TOP NEWS

CM Change Row: ರಾಷ್ಟ್ರ ರಾಜಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಒಲ್ಲೆ: ರಾಹುಲ್ ಗಾಂಧಿ ನೀಡಿದ್ದ ರಾಜ್ಯಸಭಾ ಆಫರ್ ನಿರಾಕರಣೆ

CM Change Row siddaramaiah is not ready for national politics

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಭಾರೀ ಚರ್ಚೆಯಲ್ಲಿದ್ದ ಮುಖ್ಯಮಂತ್ರಿ (CM Change Row) ಬದಲಾವಣೆ ವಿಚಾರ ಕೊನೆಗೂ ಒಂದು ತಾರ್ಕಿಕ ಅಂತ್ಯಕ್ಕೆ ಬಂದಂತಿದೆ. ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಹೈಕಮಾಂಡ್‌ನ ಮ್ಯಾರಥಾನ್ ಸಭೆಯಲ್ಲಿ, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ವಿಚಾರ ಬಹುತೇಕ ಇತ್ಯರ್ಥವಾಗಿದೆ ಎನ್ನಲಾಗುತ್ತಿದೆ. ಆದರೆ, ಈ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಸುಗಮಗೊಳಿಸಲು ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯನವರಿಗೆ ನೀಡಿದ್ದ ರಾಜ್ಯಸಭಾ ಸ್ಥಾನದ ಆಫರ್ ಅನ್ನು ಸಿಎಂ ಸಾರಾಸಗಟಾಗಿ ನಿರಾಕರಿಸಿದ್ದಾರೆ. ಸಿದ್ದರಾಮಯ್ಯ ಅವರು ದೆಹಲಿ ರಾಜಕಾರಣದ ಸಹವಾಸವೇ ಬೇಡ ಎನ್ನುತ್ತಿರುವುದರ ಹಿಂದೆ ನಾಲ್ಕು ಬಲವಾದ ರಾಜಕೀಯ ಮತ್ತು ವೈಯಕ್ತಿಕ ಕಾರಣಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಭಾವ ಕಮ್ಮಿ ಆಗುತ್ತಿರುವ ಆತಂಕ

ಮೊದಲನೆಯದಾಗಿ, ಅಹಿಂದ ವರ್ಗಗಳೊಂದಿಗಿನ ನಂಟು ಮತ್ತು ಮಾಸ್ ಲೀಡರ್ ವರ್ಚಸ್ಸು ಸಿದ್ದರಾಮಯ್ಯನವರ ನಿಜವಾದ ಶಕ್ತಿಯಾಗಿದೆ. ಅವರು ತಳಮಟ್ಟದಿಂದ ರಾಜಕೀಯದಲ್ಲಿ ಹಂತಹಂತವಾಗಿ ಬೆಳೆದು ಬಂದವರು. ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ದಲಿತ) ಸಮುದಾಯಗಳ ಮೇಲಿರುವ ಭದ್ರ ಹಿಡಿತ ಮತ್ತು ಪ್ರಾದೇಶಿಕವಾಗಿ ಜನರೊಂದಿಗಿನ ನೇರ ಒಡನಾಟವೇ ಅವರನ್ನು ಜನಪ್ರಿಯ ನಾಯಕನನ್ನಾಗಿ ಮಾಡಿದೆ. ಒಂದು ವೇಳೆ ದೆಹಲಿಗೆ ತೆರಳಿ ರಾಷ್ಟ್ರ ರಾಜಕಾರಣ ಪ್ರವೇಶಿಸಿದರೆ, ರಾಜ್ಯದ ಜನರೊಂದಿಗಿನ ಈ ನೇರ ಸಂಪರ್ಕ ಕಡಿತಗೊಳ್ಳುತ್ತದೆ ಮತ್ತು ರಾಜ್ಯ ರಾಜಕಾರಣದಲ್ಲಿ ತಮ್ಮ ಪ್ರಭಾವ ಕಮ್ಮಿಯಾಗುತ್ತದೆ ಎಂಬ ಆತಂಕ ಅವರದ್ದಾಗಿದೆ.

ಎರಡನೆಯದಾಗಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಮಿತಿಯು ಸಿದ್ದರಾಮಯ್ಯನವರನ್ನು ರಾಜ್ಯದಲ್ಲೇ ಉಳಿಯುವಂತೆ ಮಾಡಿದೆ. ಅವರು ಅಪ್ಪಟ ಕನ್ನಡದ ನಾಯಕ ಎಂದು ಹೆಮ್ಮೆಯಿಂದ ಗುರುತಿಸಿಕೊಂಡವರು. ವಿಧಾನ ಮಂಡಲದ ಅಧಿವೇಶನಗಳಲ್ಲಿ ಹಲವು ಬಾರಿ ವಿರೋಧ ಪಕ್ಷದ ನಾಯಕರಿಗೆ ಕನ್ನಡದ ಬಗ್ಗೆ ಪಾಠ ಮಾಡಿದ್ದುಂಟು. ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಇರಬೇಕಾದ್ದು ಅನಿವಾರ್ಯ. ಈ ಭಾಷೆಯ ಮಿತಿಯಿಂದಾಗಿ ರಾಷ್ಟ್ರ ಮಟ್ಟದಲ್ಲಿ ರಾಜ್ಯದಷ್ಟೇ ಮುಕ್ತವಾಗಿ ಸಂವಹನ ನಡೆಸಲು ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವುದು ಮತ್ತೊಂದು ಪ್ರಮುಖ ಕಾರಣವಾಗಿದೆ.

ಮೂರನೆಯದಾಗಿ, ಹೈಕಮಾಂಡ್‌ ನೆರಳಿನಲ್ಲಿಯೇ ರಾಜಕೀಯ ಮಾಡುವ ಅನಿವಾರ್ಯತೆ ದೆಹಲಿಯಲ್ಲಿ ಎದುರಾಗುತ್ತದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯನವರಿಗೆ ತಮ್ಮದೇ ಆದ ಕೋಟ್ಯಂತರ ಅಭಿಮಾನಿಗಳ ಬಳಗವಿದ್ದು, ರಾಜ್ಯ ಕಾಂಗ್ರೆಸ್‌ನಲ್ಲಿ ಸದ್ಯ ಅವರದ್ದೇ ಅಂತಿಮ ನಿರ್ಧಾರ ಎಂಬ ಪರಿಸ್ಥಿತಿ ಇದೆ. ಇಲ್ಲಿ ಸಿಗುವ ಮನ್ನಣೆ ಮತ್ತು ರಾಜಕೀಯ ಗೌರವ ದೆಹಲಿಯಲ್ಲಿ ಸಿಗುವುದು ಕಷ್ಟ. ದೆಹಲಿಗೆ ಹೋದರೆ ಸದಾ ಎಐಸಿಸಿ ವರಿಷ್ಠರ ನೆರಳಿನಲ್ಲಿ ಹಾಗೂ ಹೈಕಮಾಂಡ್ ಸೂಚನೆಗಳ ಅಡಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಇದರಿಂದ ಸ್ವತಂತ್ರವಾಗಿ ತೀರ್ಮಾನ ಕೈಗೊಳ್ಳುವ ರಾಜಕೀಯ ಅಸ್ತಿತ್ವ ಕೈತಪ್ಪುತ್ತದೆ ಎನ್ನುವುದು ಅವರ ಯೋಚನೆಯಾಗಿದೆ.

ನಾಲ್ಕನೆಯದಾಗಿ, ಮಗ ಯತೀಂದ್ರ ಹಾಗೂ ಆಪ್ತರ ರಾಜಕೀಯ ಭವಿಷ್ಯದ ಜವಾಬ್ದಾರಿ ಅವರ ಮೇಲಿದೆ. ತಮ್ಮ ಆಡಳಿತದ ಅವಧಿಯಲ್ಲಿ ಅನ್ನಭಾಗ್ಯದಂತಹ ಬಡವರ ಪರ ಯೋಜನೆಗಳನ್ನು ತಂದ ಸಿದ್ದರಾಮಯ್ಯನವರಿಗೆ ಕರ್ನಾಟಕದ ಶೋಷಿತರ ಪರ ಕೆಲಸ ಮಾಡುವುದರಲ್ಲೇ ಆತ್ಮತೃಪ್ತಿ ಇದೆ. ಇದರೊಂದಿಗೆ, ತಮ್ಮ ಮಗ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಕಳೆದ ಮೂರು ವರ್ಷಗಳಿಂದ ತಮ್ಮ ಬೆನ್ನಿಗೆ ಬಂಡೆಯಂತೆ ನಿಂತಿರುವ ಆಪ್ತ ಸಚಿವರು ಮತ್ತು ಶಾಸಕರಿಗೆ ರಾಜ್ಯ ರಾಜಕಾರಣದಲ್ಲಿ ಭದ್ರ ನೆಲೆ ಕಲ್ಪಿಸಬೇಕಾದ ಹೊಣೆಗಾರಿಕೆ ಇದೆ. ದೆಹಲಿಗೆ ಹೋದರೆ ರಾಜ್ಯ ರಾಜಕಾರಣದ ಮೇಲಿನ ಸಂಪೂರ್ಣ ಹಿಡಿತ ತಪ್ಪಲಿದ್ದು, ಆಪ್ತರನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣದಿಂದ ದೂರ ಉಳಿಯಲು ಬಯಸಿದ್ದಾರೆ.

ಇದನ್ನೂ ಓದಿ: ರಾಜೀನಾಮೆ ಕೌಂಟ್‌ಡೌನ್ ನಡುವೆ ಸಿಎಂ ಸಿದ್ದರಾಮಯ್ಯ ‘ಜಾತಿ ಗಣತಿ’ ಬ್ರಹ್ಮಾಸ್ತ್ರ

Leave a Reply

Your email address will not be published. Required fields are marked *