ಬೆಂಗಳೂರು: ಐಸಿಸಿ ಟಿ-20 ಕ್ರಿಕೆಟ್ನಲ್ಲಿ ಭಾರತ ಮೂರನೇ ಬಾರಿ ವಿಶ್ವಕಪ್ (T20 World Cup) ಗಳಿಸಿರುವುದಕ್ಕೆ ನಾಡಿನ ಗಣ್ಯರು ಹರ್ಷ ವ್ಯಕ್ತಪಡಿಸಿದ್ದು, ಕ್ರಿಕೆಟ್ ತಂಡವನ್ನು ಅಭಿನಂದಿಸಿದ್ದಾರೆ.
ವಿಧಾನಸಭೆಯಲ್ಲಿ ತಂಡಕ್ಕೆ (T20 World Cup) ಅಭಿನಂದನೆ
ವಿಧಾನಸಭಾ ಸದನವು ಇಂದು ಟಿ-20 ವಿಶ್ವಕಪ್ನಲ್ಲಿ ಭಾರತ ತಂಡದ ಅಭೂತಪೂರ್ವ ಗೆಲುವಿಗೆ ಅಧಿಕೃತವಾಗಿ ಅಭಿನಂದನೆ ಸಲ್ಲಿಸಿತು. ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ ಸಭಾಧ್ಯಕ್ಷ ಯು.ಟಿ. ಖಾದರ್ ಅವರು, ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ಅಭೂತಪೂರ್ವ ಗೆಲುವು ಸಾಧಿಸಿದ್ದಕ್ಕೆ ಸದನದ ಪರವಾಗಿ ಅಭಿನಂದನೆ ಸಲ್ಲಿಸಿದರು.
ಭಾರತದ ಗೆಲುವಿಗೆ ಸಿಎಂ ಶುಭಾಶಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, “ಪ್ರಸ್ತುತ ವಿಶ್ವಕಪ್ ಪಂದ್ಯಾವಳಿಯ ಮೊದಲ ದಿನದಿಂದಲೂ ಭಾರತ ತಂಡ ಚಾಂಪಿಯನ್ ತರಹವೇ ಆಟವಾಡಿ ಪ್ರಶಸ್ತಿಗೆ ಅರ್ಹವೆಂಬುದನ್ನು ಸಾಬೀತುಪಡಿಸಿತು. ಪ್ರತಿಭಾವಂತ ಯುವ ತಂಡ ಎಲ್ಲಾ ವಿಧದಲ್ಲೂ ಪಾರಮ್ಯ ಮೆರೆದಿದೆ” ಎಂದು ಶ್ಲಾಘಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಈ ಗೆಲುವು ಅಪ್ರತಿಮ ಮತ್ತು ಅವಿರತ ಶ್ರಮದ ಪ್ರತಿಫಲವಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮಾತನಾಡಿ, ಭಾರತದ ಒಗ್ಗಟ್ಟಿನ ತಂಡ ಸ್ಫೂರ್ತಿಯ ಆಟ ಅಮೋಘ ಗೆಲುವಿಗೆ ಕಾರಣವಾಯಿತು. ತಂಡ ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿತು ಎಂದು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಎರಡನೇ ಬಾರಿ ಗೆದ್ದು ಬೀಗಿದ ಭಾರತ, ಟೀ20 ವಿಶ್ವಕಪ್ ನೀಲಿ ತಂಡದ ಮಡಿಲಿಗೆ
