ಬಾಗಲಕೋಟೆ: ಇಡೀ ರಾಜ್ಯದ ಕುತೂಹಲ ಕೆರಳಿಸಿದ್ದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ (By Election) ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಐತಿಹಾಸಿಕ ಜಯಭೇರಿ ಬಾರಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕ ವೀರಣ್ಣ ಚರಂತಿಮಠ ಅವರ ವಿರುದ್ಧ ಭರ್ಜರಿ ಪೈಪೋಟಿ ನಡೆಸಿದ ಉಮೇಶ್ ಮೇಟಿ, ಬರೋಬ್ಬರಿ 21,866 ಮತಗಳ ಬೃಹತ್ ಅಂತರದಿಂದ ವಿಜಯಶಾಲಿಯಾಗುವ ಮೂಲಕ ಬಣ್ಣದ ಲೋಕದಿಂದ ವಿಧಾನಸೌಧಕ್ಕೆ ಲಗ್ಗೆ ಇಟ್ಟಿದ್ದಾರೆ.
ಮತಗಳ ಲೆಕ್ಕಾಚಾರ ಹೀಗಿದೆ: ಬಹಳ ರೋಚಕವಾಗಿ ಸಾಗಿದ ಮತ ಎಣಿಕೆಯ ಅಂತ್ಯಕ್ಕೆ ಉಮೇಶ್ ಮೇಟಿ ಅವರು ಒಟ್ಟು 97,941 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಪ್ರತಿಷ್ಠೆಯ ಕಣದಲ್ಲಿ ಗೆಲ್ಲಲೇಬೇಕೆಂದು ಕಣಕ್ಕಿಳಿದಿದ್ದ ವೀರಣ್ಣ ಚರಂತಿಮಠ ಅವರು 76,075 ಮತಗಳನ್ನು ಪಡೆಯಲಷ್ಟೇ ಶಕ್ತರಾಗಿ ಸೋಲೊಪ್ಪಿಕೊಂಡಿದ್ದಾರೆ. ಈ ಫಲಿತಾಂಶದ ಮೂಲಕ ಬಾಗಲಕೋಟೆಯ ಮತದಾರರು ಮತ್ತೊಮ್ಮೆ ಕಾಂಗ್ರೆಸ್ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗೆಲುವಿಗೆ ‘ಗ್ಯಾರಂಟಿ’ ಶಕ್ತಿ: ಗೆಲುವಿನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉಮೇಶ್ ಮೇಟಿ ಭಾವುಕರಾಗಿ ಪ್ರತಿಕ್ರಿಯಿಸಿದರು. “ನನ್ನ ಈ ಯಶಸ್ಸಿಗೆ ರಾಜ್ಯ ಸರ್ಕಾರದ ಜನಪರ ಗ್ಯಾರಂಟಿ ಯೋಜನೆಗಳೇ ಶ್ರೀರಕ್ಷೆಯಾಗಿವೆ. ಸರ್ಕಾರದ ಕಾರ್ಯವೈಖರಿ ಬಡವರ ಮತ್ತು ಸಾಮಾನ್ಯ ಜನರ ಮನ ಗೆದ್ದಿದೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ” ಎಂದರು. ಅಲ್ಲದೆ, ಈ ವಿಜಯಕ್ಕಾಗಿ ಶ್ರಮಿಸಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.
ತಂದೆಗೆ ಅರ್ಪಿಸಿದ ಐತಿಹಾಸಿಕ ವಿಜಯ: ತಮ್ಮ ರಾಜಕೀಯ ಯಶಸ್ಸನ್ನು ತಂದೆ ಹೆಚ್.ವೈ. ಮೇಟಿ ಅವರಿಗೆ ಅರ್ಪಿಸಿದ ಉಮೇಶ್, “ಇದು ನನ್ನೊಬ್ಬನ ಗೆಲುವಲ್ಲ, ಕ್ಷೇತ್ರದ ಜನತೆ ಹಾಗೂ ಕಾರ್ಯಕರ್ತರು ನನ್ನ ಮೇಲೆ ಇಟ್ಟ ನಂಬಿಕೆಯ ಜಯ” ಎಂದು ಹರ್ಷ ವ್ಯಕ್ತಪಡಿಸಿದರು. ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ ಎಂದು ಅವರು ಇದೇ ವೇಳೆ ಭರವಸೆ ನೀಡಿದರು.
ಮೇಟಿ ನಿವಾಸದ ಮುಂದೆ ಸಂಭ್ರಮದ ಹೊಳೆ: ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಬಾಗಲಕೋಟೆಯ ನವನಗರದಲ್ಲಿರುವ ಉಮೇಶ್ ಮೇಟಿ ಅವರ ಮನೆ ಮುಂದೆ ಹಬ್ಬದ ಸಂಭ್ರಮ ಮನೆಮಾಡಿದೆ. ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ, ಗುಲಾಲ್ ಎರಚಿ ಕುಣಿದು ಕುಪ್ಪಳಿಸುತ್ತಿದ್ದಾರೆ. ‘ಕೈ’ ಅಭ್ಯರ್ಥಿಯ ಗೆಲುವಿನ ಘೋಷಣೆಗಳು ಮುಗಿಲುಮುಟ್ಟಿದ್ದು, ಕಾಂಗ್ರೆಸ್ ಪಾಳಯದಲ್ಲಿ ವಿಜಯೋತ್ಸವ ಜೋರಾಗಿ ಸಾಗಿದೆ.
ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಮೇ ‘ಸರ್ಜರಿ’ ಸಂಚಲನ: 13 ಸಚಿವರಿಗೆ ಕೊಕ್?
