ಪಶ್ಚಿಮ ಬಂಗಾಳ: ಮಾಲ್ಡಾ ಜಿಲ್ಲೆಯಲ್ಲಿ ನ್ಯಾಯಾಂಗ (West Bengal) ಅಧಿಕಾರಿಗಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ ಭೀಕರ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ಚುರುಕುಗೊಳಿಸಿದೆ. ಸುಪ್ರೀಂ ಕೋರ್ಟ್ ನೀಡಿದ ಖಡಕ್ ಸೂಚನೆಯ ಮೇರೆಗೆ ಎನ್‌ಐಎ ಈಗಾಗಲೇ 12 ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದು, ಸತ್ಯಾಸತ್ಯತೆ ಪತ್ತೆ ಹಚ್ಚಲು ತನಿಖಾಧಿಕಾರಿಗಳ ತಂಡ ಮಾಲ್ಡಾಕ್ಕೆ ತಲುಪಿದೆ.
ಒಂಬತ್ತು ಗಂಟೆಗಳ ಕಾಲ ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಜನರು
ಚುನಾವಣಾ ಪಟ್ಟಿಯ ಪರಿಷ್ಕರಣೆ ಕಾರ್ಯದಲ್ಲಿದ್ದ ಏಳು ಮಂದಿ ನ್ಯಾಯಾಂಗ ಅಧಿಕಾರಿಗಳನ್ನು ಗುಂಪೊಂದು ಅಡ್ಡಗಟ್ಟಿ, ಸುಮಾರು ಒಂಬತ್ತು ಗಂಟೆಗಳ ಕಾಲ ಅಕ್ರಮವಾಗಿ ಬಂಧನದಲ್ಲಿಟ್ಟಿತ್ತು. ಈ ಗುಂಪಿನಲ್ಲಿ ಮೂವರು ಮಹಿಳಾ ಅಧಿಕಾರಿಗಳು ಹಾಗೂ ಐದು ವರ್ಷದ ಪುಟ್ಟ ಮಗುವೂ ಇತ್ತು ಎನ್ನುವುದು ಘಟನೆಯ ತೀವ್ರತೆಯನ್ನು ಹೆಚ್ಚಿಸಿದೆ. ಅಧಿಕಾರಿಗಳಿಗೆ ಕನಿಷ್ಠ ಪಕ್ಷ ಆಹಾರ ಮತ್ತು ನೀರು ಕೂಡ ನೀಡದೆ ಇಡೀ ರಾತ್ರಿ ಸತಾಯಿಸಲಾಗಿತ್ತು. ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಬರೆದ ಪತ್ರವನ್ನು ಆಧರಿಸಿ, ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎನ್‌ಐಎ ತನಿಖೆಗೆ ಆದೇಶಿಸಿದೆ.
ಈ ಘಟನೆಯ ಕುರಿತು ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದು ಸಮಾಜಘಾತುಕ ಶಕ್ತಿಗಳು ಪೂರ್ವಯೋಜಿತವಾಗಿ ಮಾಡಿರುವ ದಾಳಿಯಾಗಿದ್ದು, ಅಧಿಕಾರಿಗಳ ರಕ್ಷಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ನ್ಯಾಯಾಲಯ ಅಸಮಾಧಾನ ಹೊರಹಾಕಿದೆ. ಸ್ಥಳೀಯ ಪೊಲೀಸರ ಕಾರ್ಯವೈಖರಿಯ ಮೇಲೆ ನಂಬಿಕೆ ಇಲ್ಲದ ಕಾರಣವೇ ಈ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗುತ್ತಿದೆ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ.
ಸರ್ಕಾರಕ್ಕೆ ಚಾಟಿ ಬೀಸಿದ ಸುಪ್ರೀಂ
ಈಗಾಗಲೇ ಬಂಧಿತರಾಗಿರುವ 26 ಆರೋಪಿಗಳನ್ನು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಮಹತ್ವದ ದಾಖಲೆಗಳನ್ನು ತಕ್ಷಣವೇ ಎನ್‌ಐಎ ಅಧಿಕಾರಿಗಳಿಗೆ ಒಪ್ಪಿಸಲು ಸೂಚಿಸಲಾಗಿದೆ. ಅಂದು ಸಂಕಷ್ಟದಲ್ಲಿದ್ದ ಅಧಿಕಾರಿಗಳು ಸಹಾಯಕ್ಕಾಗಿ ಕರೆ ಮಾಡಿದರೂ ಸ್ಪಂದಿಸದ ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೂ ಕೋರ್ಟ್ ಛೀಮಾರಿ ಹಾಕಿದೆ. ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಬಳಿ ಕ್ಷಮೆ ಯಾಚಿಸುವಂತೆ ಅವರಿಗೆ ಸೂಚನೆ ನೀಡಲಾಗಿದ್ದು, ಈ ಪ್ರಕರಣವು ಪಶ್ಚಿಮ ಬಂಗಾಳದ ಕಾನೂನು ಸುವ್ಯವಸ್ಥೆಯ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಮೋದಿ ಸರ್ಕಾರದಿಂದ ರೈತರಿಗೆ ಸಿಹಿಸುದ್ದಿ, ರಸಗೊಬ್ಬರ ಸಬ್ಸಿಡಿ ಹೆಚ್ಚಳ
