Shakti Scheme: ಉಚಿತ ಬಸ್‌ ನಮಗೆ ಬೇಡ, ವಾಪಾಸ್‌ ತಗೊಳಿ: ಮಹಿಳೆಯ ವಿಡಿಯೋ ವೈರಲ್

Shakti Scheme woman shares problem of free bus

ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ‘ಶಕ್ತಿ’ ಯೋಜನೆ (ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ) ಈಗ ಸಾಮಾಜಿಕ ಜಾಲತಾಣಗಳಲ್ಲಿ (Shakti Scheme) ಭಾರಿ ಚರ್ಚೆಗೆ ಕಾರಣವಾಗಿದೆ. ಈ ಯೋಜನೆಯಿಂದಾಗಿ ಬಸ್‌ಗಳಲ್ಲಿ ಉಂಟಾಗುತ್ತಿರುವ ವಿಪರೀತ ಜನದಟ್ಟಣೆಯಿಂದ ಬೇಸತ್ತ ಮಹಿಳೆಯೊಬ್ಬರು ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ.

ವೈರಲ್ ವಿಡಿಯೋದಲ್ಲೇನಿದೆ?

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಹುಲಿಗೆಮ್ಮ ಎಂಬ ಮಹಿಳೆ, ಬಸ್‌ನಲ್ಲಿ ಕಿಕ್ಕಿರಿದು ತುಂಬಿರುವ ಜನಜಂಗುಳಿಯ ನಡುವೆ ನಿಂತುಕೊಂಡೇ ತಮ್ಮ ಅಳಲು ತೋಡಿಕೊಂಡಿದ್ದಾರೆ. “ಸಿದ್ದರಾಮಯ್ಯನವರೇ, ನಮಗೆ ನಿಮ್ಮ ಉಚಿತ ಬಸ್ ಪ್ರಯಾಣದ ಅವಶ್ಯಕತೆ ಇಲ್ಲ. ನಾವು ಹಣ ಕೊಟ್ಟೇ ಪ್ರಯಾಣಿಸುತ್ತೇವೆ, ದಯವಿಟ್ಟು ಈ ಯೋಜನೆಯನ್ನು ವಾಪಸ್ ಪಡೆಯಿರಿ. ಫ್ರೀ ಬಸ್‌ನಿಂದಾಗಿ ನಮಗೆ ಪ್ರತಿದಿನ ನರಕಯಾತನೆ ಎದುರಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಸ್‌ಗಳಲ್ಲಿ ಕನಿಷ್ಠ ನಿಲ್ಲಲೂ ಜಾಗವಿಲ್ಲದ ಸ್ಥಿತಿ ಇರುವುದರಿಂದ ಸಂಚಾರ ಮಾಡುವುದು ಹರಸಾಹಸವಾಗಿ ಪರಿಣಮಿಸಿದೆ ಎಂದು ಅವರು ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.

ಬಿಜೆಪಿ ವಾಗ್ದಾಳಿ:

ಈ ವಿಡಿಯೋವನ್ನು ಅಸ್ತ್ರವಾಗಿಸಿಕೊಂಡಿರುವ ವಿರೋಧಪಕ್ಷ ಬಿಜೆಪಿ, ತನ್ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಇದನ್ನು ಹಂಚಿಕೊಳ್ಳುವ ಮೂಲಕ ಸರ್ಕಾರದ ವಿರುದ್ಧ ಕಿಡಿ ಕಾರಿದೆ. “ಉಚಿತದ ಹೆಸರಿನಲ್ಲಿ ಸರ್ಕಾರ ಜನರಿಗೆ ವನವಾಸ ಮಾಡಿಸುತ್ತಿದೆ” ಎಂದು ಬಿಜೆಪಿ ಟೀಕಿಸಿದೆ. ಶಕ್ತಿ ಯೋಜನೆಯಿಂದಾಗಿ ಬಸ್‌ಗಳಲ್ಲಿ ಉಂಟಾಗುತ್ತಿರುವ ರಶ್ ಮತ್ತು ಮಹಿಳಾ ಪ್ರಯಾಣಿಕರ ಅಸಮಾಧಾನ ಈಗ ರಾಜ್ಯ ರಾಜಕಾರಣದಲ್ಲಿ ಹೊಸ ಹಗ್ಗಜಗ್ಗಾಟಕ್ಕೆ ದಾರಿ ಮಾಡಿಕೊಟ್ಟಿದೆ.

ಇದನ್ನೂ ಓದಿ: ಸಿಎಂ ಬದಲಾವಣೆ ಆಗಲ್ಲ ಎಂದ ಯತೀಂದ್ರ ಸಿದ್ದರಾಮಯ್ಯ

Leave a Reply

Your email address will not be published. Required fields are marked *