TOP NEWS

BJP: ಗೆದ್ದಿರೋದು ಒಂದು ಸೀಟು, ಕೊಡೋ ಬಿಲ್ಡಪ್ ನೋಡಿ: ಬಿಜೆಪಿಯ ‘ತಟಸ್ಥ’ ನಿಲುವಿಗೆ ನೆಟ್ಟಿಗರ ವ್ಯಂಗ್ಯ!

tamil nadu BJp trolled by people for social media post

ಚೆನ್ನೈ: ತಮಿಳುನಾಡಿನಲ್ಲಿ ಅಧಿಕಾರ ಹಿಡಿಯಲು ವಿವಿಧ ಪಕ್ಷಗಳು ಕಸರತ್ತು ನಡೆಸುತ್ತಿದ್ದರೆ, ಇತ್ತ ಬಿಜೆಪಿ (BJP) ಮಾತ್ರ ತಾನು ಯಾರನ್ನೂ ಬೆಂಬಲಿಸುವುದಿಲ್ಲ ಎಂದು ಘೋಷಿಸುವ ಮೂಲಕ ಸುದ್ದಿಯಾಗಿದೆ. ಆದರೆ, ವಿಧಾನಸಭೆಯಲ್ಲಿ ಬಿಜೆಪಿ ಹೊಂದಿರುವ ಸಂಖ್ಯಾಬಲದ ಹಿನ್ನೆಲೆಯಲ್ಲಿ ಈ ನಿರ್ಧಾರವು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಹಾಸ್ಯಕ್ಕೆ ಕಾರಣವಾಗಿದೆ.

ನೈನಾರ್ ನಾಗೇಂದ್ರನ್ ಪತ್ರದ ಸಾರಾಂಶ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, “ಜನರು ನಮಗೆ ಸರ್ಕಾರ ರಚಿಸುವಷ್ಟು ಬಹುಮತ ನೀಡಿಲ್ಲ. ಹೀಗಾಗಿ ಜನರ ತೀರ್ಪಿಗೆ ತಲೆಬಾಗಿ ನಾವು ತಟಸ್ಥವಾಗಿರಲು ನಿರ್ಧರಿಸಿದ್ದೇವೆ. ನಾವು ಯಾವುದೇ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ ಅಥವಾ ಸರ್ಕಾರ ರಚನೆಯ ಪ್ರಕ್ರಿಯೆಯಲ್ಲಿ ಭಾಗಿಯಾಗುವುದಿಲ್ಲ” ಎಂದು ತಿಳಿಸಿದ್ದಾರೆ.

ಶಾಸಕ ಒಬ್ಬ, ಹೇಳಿಕೆ ಹತ್ತಿರದ್ದು! ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಿದ್ದ 27 ಕ್ಷೇತ್ರಗಳ ಪೈಕಿ ಗೆದ್ದಿರುವುದು ಕೇವಲ ಒಂದು ಸ್ಥಾನದಲ್ಲಿ ಮಾತ್ರ. 234 ಸದಸ್ಯರಿರುವ ಸದನದಲ್ಲಿ ಕೇವಲ ಒಬ್ಬನೇ ಶಾಸಕನನ್ನು ಇಟ್ಟುಕೊಂಡು, ‘ನಾವು ಯಾರಿಗೂ ಬೆಂಬಲ ಕೊಡುವುದಿಲ್ಲ’ ಎಂದು ಬಿಜೆಪಿ ಗಂಭೀರ ಪ್ರಕಟಣೆ ನೀಡಿರುವುದನ್ನು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. “ಒಬ್ಬನೇ ಶಾಸಕನಿರುವ ನಿಮ್ಮ ಬೆಂಬಲ ಯಾರಿಗೆ ಬೇಕು?” ಎಂದು ಕೆಲವರು ಲೇವಡಿ ಮಾಡಿದರೆ, “ಗೆದ್ದಿರೋದು ಒಂದು ಸೀಟು, ಅದಕ್ಕೆ ಇಷ್ಟೊಂದು ಪ್ರಚಾರ ಬೇಕಿತ್ತೇ?” ಎಂದು ಟ್ರೋಲ್ ಮಾಡುತ್ತಿದ್ದಾರೆ.

ರಾಜಕೀಯ ಸಂಚಲನ: ದಳಪತಿ ವಿಜಯ್ ಅವರ ಟಿವಿಕೆ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಅಧಿಕಾರ ಹಿಡಿಯಲು ಎಡಪಕ್ಷಗಳ ಬೆಂಬಲ ಕೋರುತ್ತಿರುವ ಈ ಸಂಕೀರ್ಣ ಸಮಯದಲ್ಲಿ, ಬಿಜೆಪಿಯ ಈ ತಟಸ್ಥ ನಿಲುವು ಚರ್ಚೆಗೆ ಗ್ರಾಸವಾಗಿದೆ. ವಿರೋಧಿಗಳು ಇದನ್ನು ವ್ಯಂಗ್ಯವಾಡುತ್ತಿದ್ದರೂ, ಅಣ್ಣಾಮಲೈ ಬೆಂಬಲಿಗರು ಮಾತ್ರ ಭವಿಷ್ಯದಲ್ಲಿ ಬಿಜೆಪಿ ರಾಜ್ಯದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆಯಲಿದೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್-ಟಿವಿಕೆ ಮೈತ್ರಿಗೆ ಮಣಿಶಂಕರ್ ಅಯ್ಯರ್ ಗರಂ: ‘ಇದು ದ್ರಾವಿಡ ರಾಜಕೀಯದ ಸೆಲ್ಫ್ ಗೋಲ್’ ಎಂದು ಕಿಡಿ!

Leave a Reply

Your email address will not be published. Required fields are marked *