ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಹೊಸ ಇತಿಹಾಸ ಬರೆದಿರುವ ನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷಕ್ಕೆ ಕಾಂಗ್ರೆಸ್ ಪೂರ್ಣ ಬೆಂಬಲ ಘೋಷಿಸಿದೆ. ಚೆನ್ನೈನ ಟಿವಿಕೆ ಪ್ರಧಾನ ಕಚೇರಿಯಲ್ಲಿ ವಿಜಯ್ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ಮುಖಂಡರು, ಮೈತ್ರಿ ಸರ್ಕಾರ ರಚನೆಗೆ ಬೆಂಬಲ ಸೂಚಿಸುವ ಅಧಿಕೃತ ಪತ್ರವನ್ನು ಹಸ್ತಾಂತರಿಸಿದ್ದಾರೆ. ಈ ಬೆಳವಣಿಗೆಯೊಂದಿಗೆ ರಾಜ್ಯದಲ್ಲಿ ವಿಜಯ್ ಸಾರಥ್ಯದ ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವುದು ಖಚಿತವಾಗಿದೆ.
ಬದಲಾವಣೆ ಬಯಸಿದ ಜನತೆಗೆ ಗೆಲುವು ಸಮರ್ಪಣೆ: ಚುನಾವಣಾ ಯಶಸ್ಸಿನ ಬಳಿಕ ವಿನಮ್ರವಾಗಿ ಪ್ರತಿಕ್ರಿಯಿಸಿರುವ ವಿಜಯ್, ಈ ಗೆಲುವನ್ನು ತಮಿಳುನಾಡಿನ ಜನತೆಗೆ ಸಮರ್ಪಿಸಿದ್ದಾರೆ. “ಇದು ನನ್ನೊಬ್ಬನ ಯಶಸ್ಸಲ್ಲ, ಬದಲಾವಣೆಗಾಗಿ ಹಂಬಲಿಸುತ್ತಿದ್ದ ಪ್ರತಿಯೊಬ್ಬ ನಾಗರಿಕನ ಜಯ. ರಾಜಕೀಯವು ನನಗೆ ಅಧಿಕಾರ ಹಿಡಿಯುವ ಹಾದಿಯಲ್ಲ, ಬದಲಿಗೆ ಜನರ ಸೇವೆ ಮಾಡುವ ಪವಿತ್ರ ಸಾಧನ,” ಎಂದು ಅವರು ತಿಳಿಸಿದ್ದಾರೆ. ಅಧಿಕಾರಕ್ಕಿಂತ ಜನಸೇವೆಯೇ ನನ್ನ ಮೊದಲ ಆದ್ಯತೆ ಎಂದು ಅವರು ಈ ಸಂದರ್ಭದಲ್ಲಿ ಪುನರುಚ್ಚರಿಸಿದ್ದಾರೆ.
ದ್ವೇಷ ಮುಕ್ತ ರಾಜಕಾರಣಕ್ಕೆ ವಿಜಯ್ ಕರೆ: ತಮ್ಮ ಪಕ್ಷದ ಸಿದ್ಧಾಂತದ ಬಗ್ಗೆ ಮಾತನಾಡಿದ ಅವರು, ‘ಮೊದಲು ಜನತೆ, ನಂತರ ರಾಜಕಾರಣ’ ಎಂಬ ತತ್ವದೊಂದಿಗೆ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಗೆಲುವಿನ ಸಂಭ್ರಮದಲ್ಲಿರುವ ಕಾರ್ಯಕರ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಅವರು, “ಯಾವುದೇ ಕಾರಣಕ್ಕೂ ವಿರೋಧ ಪಕ್ಷದವರನ್ನು ಹೀಯಾಳಿಸಬಾರದು ಅಥವಾ ದ್ವೇಷದ ರಾಜಕೀಯ ಮಾಡಬಾರದು. ಸಂಯಮ ಕಾಯ್ದುಕೊಳ್ಳುವ ಮೂಲಕ ರಾಜ್ಯದಲ್ಲಿ ಹೊಸ ಹಾಗೂ ಪಾರದರ್ಶಕ ರಾಜಕೀಯ ಸಂಸ್ಕೃತಿಯನ್ನು ಪರಿಚಯಿಸೋಣ,” ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ: ಪೆರಂಬೂರು ಉಳಿಸಿಕೊಂಡು ತಿರುಚಿ ಕ್ಷೇತ್ರಕ್ಕೆ ವಿಜಯ್ ವಿದಾಯ? ಜಯಲಲಿತಾ ಹಾದಿಯಲ್ಲಿ ‘ದಳಪತಿ’ ಪಯಣ!
