I-PAC: ಹಣ ಅಕ್ರಮ ವರ್ಗಾವಣೆ ಪ್ರಕರಣ: ಐ-ಪ್ಯಾಕ್ ನಿರ್ದೇಶಕ ವಿನೇಶ್ ಚಂದೇಲ್‌ಗೆ ಜಾಮೀನು

I-PAC director Vinesh Chandel granted bail

ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಂಡ ಬೆನ್ನಲ್ಲೇ, ಮನಿ ಲಾಂಡರಿಂಗ್ (ಹಣ ಅಕ್ರಮ ವರ್ಗಾವಣೆ) ಪ್ರಕರಣದಲ್ಲಿ ಬಂಧಿತರಾಗಿದ್ದ ಐ-ಪ್ಯಾಕ್ (I-PAC) ಸಂಸ್ಥೆಯ ನಿರ್ದೇಶಕ ವಿನೇಶ್ ಚಂದೇಲ್ ಅವರಿಗೆ ದೆಹಲಿ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ. ಜಾರಿ ನಿರ್ದೇಶನಾಲಯವು (ಇಡಿ) ಈ ಬಾರಿ ಚಂದೇಲ್ ಅವರ ಜಾಮೀನು ಅರ್ಜಿಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸದ ಕಾರಣ ಪಟಿಯಾಲ ಹೌಸ್ ನ್ಯಾಯಾಲಯವು ಈ ರಿಲೀಫ್ ನೀಡಿದೆ.

ಜಾಮೀನಿಗೆ ಒಪ್ಪಿಗೆ ನೀಡಿದ ತನಿಖಾ ಸಂಸ್ಥೆ

ಗಮನಾರ್ಹವೆಂದರೆ, ಕಳೆದ ಮಂಗಳವಾರವಷ್ಟೇ ನ್ಯಾಯಾಲಯವು ಚಂದೇಲ್ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಅಂದು ಅವರು ತಮ್ಮ 74 ವರ್ಷದ ತಾಯಿ ಡಿಮೆನ್ಶಿಯಾ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಆರೋಗ್ಯ ಹದಗೆಡುತ್ತಿದೆ ಎಂಬ ಮಾನವೀಯ ನೆಲೆಯಲ್ಲಿ ಜಾಮೀನು ಕೋರಿದ್ದರು. ಆದರೆ, ತಾಯಿಯ ಆರೋಗ್ಯ ಸ್ಥಿತಿ ತುರ್ತು ಪರಿಸ್ಥಿತಿಯಲ್ಲಿಲ್ಲ ಮತ್ತು ಕುಟುಂಬದ ಇತರ ಸದಸ್ಯರು ಅವರನ್ನು ನೋಡಿಕೊಳ್ಳಬಹುದು ಎಂಬ ಕಾರಣ ನೀಡಿ ನ್ಯಾಯಾಲಯ ಅಂದು ಜಾಮೀನು ನಿರಾಕರಿಸಿತ್ತು. ಆದರೆ ಈಗ ತನಿಖಾ ಸಂಸ್ಥೆಯೇ ಜಾಮೀನಿಗೆ ಸಮ್ಮತಿ ಸೂಚಿಸಿರುವುದರಿಂದ ಅವರಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.

ಪಶ್ಚಿಮ ಬಂಗಾಳದ ಕಲ್ಲಿದ್ದಲು ಅಕ್ರಮ ಗಣಿಗಾರಿಕೆ ಮತ್ತು ಸಾಗಾಣಿಕೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ ಚುನಾವಣೆಗೆ ಕೆಲವೇ ದಿನಗಳ ಮುನ್ನ ಚಂದೇಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಪಶ್ಚಿಮ ಬಂಗಾಳದ ಕಲ್ಲಿದ್ದಲು ಹಗರಣದ ಮೂಲಕ ಬಂದ ಸುಮಾರು 20 ಕೋಟಿ ರೂಪಾಯಿ ಅಕ್ರಮ ಹಣವು ಹವಾಲಾ ಮಾರ್ಗಗಳ ಮೂಲಕ ಐ-ಪ್ಯಾಕ್ ಸಂಸ್ಥೆಗೆ ತಲುಪಿದೆ ಎಂಬುದು ಜಾರಿ ನಿರ್ದೇಶನಾಲಯದ ಪ್ರಮುಖ ಆರೋಪವಾಗಿದೆ.

ರಾಜಕೀಯ ಸಲಹಾ ಸಂಸ್ಥೆಯಾದ ಐ-ಪ್ಯಾಕ್‌ನಲ್ಲಿ ವಿನೇಶ್ ಚಂದೇಲ್ ಅವರು ಶೇ. 33 ರಷ್ಟು ಪಾಲನ್ನು ಹೊಂದಿದ್ದು, ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚುನಾವಣೆಯ ಸಮಯದಲ್ಲಿ ನಡೆದ ಇವರ ಬಂಧನವು ಪಶ್ಚಿಮ ಬಂಗಾಳದಲ್ಲಿ ಭಾರಿ ರಾಜಕೀಯ ಬಿರುಗಾಳಿ ಎಬ್ಬಿಸಿತ್ತು. ಇದೀಗ ಚುನಾವಣೆ ಮುಗಿದ ಮರುದಿನವೇ ಅವರಿಗೆ ಜಾಮೀನು ದೊರೆತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ನ್ಯಾಯಾಲಯದ ಈ ಆದೇಶದಿಂದಾಗಿ ಹಲವು ದಿನಗಳಿಂದ ಜೈಲಿನಲ್ಲಿದ್ದ ಚಂದೇಲ್ ಅವರಿಗೆ ದೊಡ್ಡ ಮಟ್ಟದ ನೆಮ್ಮದಿ ಸಿಕ್ಕಂತಾಗಿದೆ.

ಇದನ್ನೂ ಓದಿ: ಪವನ್ ಖೇರಾ ಜಾಮೀನು ಅರ್ಜಿಗೆ ಅಸ್ಸಾಂ ಪೊಲೀಸರ ತೀವ್ರ ವಿರೋಧ

Leave a Reply

Your email address will not be published. Required fields are marked *