TOP NEWS

Supreme Court: ಪೆನ್ನಾರ್ ನದಿ ವಿವಾದ: ಜಲ ನ್ಯಾಯಮಂಡಳಿ ಸ್ಥಾಪಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ನಿಂದ ಆರು ತಿಂಗಳ ಗಡುವು

Supreme Court notice to central government regarding Pennai River

ನವದೆಹಲಿ: ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವಿನ ಪೆನ್ನಾರ್ ನದಿ ನೀರು ಹಂಚಿಕೆ ವಿವಾದವನ್ನು ಇತ್ಯರ್ಥಪಡಿಸಲು ಅಂತರರಾಜ್ಯ ಜಲ ನ್ಯಾಯಮಂಡಳಿಯನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ (Supreme Court) ಆರು ತಿಂಗಳ ಕಾಲಾವಕಾಶ ನೀಡಿದೆ.

ಕೇಂದ್ರದ ವಾದಕ್ಕೆ ಮನ್ನಣೆ: ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ನ್ಯಾಯಮಂಡಳಿ ಸ್ಥಾಪನೆಗೆ ಸಂಬಂಧಿಸಿದಂತೆ ಸಚಿವ ಸಂಪುಟದ ಅನುಮೋದನೆ ಮತ್ತು ಕಾನೂನು ಪ್ರಕ್ರಿಯೆಗಳು ಚಾಲ್ತಿಯಲ್ಲಿದ್ದು, ಇವುಗಳನ್ನು ಪೂರ್ಣಗೊಳಿಸಲು ಸಮಯಾವಕಾಶ ಬೇಕು ಎಂಬ ಕೇಂದ್ರದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಈ ವಿಚಾರದಲ್ಲಿ ಕೇಂದ್ರವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿಳಂಬವು ಉದ್ದೇಶಪೂರ್ವಕವಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ನ್ಯಾಯಮಂಡಳಿ ರಚನೆಯ ಹಾದಿ: ಕೇಂದ್ರ ಜಲಶಕ್ತಿ ಸಚಿವಾಲಯವು ಈಗಾಗಲೇ ಕರಡು ಟಿಪ್ಪಣಿಯನ್ನು ಸಿದ್ಧಪಡಿಸಿ ಸಚಿವರ ಒಪ್ಪಿಗೆ ಪಡೆದಿದೆ. ಮುಂದಿನ ಹಂತದಲ್ಲಿ ಕೇಂದ್ರ ಸಚಿವ ಸಂಪುಟದ ಅನುಮೋದನೆ ದೊರೆತ ಬಳಿಕ, ನ್ಯಾಯಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಗಾಗಿ ಭಾರತದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆಯಲಾಗುತ್ತದೆ. ನ್ಯಾಯಾಧೀಶರ ನಾಮನಿರ್ದೇಶನ ಮುಗಿದ ನಂತರ ಅಧಿಕೃತವಾಗಿ ನ್ಯಾಯಮಂಡಳಿ ಅಸ್ತಿತ್ವಕ್ಕೆ ಬರಲಿದೆ.

ವಿವಾದದ ಮೂಲ: ಕರ್ನಾಟಕವು ಮಾರ್ಕೆಂಡೇಯ ಮತ್ತು ಪೆನ್ನೈಯಾರ್ ನದಿಗಳಿಗೆ ಅಡ್ಡಲಾಗಿ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಗಳನ್ನು ಕೈಗೊಂಡಿರುವುದು ತಮ್ಮ ರಾಜ್ಯದ ರೈತರಿಗೆ ಮಾರಕವಾಗಲಿದೆ ಎಂದು ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ 1956ರ ನದಿ ನೀರು ವಿವಾದ ಕಾಯ್ದೆಯಡಿ ನ್ಯಾಯಮಂಡಳಿ ರಚನೆಗೆ ತಮಿಳುನಾಡು ಒತ್ತಾಯಿಸಿತ್ತು.

ಕರ್ನಾಟಕದ ಪ್ರತಿಪಾದನೆ: ಈ ವಿವಾದವು ಅಷ್ಟೊಂದು ಸಂಕೀರ್ಣವಾದುದಲ್ಲ ಎಂಬುದು ಕರ್ನಾಟಕದ ವಾದವಾಗಿದೆ. ಲಭ್ಯವಿರುವ ಒಟ್ಟು 11.77 ಟಿಎಂಸಿ ನೀರಿನಲ್ಲಿ ಕರ್ನಾಟಕವು ಕೇವಲ 9.77 ಟಿಎಂಸಿ ನೀರನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಉಳಿದ ನೀರು ತಮಿಳುನಾಡಿಗೆ ಹರಿಯಲಿದ್ದು, ಅವರ ಅಗತ್ಯಗಳಿಗೆ ಅದು ಸಾಕಾಗುತ್ತದೆ ಎಂದು ಕರ್ನಾಟಕ ತನ್ನ ವಾದವನ್ನು ಮಂಡಿಸಿದೆ. ಕಾವೇರಿ ಮತ್ತು ಕೃಷ್ಣಾ ವಿವಾದಗಳ ಮಾದರಿಯಲ್ಲೇ ಈಗ ಪೆನ್ನಾರ್ ವಿವಾದವೂ ನ್ಯಾಯಮಂಡಳಿಯ ಮೂಲಕ ಬಗೆಹರಿಯುವ ಹಂತಕ್ಕೆ ತಲುಪಿದೆ.

ಇದನ್ನೂ ಓದಿ: ರಾಜ್ಯಪಾಲರ ಹುದ್ದೆಯೇ ನಮಗೆ ಬೇಡ: ತಮಿಳುನಾಡು ರಾಜಕೀಯ ಅನಿಶ್ಚಿತತೆ ನಡುವೆ ಕನಿಮೊಳಿ ಸ್ಫೋಟಕ ಹೇಳಿಕೆ

Leave a Reply

Your email address will not be published. Required fields are marked *