Cabinet: ರಣದೀಪ್ ಸಿಂಗ್ ಸುರ್ಜೇವಾಲ ಭೇಟಿ ಮಾಡಿದ 12 ಶಾಸಕರು

Karnataka 12 MLA meets randeep surjewala regarding cabinet expansion

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ (Cabinet) ಪುನಾರಚನೆಯ ಚರ್ಚೆಗಳು ಮತ್ತೊಮ್ಮೆ ತೀವ್ರಗೊಂಡಿವೆ. ತಮಗೂ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕದ ಸುಮಾರು 12ಕ್ಕೂ ಹೆಚ್ಚು ಹಿರಿಯ ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಇಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ನಿವಾಸಕ್ಕೆ ಭೇಟಿ ನೀಡಿದ ಶಾಸಕರ ತಂಡ, ಸಂಪುಟದಲ್ಲಿ ಬದಲಾವಣೆ ತರುವಂತೆ ಅಧಿಕೃತವಾಗಿ ಮನವಿ ಸಲ್ಲಿಸಿದೆ.

ದೆಹಲಿಯಲ್ಲಿ ಶಾಸಕರು

ಸಚಿವ ಸ್ಥಾನದ ಆಕಾಂಕ್ಷಿಗಳಾದ ಟಿ.ಬಿ. ಜಯಚಂದ್ರ, ಅಶೋಕ್ ಪಟ್ಟಣ್, ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಹಂಪನಗೌಡ ಬಾದರ್ಲಿ, ಬಸವರಾಜ್ ಶಿವಣ್ಣನವರ್ ಹಾಗೂ ಯಶವಂತರಾಯಗೌಡ ಪಾಟೀಲ್ ಅವರನ್ನೊಳಗೊಂಡ ಹಿರಿಯ ಶಾಸಕರ ತಂಡ ಕಳೆದ ಎರಡು ದಿನಗಳಿಂದ ದೆಹಲಿಯಲ್ಲೇ ಉಳಿದುಕೊಂಡಿದೆ. ಹಿರಿಯ ಹಾಗೂ ನಿಷ್ಠಾವಂತ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಆಡಳಿತಕ್ಕೆ ಹೊಸ ಚೈತನ್ಯ ನೀಡಬೇಕು ಎಂಬುದು ಈ ತಂಡದ ಪ್ರಮುಖ ಬೇಡಿಕೆಯಾಗಿದೆ.

ಸಂಪುಟ ಬದಲಾವಣೆಯ ಸುಳಿವು ನೀಡಿದ ಪರಮೇಶ್ವರ್

ಇನ್ನೊಂದೆಡೆ ಬೆಂಗಳೂರಿನಲ್ಲಿ ಮಾತನಾಡಿರುವ ಗೃಹ ಸಚಿವ ಜಿ. ಪರಮೇಶ್ವರ್ ಅವರು ಸಂಪುಟ ಪುನಾರಚನೆಯ ಸಾಧ್ಯತೆಗಳನ್ನು ಪರೋಕ್ಷವಾಗಿ ಖಚಿತಪಡಿಸಿದ್ದಾರೆ. ಮೂರು-ನಾಲ್ಕು ಬಾರಿ ಗೆದ್ದ ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಸಂಪುಟ ಪುನಾರಚನೆಯ ಸುಳಿವು ಇರುವುದರಿಂದಲೇ ಅವರು ದೆಹಲಿಗೆ ತೆರಳಿದ್ದಾರೆ. ಪಕ್ಷದ ಮೊದಲಿನ ನಿರ್ಧಾರದಂತೆ ಎರಡೂವರೆ ವರ್ಷಗಳ ಬಳಿಕ ಬದಲಾವಣೆ ಮಾಡುವುದು ನಿಗದಿಯಾಗಿದೆ,” ಎಂದು ತಿಳಿಸಿದ್ದಾರೆ.

ಹೈಕಮಾಂಡ್ ಮೇಲೆ ಎಲ್ಲರ ಕಣ್ಣು:

ಸಂಪುಟದಲ್ಲಿ ಯಾರನ್ನು ಉಳಿಸಿಕೊಳ್ಳಬೇಕು ಮತ್ತು ಯಾರನ್ನು ಕೈಬಿಡಬೇಕು ಎಂಬ ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಆದರೆ ಈ ಬೆಳವಣಿಗೆಗೂ ಸಿಎಂ ಬದಲಾವಣೆ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ. ಸರ್ಕಾರದ ಆಡಳಿತದ ವೇಗ ಹೆಚ್ಚಿಸಲು ಮತ್ತು ಪಕ್ಷದ ಒಗ್ಗಟ್ಟು ಕಾಪಾಡಲು ಈ ಕಾರ್ಯತಂತ್ರ ರೂಪಿಸಲಾಗುತ್ತಿದ್ದು, ದೆಹಲಿ ಮಟ್ಟದಲ್ಲಿ ನಡೆಯುತ್ತಿರುವ ಈ ಲಾಬಿ ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಸಿಎಂ ಬದಲಾವಣೆ ಆಗಲ್ಲ ಎಂದ ಯತೀಂದ್ರ ಸಿದ್ದರಾಮಯ್ಯ

Leave a Reply

Your email address will not be published. Required fields are marked *