ಪಾಕಿಸ್ತಾನ: ಆಸ್ಟ್ರೇಲಿಯಾ ಪ್ರವಾಸದ ವೇಳೆ ಪಾಕಿಸ್ತಾನ (Pakistan) ಹಾಕಿ ತಂಡದ ನಾಯಕ ಶಕೀಲ್ ಅಮ್ಮದ್ ಬಟ್, ವಸತಿ ಕೊರತೆಯಿಂದಾಗಿ ಬೀದಿಗಳಲ್ಲಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಫೆಡರೇಶನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪಾತ್ರೆ ತೊಳೆಯುವ ಸ್ಥಿತಿ ಬಂದಿತ್ತು ಎಂದ ಆಟಗಾರ
ಇಂದು ಬೆಳಿಗ್ಗೆ ಲಾಹೋರ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಾಕಿಸ್ತಾನ ಹಾಕಿ ಫೆಡರೇಶನ್ ಸುಳ್ಳು ಹೇಳುತ್ತಿದೆ ಮತ್ತು ಸಾಕಾಯಿತು ನಮಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಿನ ಫೆಡರೇಶನ್ ಆಡಳಿತದೊಂದಿಗೆ ನಾವು ಕೆಲಸ ಮಾಡಲು ಸಾಧ್ಯವಿಲ್ಲ. ಪಂದ್ಯ ಆಡಲು ಹೋಗುವ ಮೊದಲು ಆಟಗಾರರು ಅಡುಗೆಮನೆ ಸ್ವಚ್ಛಗೊಳಿಸಿ ಪಾತ್ರೆ ತೊಳೆಯಬೇಕಾದ ಪರಿಸ್ಥಿತಿ ಬಂದಿತ್ತು ಎಂದು ಕೋಪದಿಂದ ಮಾತನಾಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ರಾಷ್ಟ್ರೀಯ ತಂಡದ ಹೋಟೆಲ್ ವಸತಿ ವ್ಯವಸ್ಥೆ ಮಾಡಲು ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ ಕ್ರೀಡಾ ಮಂಡಳಿ (ಪಿಎಸ್‌ಬಿ) 10 ಮಿಲಿಯನ್ ರೂಪಾಯಿಗಳಿಗೂ ಹೆಚ್ಚು ಹಣವನ್ನು ನೀಡಿರುವುದಾಗಿ ದೃಢಪಡಿಸಿದ ನಂತರ ಪಿಎಚ್‌ಎಫ್ ತೀವ್ರ ಟೀಕೆಗೆ ಗುರಿಯಾಗಿದೆ.
ಪಾಕಿಸ್ತಾನ ಹಾಕಿ ತಂಡವು ಕ್ಯಾನ್‌ಬೆರಾಗೆ ತೆರಳುವ ಮೊದಲು ಸಿಡ್ನಿ ವಿಮಾನ ನಿಲ್ದಾಣದಲ್ಲಿ 13-14 ಗಂಟೆಗಳ ಕಾಲ ಕಾಯಬೇಕಾಯಿತು. ಎಫ್‌ಐಎಚ್ ಪ್ರೊ ಲೀಗ್ ಪಂದ್ಯಗಳಿಗೆ ಮುಂಚಿತವಾಗಿ ತಂಡವು ತನ್ನ ಹೋಟೆಲ್‌ಗೆ ಹೋದ ನಂತರ ಸಹ ಅನೇಕ ಸಮಸ್ಯೆಗಳನ್ನ ಅನುಭವಿಸಬೇಕಾಯಿತು ಎನ್ನಲಾಗಿದೆ.
ಬೀದಿಯಲ್ಲಿ ಅಲೆದಾಡಿದ ಆಟಗಾರರು
ಮಾಹಿತಿಗಳ ಪ್ರಕಾರ, ಆಟಗಾರರು ಗಂಟೆಗಟ್ಟಲೆ ಕಾಯಬೇಕಾಯಿತು ಮತ್ತು ಅವರಿಗೆ ವಸತಿ ವ್ಯವಸ್ಥೆ ಮಾಡುವ ಮೊದಲು ಬೀದಿಗಳಲ್ಲಿ ಅಲೆದಾಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಅಲ್ಲದೇ, ಮರುದಿನ ಮಧ್ಯಾಹ್ನ, ಅವರು ಆಸ್ಟ್ರೇಲಿಯಾ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಬೇಕಾಗಿತ್ತು, ಆದರೆ ತಂಡವು 2-3 ಅಂತರದಿಂದ ಸೋತಿತು. ಆಸ್ಟ್ರೇಲಿಯಾ ಲೆಗ್‌ನಲ್ಲಿ ಪಾಕಿಸ್ತಾನ ತನ್ನ ಎಲ್ಲಾ ಪಂದ್ಯಗಳನ್ನು ಆಡಿತು, ಆತಿಥೇಯರ ವಿರುದ್ಧ ಹಾಗೂ ಜರ್ಮನಿಯ ವಿರುದ್ಧ ಸೋತಿತು.
“ನಾವು 13 ದಿನಗಳು ಇರಬೇಕಾದ ಏರ್‌ಬಿಎನ್‌ಬಿ ವಸತಿ ಸೌಕರ್ಯವನ್ನು 10 ದಿನಗಳವರೆಗೆ ವ್ಯವಸ್ಥೆ ಮಾಡಲಾಗಿತ್ತು ಎಂಬುದು ನೋವಿನ ವಿಚಾರ. 10 ದಿನಗಳ ನಂತರ ನಾವು ಅಗ್ಗದ ಹೋಟೆಲ್‌ಗೆ ಸ್ಥಳಾಂತರಗೊಳ್ಳಬೇಕಾಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಾಕ್ ಕ್ರಿಕೆಟ್ ಮಂಡಳಿ ವಿರುದ್ಧ ಗರಂ ಆದ ಮೊಹಮ್ಮದ್ ಯೂಸುಫ್
