ತಿರುವನಂತಪುರಂ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಾನೂನಾತ್ಮಕ ಸ್ಥಾನಮಾನ ಹಾಗೂ ನೋಂದಣಿ ಪ್ರಕ್ರಿಯೆಯನ್ನು ಪ್ರಶ್ನಿಸಿ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬರೆದಿದ್ದ ಕಠಿಣ ಪತ್ರಕ್ಕೆ ಸಂಘದ ಮುಖ್ಯಸ್ಥ (ಸರಸಂಘಚಾಲಕ) ಮೋಹನ್ ಭಾಗವತ್ ಅವರು ಕೇರಳದ ಮಣ್ಣಿನಿಂದಲೇ ನೇರ ತಿರುಗೇಟು ನೀಡಿದ್ದಾರೆ. ಕೇರಳದಲ್ಲಿ ಆಯೋಜನೆಯಾಗಿದ್ದ ಸಂಘದ ಅಧಿಕೃತ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ಇಂತಹ ರಾಜಕೀಯ ಪ್ರೇರಿತ ಪ್ರಶ್ನೆಗಳಿಗೆ ಉತ್ತರಿಸುವ ಯಾವುದೇ ಅನಿವಾರ್ಯತೆ ನಮಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಬೂಟಾಟಿಕೆ
ಕಾಂಗ್ರೆಸ್ ಸರ್ಕಾರದ ನಡೆ ಸಂಪೂರ್ಣ ರಾಜಕೀಯ ಹಿತಾಸಕ್ತಿಯಿಂದ ಕೂಡಿದೆ ಎಂದು ವಾಗ್ದಾಳಿ ನಡೆಸಿದ ಮೋಹನ್ ಭಾಗವತ್, “ಸಂಘ ಸ್ಥಾಪನೆಯಾದ ಆರಂಭದ 10-15 ವರ್ಷಗಳಲ್ಲೇ ಇಂತಹ ಹತ್ತಾರು ಪ್ರಶ್ನೆಗಳು ಮತ್ತು ಸವಾಲುಗಳು ಎದುರಾಗಿದ್ದವು. ಅವೆಲ್ಲವನ್ನೂ ನಾವು ಯಶಸ್ವಿಯಾಗಿ ದಾಟಿ ಬಂದಿದ್ದೇವೆ. ಪ್ರಸ್ತುತ ಕೇವಲ ರಾಜಕೀಯ ಮೈಲೇಜ್ ಪಡೆಯಲು ಹಾಗೂ ಸಾರ್ವಜನಿಕರಲ್ಲಿ ಸಂಘದ ಇಮೇಜ್ಗೆ ಧಕ್ಕೆ ತಂದು ಅನಗತ್ಯ ಅನುಮಾನ ಮೂಡಿಸುವ ಏಕೈಕ ಉದ್ದೇಶದಿಂದ ಇಂತಹ ಪತ್ರಗಳನ್ನು ಬರೆಯಲಾಗುತ್ತಿದೆ. ಹೀಗಾಗಿ ಇಂತಹ ಪ್ರಶ್ನೆಗಳಿಗೆಲ್ಲ ತಲೆಕೆಡಿಸಿಕೊಳ್ಳುವ ಅಗತ್ಯ ನಮಗಿಲ್ಲ” ಎಂದು ಕಿಡಿಕಾರಿದ್ದಾರೆ.
ಅನುದಾನ ಬೇಕಿರುವವರು ನೋಂದಣಿ ಮಾಡಿಸಲಿ; ಆರ್ಎಸ್ಎಸ್ಗೆ ಹಣದ ಹಂಗಿಲ್ಲ!
ಸಂಘವು ಏಕೆ ಇಷ್ಟು ವರ್ಷವಾದ್ರೂ ನೋಂದಣಿ ಮಾಡಿಸಿಕೊಂಡಿಲ್ಲ ಎಂಬ ಚರ್ಚೆಗೆ ತಾಂತ್ರಿಕ ವಿವರಣೆ ನೀಡಿದ ಭಾಗವತ್, “ಆರ್ಎಸ್ಎಸ್ ಬ್ರಿಟಿಷರ ಆಡಳಿತದ ಕಾಲದಲ್ಲೇ ಆರಂಭವಾದ ಸಂಘಟನೆ. ನಮ್ಮ ದೇಶದ ಕಾನೂನಿನಲ್ಲಿ ಸಂಘದ ಚಟುವಟಿಕೆಗಳಿಗೆ ಯಾವುದೇ ರೀತಿಯ ಸಾಂವಿಧಾನಿಕ ನಿರ್ಬಂಧಗಳಿಲ್ಲ. ಮೂಲತಃ ಇಡೀ ಹಿಂದೂ ಧರ್ಮವೇ ಎಲ್ಲೂ ರಿಜಿಸ್ಟರ್ ಆಗಿಲ್ಲ. ಸಮಾಜದ ಉದಾತ್ತ ವಿಚಾರಗಳು ಮತ್ತು ಜನಕಲ್ಯಾಣದ ವ್ಯವಸ್ಥೆಗಳು ಕಾಗದದ ಮೇಲೆ ನೋಂದಣಿಯಾಗಬೇಕಾದ ಅನಿವಾರ್ಯತೆ ಇಲ್ಲ. ಸಾಮಾನ್ಯವಾಗಿ ಸರ್ಕಾರದ ಹಣ ಅಥವಾ ಅನುದಾನದ ನಿರೀಕ್ಷೆಯಲ್ಲಿರುವ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳುತ್ತವೆ. ಆದರೆ ಆರ್ಎಸ್ಎಸ್ಗೆ ಸರ್ಕಾರದ ಯಾವುದೇ ಆರ್ಥಿಕ ಸಹಾಯದ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.
ಶತಮಾನದ ಇತಿಹಾಸದಲ್ಲಿ ಯಾರೂ ಕೇಳದ ಪ್ರಶ್ನೆ ಈಗೇಕೆ?
ದೇಶದಲ್ಲಿ ಆರ್ಎಸ್ಎಸ್ ಅಸ್ತಿತ್ವದಲ್ಲಿದೆ ಎಂಬುದು ಸ್ವತಃ ಸರ್ಕಾರಗಳಿಗೂ ಚೆನ್ನಾಗಿ ತಿಳಿದಿದೆ ಎಂದ ಅವರು, “ಹಿಂದೆ ರಾಜಕೀಯ ದ್ವೇಷದ ಕಾರಣಕ್ಕಾಗಿಯೇ ಸರ್ಕಾರಗಳು ಎರಡು ಬಾರಿ ಸಂಘವನ್ನು ನಿಷೇಧಿಸಿದ್ದವು. ಆದರೆ ಕಳೆದ ನೂರು ವರ್ಷಗಳ ಸುದೀರ್ಘ ಇತಿಹಾಸದಲ್ಲಿ ದೇಶವನ್ನಾಳಿದ ಯಾವುದೇ ಸರ್ಕಾರ ಅಥವಾ ನಾಯಕರು ಆರ್ಎಸ್ಎಸ್ ಅನ್ನು ಅಧಿಕೃತವಾಗಿ ರಿಜಿಸ್ಟರ್ ಮಾಡಲೇಬೇಕು ಎಂದು ನಿಯಮ ಜಾರಿಗೆ ತಂದಿರಲಿಲ್ಲ” ಎಂದು ನೆನಪಿಸಿದರು.
ನಮ್ಮದು ಮುಚ್ಚಿಡುವ ಬದುಕಲ್ಲ, ಜನರ ಮುಂದಿರುವ ಶಾಖೆಗಳು
ಸಂಘದ ಪಾರದರ್ಶಕತೆ ಮತ್ತು ಗೌಪ್ಯತೆಯನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕರಿಗೆ ಕಟು ಶಬ್ದಗಳಲ್ಲಿ ಉತ್ತರಿಸಿದ ಅವರು, “ನಮ್ಮ ಸ್ವಯಂಸೇವಕರು ಯಾರೂ ರಹಸ್ಯ ಜಾಗದಲ್ಲಿ ಅಡಗಿ ಕುಳಿತಿಲ್ಲ. ಅವರು ಸ್ಥಳೀಯವಾಗಿ ಸಾರ್ವಜನಿಕರ ಮಧ್ಯೆಯೇ ಬದುಕುತ್ತಿದ್ದಾರೆ. ಸಂಘದ ಕಾರ್ಯಕರ್ತರು ಪ್ರತಿದಿನ ಮುಂಜಾನೆ ಮೈದಾನಗಳಲ್ಲಿ ಶಾಖೆಗಳನ್ನು ನಡೆಸುವುದು ಇಡೀ ದೇಶಕ್ಕೇ ಕಾಣುತ್ತದೆ. ನಮ್ಮ ಎಲ್ಲಾ ಕಾರ್ಯಕ್ರಮಗಳು ಅತ್ಯಂತ ಬಹಿರಂಗವಾಗಿ ಮತ್ತು ಪಾರದರ್ಶಕವಾಗಿ ನಡೆಯುವುದರಿಂದ, ಇಲ್ಲಿ ಏನನ್ನೂ ಮುಚ್ಚಿಡುವ ಪ್ರಶ್ನೆಯೇ ಬರುವುದಿಲ್ಲ” ಎಂದು ಹೇಳುವ ಮೂಲಕ ಪ್ರಿಯಾಂಕ್ ಖರ್ಗೆ ಅವರ ಪ್ರಶ್ನೆಗಳಿಗೆ ತಣ್ಣೀರೆರಚಿದ್ದಾರೆ.
ಇದನ್ನೂ ಓದಿ: ನೀಟ್ ಮರುಪರೀಕ್ಷೆ ಪ್ರಶ್ನೆಪತ್ರಿಕೆ ಹೆಸರಲ್ಲಿ ಭಾರಿ ವಂಚನೆ: ಸೈಬರ್ ಕಿಲಾಡಿಗಳ ಬಂಧನ
