ಉದಯಪುರ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ (Rashmika) ಇಂದು ಸತಿಪತಿಗಳಾಗಿದ್ದು, ತೆಲುಗು ಹಾಗೂ ಕೊಡವ ಸಂಪ್ರದಾಯದಂತೆ ಇಬ್ಬರೂ ಹಸೆಮಣೆ ಏರಿದ್ದಾರೆ.
ಮೊದಲು ತೆಲುಗು ಸಂಪ್ರದಾಯದಂತೆ ವಿವಾಹ
ಇನ್ನು ಮಾಹಿತಿಗಳ ಪ್ರಕಾರ, ಇಂದು ಬೆಳಗ್ಗೆ ರಶ್ಮಿಕಾ ಹಾಗೂ ವಿಜಯ್ ತೆಲುಗು ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದಾರೆ. ಹಾಗೆಯೇ, ಸಂಜೆ ಕೊಡವ ಸಂಪ್ರದಾಯದಂತೆ ವಿವಾಹ ನಡೆಯಲಿದೆ ಎನ್ನಲಾಗಿದೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಉದಯಪುರದ ಐಟಿಸಿ ಮೆಮೆಂಟೋಸ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಬಹಳ ಕಡಿಮೆ ಅತಿಥಿಗಳನ್ನ ಮದುವೆಗೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ.
ಶುಭ ಮಹೂರ್ತ ಸಂಜೆ 5 ಗಂಟೆಗೆ ಕೊಡವ ಸಂಪ್ರದಾಯದಂತೆ ವಿವಾಹ ಸಮಾರಂಭ ಆರಂಭ ಆಗಿದ್ದು, ಆಚರಣೆಗಳು ಒಂದು ಗಂಟೆಯಿಂದ ಎರಡು ಗಂಟೆಗಳವರೆಗೆ ನಡೆಯುವ ನಿರೀಕ್ಷೆಯಿದೆ. ಇನ್ನು ಇದೇ ಮಾರ್ಚ್ 4 ರಂದು ಆರತಕ್ಷತೆ ಸಮಾರಂಭವನ್ನ ನವಜೋಡಿಗಳು ಹಮ್ಮಿಕೊಂಡಿದ್ದು, ಬಾಲಿವುಡ್, ಕಾಲಿವುಡ್ ಹಾಗೂ ಟಾಲಿವುಡ್ ಮತ್ತು ಸ್ಯಾಂಡಲ್‌ವುಡ್‌ನ ಅನೇಕ ಸಿನಿ ತಾರೆಯರನ್ನ ಆಹ್ವಾನಿಸಿದ್ದಾರೆ ಎನ್ನುವ ಮಾಹಿತಿ ಇದೆ.
ಜೋಡಿಗೆ ಶುಭಾಶಯಗಳ ಸುರಿಮಳೆ
ಅನಿಮಲ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಜೊತೆ ನಟಿಸಿದ್ದ ಹಿರಿಯ ನಟಿ ಇಂದಿರಾ ಕೃಷ್ಣನ್ ದಂಪತಿಗೆ ಶುಭ ಹಾರೈಸಿದರು. ಮಂದಣ್ಣ ಜೊತೆಗಿನ ಹಿಂದಿನ ಫೋಟೋ ಹಂಚಿಕೊಂಡ ಅವರು, “ನಿಮ್ಮ ಹೊಸ ಆರಂಭಕ್ಕೆ @rashmika_mandanna ಮತ್ತು vijaydevarakonda ಅವರಿಗೆ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಇದಲ್ಲದೇ, ಅಭಿಮಾನಿಗಳು ಹಾಗೂ ಸಿನಿರಂಗದ ಅನೇಕ ತಾರೆಯರು ನವ ಜೋಡಿಗೆ ಶುಭಕೋರಿದ್ದಾರೆ.
ಇನ್ನು ವಿಜಯ್ ದೇವರಕೊಂಡ ಅವರ ಕಿರಿಯ ಸಹೋದರ ಆನಂದ್ ದೇವರಕೊಂಡ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಮದುವೆಯ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಅಲ್ಲದೇ, ತೆಲುಗು ಸಂಪ್ರದಾಯದಂತೆ ಮದುವೆ ಕಾರ್ಯಕ್ರಮ ಮುಗಿದ ನಂತರ ನಟಿಯ ಟೀಮ್ ಉದಯಪುರದಲ್ಲಿ ಇದ್ದ ಮಾಧ್ಯಮದವರಿಗೆ ಹಾಗೂ ಇತರರಿಗೆ ಸಿಹಿವಿತರಣೆ ಸಹ ಮಾಡಿದ್ದು, ಮದುವೆ ಬಹಳ ಚೆನ್ನಾಗಿ ಆಗಿದೆ ಎಂದು ಹೇಳಿದ್ದಾರೆ.
