ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ದಿಢೀರ್ ಬದಲಾವಣೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಗಮನದ ಬೆನ್ನಲ್ಲೇ, ಹೊಸದಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯದ ಕುರಿತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ತೀವ್ರ ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರಿಗೆ ನೀಡಿರುವ ಅಧಿಕಾರ ಒಂಥರಾ ‘ಭಸ್ಮಾಸುರನ ಆಶೀರ್ವಾದ’ ಇದ್ದಂತೆ ಎಂದು ಲೇವಡಿ ಮಾಡಿರುವ ಅವರು, ಭಸ್ಮಾಸುರನಿಗೆ ಸಿಕ್ಕ ವರವೇ ಅವನಿಗೆ ಮುಳುವಾದಂತೆ ಈ ಮುಖ್ಯಮಂತ್ರಿ ಕುರ್ಚಿ ಡಿಕೆಶಿಯವರ ರಾಜಕೀಯ ಬದುಕಿಗೆ ಕಂಟಕವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ ಎಂದು ಭವಿಷ್ಯ ನುಡಿದಿದ್ದಾರೆ.
ಬರೀ ಡ್ರೈವರ್ ಬದಲಾಗಿದ್ದಾನೆ
ರಾಜ್ಯ ಸರ್ಕಾರದ ಸದ್ಯದ ಪರಿಸ್ಥಿತಿಯನ್ನು ವಾಹನ ಚಾಲನೆಗೆ ಹೋಲಿಸಿ ಮಾತನಾಡಿರುವ ಆರ್. ಅಶೋಕ್, ಸದ್ಯದ ಮಟ್ಟಿಗೆ ಆಡಳಿತ ವ್ಯವಸ್ಥೆಯಲ್ಲಿ ಕೇವಲ ಚಾಲಕ ಬದಲಾಗಿದ್ದಾನೆ ಅಷ್ಟೇ ಹೊರತು ಜನರಿಗೇನು ಪ್ರಯೋಜನವಿಲ್ಲ ಎಂದಿದ್ದಾರೆ. ಕಳೆದ ಮೂರು ವರ್ಷಗಳ ಕಾಲ ಸಿದ್ದರಾಮಯ್ಯ ಅವರು ಈ ಸರ್ಕಾರವೆಂಬ ಲಾರಿಯನ್ನು ತಮಗೆ ಇಷ್ಟಬಂದಂತೆ ಓಡಿಸಿ ಈಗ ಅಧಿಕಾರ ಹಸ್ತಾಂತರದ ಹೆಸರಿನಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಒಂದು ಹಳೆಯ ಗುಜರಿ ಬಸ್ಸನ್ನು ಕೈಗಿಟ್ಟಿದ್ದಾರೆ. ಕಳೆದ ಮೂರು ವರ್ಷಗಳಿಂದ ಮಾಡಿರುವ ಸಾಲದ ಹೊರೆ ಈ ವಾಹನದ ಮೇಲಿದ್ದು, ಡಿಕೆಶಿ ಓಡಿಸಬೇಕಾಗಿರುವ ಈ ಬಸ್ಸಿಗೆ ಸದ್ಯ ಡೀಸೆಲ್ ಹಾಕಲು ಕೂಡ ಸರ್ಕಾರದ ಬಳಿ ಹಣವಿಲ್ಲ ಎಂದು ಆರ್ಥಿಕ ಸ್ಥಿತಿಯನ್ನು ತಮಾಷೆ ಮಾಡಿದ್ದಾರೆ. ಈ ಇಡೀ ಬೆಳವಣಿಗೆಯ ಹಿಂದೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರ ಕೈವಾಡವಿದ್ದು, ಅಧಿಕಾರದಲ್ಲಿದ್ದವರನ್ನು ಏಕಾಏಕಿ ಕುರ್ಚಿಯಿಂದ ಕೆಳಗಿಳಿಸುವುದು ಕಾಂಗ್ರೆಸ್‌ನ ಹಳೇ ಸಂಸ್ಕೃತಿಯಾಗಿದೆ. ಹಿಂದುಳಿದ ವರ್ಗದ ಪ್ರಭಾವಿ ನಾಯಕ ಸಿದ್ದರಾಮಯ್ಯ ಅವರಿಗೆ ಅಪಮಾನ ಮಾಡಿರುವ ಕಾಂಗ್ರೆಸ್‌ಗೆ ಮುಂಬರುವ ದಿನಗಳಲ್ಲಿ ಅದೇ ಸಮುದಾಯದ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಸಿದ್ದರಾಮಯ್ಯ ಗ್ಯಾಂಗ್‌ಗೆ ಕತ್ತರಿ ಹಾಕುವ ಯತ್ನ
ಇದೇ ವೇಳೆ, ಸಚಿವ ಜಮೀರ್ ಅಹಮದ್ ಖಾನ್ ಅವರದ್ದೆನ್ನಲಾದ ವಿವಾದಾತ್ಮಕ ಆಡಿಯೋ ಲೀಕ್ ಆಗಿರುವ ವಿಚಾರ ಪ್ರಸ್ತಾಪಿಸಿದ ಅಶೋಕ್, ಇದು ಸಿದ್ದರಾಮಯ್ಯ ಅವರ ಆಪ್ತ ವಲಯ ಹಾಗೂ ಅವರ ಇಡೀ ಗ್ಯಾಂಗ್‌ಗೆ ರಾಜಕೀಯವಾಗಿ ಕತ್ತರಿ ಹಾಕಲು ಕಾಂಗ್ರೆಸ್‌ನೊಳಗಿನ ವಿರೋಧಿ ಬಣವೇ ಮಾಡಿರುವ ಪಕ್ಕಾ ಪ್ಲಾನ್ ಎಂದು ಆರೋಪಿಸಿದ್ದಾರೆ. ದಾವಣಗೆರೆ ಉಪಚುನಾವಣೆ ಮುಗಿದು ಇಷ್ಟು ದಿನಗಳಾದ ಮೇಲೆ, ಉರ್ದು ಭಾಷೆಯಲ್ಲಿದ್ದ ಸಂಭಾಷಣೆಯನ್ನು ಕನ್ನಡಕ್ಕೆ ಭಾಷಾಂತರಿಸಿ ಬಿಡುಗಡೆ ಮಾಡಿರುವುದರ ಹಿಂದೆ ಜಮೀರ್ ಅವರ ಸಚಿವ ಸ್ಥಾನಕ್ಕೆ ಕುತ್ತು ತರುವ ಸಂಚು ಅಡಗಿದೆ. ಸದ್ಯ ಸಚಿವ ಸ್ಥಾನ ಉಳಿಸಿಕೊಳ್ಳಲು ಮತ್ತು ಹೊಸದಾಗಿ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ನಾಯಕರು ದೆಹಲಿಗೆ ಓಡುತ್ತಿದ್ದಾರೆ. ಆದರೆ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ದೊಡ್ಡ ಮಟ್ಟದ ಅಸಮಾಧಾನ ಸ್ಫೋಟಗೊಂಡು, ಮಂತ್ರಿ ಸ್ಥಾನ ಸಿಗದ ಅತೃಪ್ತ ನಾಯಕರ ಹೊಸ ಗುಂಪೊಂದು ಸೃಷ್ಟಿಯಾಗಲಿದೆ ಎಂದು ಆರ್. ಅಶೋಕ್ ಹೇಳಿದ್ದಾರೆ.
ಇದನ್ನೂ ಓದಿ: ದಾವಣಗೆರೆ ಆಂತರಿಕ ಒಳಸಂಚು ವಿವಾದ: ವೈರಲ್ ಆಡಿಯೋ ವಿರುದ್ಧ ಸೈಬರ್ ದೂರು ದಾಖಲಿಸಲು ಜಮೀರ್ ಸಜ್ಜು!
