ಬಾಗಲಕೋಟೆ: ಅಮಾಯಕರನ್ನು ಹೆದರಿಸಿ ಆನ್‌ಲೈನ್ ಮೂಲಕವೇ ಕೋಟ್ಯಾಂತರ ರೂಪಾಯಿ ಲೂಟಿ ಮಾಡುವ ಅಂತರರಾಜ್ಯ ಸೈಬರ್ ವಂಚಕರ (Cyber Crime) ಜಾಲಕ್ಕೆ ಬಾಗಲಕೋಟೆಯ ಹಿರಿಯ ಸರ್ಕಾರಿ ನೌಕರರೊಬ್ಬರು ಬಲಿಯಾಗಿದ್ದಾರೆ. ಮುಂಬೈ ಪೊಲೀಸರ ಹೆಸರಿನಲ್ಲಿ ದಿನಗಟ್ಟಲೆ ‘ಡಿಜಿಟಲ್ ಅರೆಸ್ಟ್’ ಭೀತಿಯಲ್ಲಿಟ್ಟು, ಅವರ ಜೀವಮಾನದ ದುಡಿಮೆಯಾದ ಬರೋಬ್ಬರಿ 83.82 ಲಕ್ಷ ರೂಪಾಯಿಯನ್ನು ದೋಚಲಾಗಿದೆ. ಇಲ್ಲಿನ ಯುಕೆಪಿ (UKP) ಪುನರ್ವಸತಿ ವಿಭಾಗದ ಕಚೇರಿಯಲ್ಲಿ ಹಿರಿಯ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿರುವ 59 ವರ್ಷದ ಎಚ್.ವಿ. ಸುರೇಶ್ ರಾವ್ ಎಂಬುವವರೇ ಈ ಭೀಕರ ವಂಚನೆಗೆ ತುತ್ತಾದ ದುರ್ದೈವಿಯಾಗಿದ್ದಾರೆ.
ಏನಿದು ಘಟನೆ?
ಕೆಲ ದಿನಗಳ ಹಿಂದೆ ಸುರೇಶ್ ರಾವ್ ಅವರಿಗೆ ಅನಾಮಧೇಯ ನಂಬರ್‌ನಿಂದ ಕರೆಯೊಂದು ಬಂದಿತ್ತು. ತಾವೂ ಟೆಲಿಕಾಂ ಅಥಾರಿಟಿ (TRAI) ಅಧಿಕಾರಿಗಳೆಂದು ಪರಿಚಯಿಸಿಕೊಂಡ ವಂಚಕರು, “ನಿಮ್ಮ ಆಧಾರ್ ಕಾರ್ಡ್ ನಂಬರ್ ಬಳಸಿ ಪಡೆದಿರುವ ಸಿಮ್ ಕಾರ್ಡ್ ಒಂದರ ಮೂಲಕ ದೇಶವಿರೋಧಿ ಸಂದೇಶಗಳನ್ನು ಹರಡಲಾಗಿದೆ. ಈ ದೂರಿಗೆ ಸಂಬಂಧಿಸಿದಂತೆ ಮುಂಬೈ ಕ್ರೈಂ ಬ್ರಾಂಚ್ ನಿಮ್ಮ ಮೇಲೆ ಎಫ್‌ಐಆರ್ ದಾಖಲಿಸಿದ್ದು, ಯಾವುದೇ ಕ್ಷಣದಲ್ಲಿ ಅರೆಸ್ಟ್ ಮಾಡಲು ವಾರೆಂಟ್ ಹೊರಡಿಸಲಾಗಿದೆ” ಎಂದು ಸುಳ್ಳು ಕಥೆ ಕಟ್ಟಿ ಇಡೀ ಕುಟುಂಬವನ್ನೇ ನಡುಗುವಂತೆ ಮಾಡಿದ್ದಾರೆ.
ಇದಾದ ಬೆನ್ನಲ್ಲೇ ಸಂತ್ರಸ್ತರನ್ನು ಸಂಪೂರ್ಣವಾಗಿ ತಮ್ಮ ಹತೋಟಿಗೆ ತೆಗೆದುಕೊಳ್ಳಲು ವಂಚಕರು ವಿಡಿಯೋ ಕಾಲ್ ಮಾಡಿದ್ದಾರೆ. ಈ ಕರೆಯಲ್ಲಿ ಕಳ್ಳರ ಹೈಟೆಕ್ ನಾಟಕದ ಪರಮಾವಧಿಯೇ ಅನಾವರಣಗೊಂಡಿದೆ. ನೈಜ ಪೊಲೀಸ್ ಠಾಣೆ, ಬ್ಯಾಂಕ್ ಕಚೇರಿ ಹಾಗೂ ನ್ಯಾಯಾಲಯದ ಆವರಣವನ್ನು ಹೋಲುವಂತಹ ಕೃತಕ ಸೆಟಪ್ (ಹಿನ್ನೆಲೆ) ಅನ್ನು ವಂಚಕರು ಸೃಷ್ಟಿಸಿಕೊಂಡಿದ್ದರು. ಅಷ್ಟೇ ಅಲ್ಲದೆ, ವಿಡಿಯೋ ಕಾಲ್‌ನಲ್ಲಿ ಖಾಕಿ ಉಡುಪು ಧರಿಸಿದ ನಕಲಿ ಪೊಲೀಸರು ಹಾಗೂ ಜಡ್ಜ್ ವೇಷದಲ್ಲಿದ್ದ ಖದೀಮರು ಸುರೇಶ್ ರಾವ್ ಅವರನ್ನು ಗಂಟೆಗಟ್ಟಲೆ ಕ್ಯಾಮೆರಾ ಮುಂದೆ ಕೂರಿಸಿಕೊಂಡು ತನಿಖೆಯ ನಾಟಕವಾಡಿ ತೀವ್ರ ಮಾನಸಿಕ ಹಿಂಸೆ ನೀಡಿದ್ದಾರೆ.
ಈ ಕೃತಕ ತನಿಖೆಯ ನಡುವೆ ನೌಕರನಿಗೆ ಮತ್ತಷ್ಟು ಶಾಕ್ ನೀಡಿದ ವಂಚಕರು, “ಜೆಟ್ ಏರ್‌ವೇಸ್‌ನ ಮಾಜಿ ಉದ್ಯಮಿ ನರೇಶ್ ಗೋಯಲ್ ಅವರ ಬಹುಕೋಟಿ ಮನಿ ಲಾಂಡರಿಂಗ್ ಹಗರಣಕ್ಕೂ ನಿಮಗೂ ಲಿಂಕ್ ಇದೆ. ಮುಂಬೈನ ಕೆನರಾ ಬ್ಯಾಂಕ್ ಮೂಲಕ ನಿಮ್ಮ ಖಾತೆಯಿಂದ ಅಕ್ರಮ ಹಣ ವರ್ಗಾವಣೆಯಾಗಿದೆ. ಈ ಕಪ್ಪುಹಣದ ಕೇಸ್‌ನಿಂದ ನಿಮ್ಮ ಹೆಸರು ಕೈಬಿಡಲು ಹಾಗೂ ಸಮಾಜದಲ್ಲಿ ನಿಮ್ಮ ಗೌರವ ಉಳಿಯಬೇಕಾದರೆ ನಾವು ಹೇಳುವ ಸೀಕ್ರೆಟ್ ಅಕೌಂಟ್‌ಗೆ ತುರ್ತಾಗಿ ಸೆಕ್ಯೂರಿಟಿ ಡಿಪಾಸಿಟ್ ಹಣ ತುಂಬಬೇಕು” ಎಂದು ಬ್ಲಾಕ್‌ಮೇಲ್ ಮಾಡಿದ್ದಾರೆ. ಜೈಲು ಮತ್ತು ಮಾನಹಾನಿಯ ತೀವ್ರ ಭಯಕ್ಕೆ ಬಿದ್ದ ಸುರೇಶ್ ರಾವ್ ಅವರು ವಂಚಕರು ಹೇಳಿದ ದಾರಿಗೆ ಬಂದಿದ್ದಾರೆ.
ಕಾನೂನಿನ ಕಣ್ಣಿನಿಂದ ಪಾರಾಗಲು ವಂಚಕರು ಮೊದಲು 45.22 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಅದರಂತೆ ಹೆದರಿದ ನೌಕರನು ಕಳೆದ ಮಾರ್ಚ್ 18 ರಿಂದ ಏಪ್ರಿಲ್ 15 ರ ನಡುವಿನ ಒಂದು ತಿಂಗಳ ಅವಧಿಯಲ್ಲಿ ತಮ್ಮ ಐಸಿಐಸಿಐ ಹಾಗೂ ಐಡಿಎಫ್‌ಸಿ ಬ್ಯಾಂಕ್ ಖಾತೆಗಳಿಂದ ವಂಚಕರು ನೀಡಿದ್ದ ವಿವಿಧ ಅಪರಿಚಿತ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 83,82,000 ರೂಪಾಯಿಗಳನ್ನು ಆನ್‌ಲೈನ್ ಮೂಲಕ ವರ್ಗಾಯಿಸಿದ್ದಾರೆ. ಇಷ್ಟೆಲ್ಲಾ ಆದ ಮೇಲೂ ಕಳ್ಳರು ಮತ್ತಷ್ಟು ಹಣಕ್ಕಾಗಿ ಪೀಡಿಸಲು ಶುರು ಮಾಡಿದಾಗ, ತಾವೊಂದು ನಕಲಿ ಜಾಲಕ್ಕೆ ಸಿಲುಕಿ ತೀವ್ರವಾಗಿ ಮೋಸ ಹೋಗಿರುವುದು ಸುರೇಶ್ ಅವರಿಗೆ ಅರಿವಾಗಿದೆ. ಸದ್ಯ ಸರ್ವಸ್ವವನ್ನೂ ಕಳೆದುಕೊಂಡಿರುವ ಸಂತ್ರಸ್ತ ನೌಕರರು ಬಾಗಲಕೋಟೆಯ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ರಾಯಚೂರು ಬಸ್ ನಿಲ್ದಾಣದಲ್ಲಿ ಚುಡಾಯಿಸಿದವನಿಗೆ ಸಾರ್ವಜನಿಕರ ಮುಂದೆಯೇ ಚಳಿ ಬಿಡಿಸಿದ ವೀರನಾರಿ!
