮಾಡಿದರೂ ತಮ್ಮದೇನು ಅಭ್ಯಂತರವಿಲ್ಲ ಎಂದ ಸಚಿವರು, ದೇಶದಲ್ಲಿ ಸಾರ್ವಜನಿಕ ಚಟುವಟಿಕೆ ನಡೆಸುವ ಪ್ರತಿಯೊಂದು ಸಂಸ್ಥೆಯೂ ಕಡ್ಡಾಯವಾಗಿ ನೋಂದಣಿಯಾಗಲೇಬೇಕು ಎನ್ನುವುದು ನಿಯಮ ಎಂದರು. ತಮಗೆ ಆದಾಯ ತೆರಿಗೆ ಪಾವತಿಯಿಂದ ವಿನಾಯಿತಿ ಸಿಕ್ಕಿದೆ ಎಂದು ಹೇಳಿಕೊಳ್ಳುವ ಆರ್‌ಎಸ್‌ಎಸ್, ಯಾವ ಕಾನೂನಿನ ಅಡಿಯಲ್ಲಿ ತಮಗೆ ಇಂತಹ ಸಂಪೂರ್ಣ ವಿನಾಯಿತಿ (ಬ್ಲಾಂಕೆಟ್ ಇಮ್ಯುನಿಟಿ) ನೀಡಲಾಗಿದೆ ಎಂಬುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು. ಕಾಂಗ್ರೆಸ್ ಪಕ್ಷಕ್ಕೆ 140 ವರ್ಷಗಳ ಇತಿಹಾಸವಿದೆ ಎಂಬ ಕಾರಣಕ್ಕೆ ತಮಗೂ ತೆರಿಗೆ ವಿನಾಯಿತಿ ಕೊಡಿ ಎಂದರೆ ದೇಶದ ಕಾನೂನು ಒಪ್ಪುತ್ತದೆಯೇ ಎಂದು ಅವರು ಪ್ರಶ್ನಿಸಿದರು. ಕೊನೆಯದಾಗಿ, ಜೂನ್ 13 ರಂದು ತ್ರಿಶೂರ್‌ನಲ್ಲಿ ಮೋಹನ್ ಭಾಗವತ್ ನೀಡಿದ ಹೇಳಿಕೆಗಳು ಈ ಹಿಂದೆ ಚಿತ್ತಾಪುರದಲ್ಲಿ ಪಥ ಸಂಚಲನಕ್ಕೆ ಅನುಮತಿ ಸಿಗದಿದ್ದ ಸಂದರ್ಭಕ್ಕೆ ನೀಡಿದ ಹಳೆಯ ಪ್ರತಿಕ್ರಿಯೆಯಾಗಿದೆ. ತಾವು ಜೂನ್ 15 ರಂದು ಅಧಿಕೃತವಾಗಿ ಬಹಿರಂಗಪಡಿಸಿದ ಪತ್ರಕ್ಕೆ ಆರ್‌ಎಸ್‌ಎಸ್ ಕಡೆಯಿಂದ ಇನ್ನೂ ಯಾವುದೇ ನೇರ ಉತ್ತರ ಬಂದಿಲ್ಲ ಎಂದು ಸ್ಪಷ್ಟಪಡಿಸಿದ ಖರ್ಗೆ, ಈ ವಿಷಯದ ಕುರಿತು ಕಾನೂನಾತ್ಮಕವಾಗಿ ಚರ್ಚೆ ನಡೆಸಲು ಒಬ್ಬ ಪ್ರತಿನಿಧಿಯನ್ನು ನೇಮಿಸುವಂತೆ ಆರ್‌ಎಸ್‌ಎಸ್ ಮುಖ್ಯಸ್ಥರಿಗೆ ಮನವಿ ಮಾಡಿದ್ದಾರೆ.
