ಕುಶಾಲನಗರ: ಕೊಡಗಿನ (Kodagu) ಪ್ರಸಿದ್ಧ ಪ್ರವಾಸಿ ಕೇಂದ್ರ ದುಬಾರೆಯಲ್ಲಿ ಬಹುನಿರೀಕ್ಷಿತ ತೂಗುಸೇತುವೆ ನಿರ್ಮಾಣದ ವಿಚಾರವು ಈಗ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿಯ ನಡುವಿನ ಕೆಸರೆರಚಾಟಕ್ಕೆ ಸಾಕ್ಷಿಯಾಗಿದೆ. ಬುಧವಾರ ಜಿಲ್ಲೆಗೆ ಭೇಟಿ ನೀಡಿದ್ದ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದು, ರಾಜಕೀಯ ವಲಯದಲ್ಲಿ ಬಿಸಿ ಏರಿಸಿದೆ.
ಸಚಿವರ ವಾಹನ ತಡೆದ ಬಿಜೆಪಿ ಕಾರ್ಯಕರ್ತರು: ದುಬಾರೆ ಆನೆ ಶಿಬಿರಕ್ಕೆ ಸಂಪರ್ಕ ಕಲ್ಪಿಸುವ 7.50 ಕೋಟಿ ರೂಪಾಯಿ ವೆಚ್ಚದ ತೂಗುಸೇತುವೆ ಕಾಮಗಾರಿಯ ಭೂಮಿಪೂಜೆಗಾಗಿ ಸಚಿವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಗುಡ್ಡೆಹೊಸೂರು ಬಳಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಾಡಾನೆ ಹಾವಳಿ ತಡೆಗೆ ಸರ್ಕಾರ ವಿಫಲವಾಗಿದೆ ಹಾಗೂ ಸಿ ಅಂಡ್ ಡಿ ಭೂಮಿ ಸಮಸ್ಯೆ ಇತ್ಯರ್ಥಪಡಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಚಿವರ ಕಾರಿಗೆ ಅಡ್ಡಬಂದು ಘೋಷಣೆ ಕೂಗಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ: ಬಿಜೆಪಿಯ ಈ ಪ್ರತಿಭಟನೆಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಮಾತನಾಡಿ, “ಶಾಸಕ ಡಾ. ಮಂಥರ್ ಗೌಡ ಅವರ ಪರಿಶ್ರಮದಿಂದ ಈ ಸೇತುವೆ ಮಂಜೂರಾಗಿದೆ. ಇದರಿಂದ ಸುಮಾರು 120 ಆದಿವಾಸಿ ಕುಟುಂಬಗಳ ದಶಕಗಳ ಬೇಡಿಕೆ ಈಡೇರಲಿದೆ. ಕಳೆದ 25 ವರ್ಷಗಳಲ್ಲಿ ಬಿಜೆಪಿಯವರು ಮಾಡದ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿರುವುದನ್ನು ಸಹಿಸದೆ, ರಾಜಕೀಯ ದ್ವೇಷದಿಂದ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ,” ಎಂದು ಕಿಡಿಕಾರಿದ್ದಾರೆ.
ಕ್ರೆಡಿಟ್ ವಾರ್ಗೆ ಸಾಕ್ಷಿಯಾದ ಕೊಡಗು: ಜಿಲ್ಲೆಯ ಶಾಸಕರಾದ ಎ.ಎಸ್. ಪೊನ್ನಣ್ಣ ಮತ್ತು ಡಾ. ಮಂಥರ್ ಗೌಡ ಅವರು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ತರುತ್ತಿರುವುದನ್ನು ಕಂಡು ಬಿಜೆಪಿಯ ಮಾಜಿ ಶಾಸಕರು ಹತಾಶರಾಗಿದ್ದಾರೆ. ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿ ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಒಟ್ಟಿನಲ್ಲಿ, ಕೊಡಗಿನ ಜನರ ಮೂಲಸೌಕರ್ಯದ ವಿಚಾರವು ಈಗ ರಾಜಕೀಯ ನಾಯಕರ ನಡುವಿನ ಪ್ರತಿಷ್ಠೆಯ ಕದನವಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ: ಶೃಂಗೇರಿ ಫಲಿತಾಂಶದ ವಿರುದ್ಧ ಕಾನೂನು ಹೋರಾಟ: ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ
