ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಡಾಲಿ ಧನಂಜಯ್ (Daali Dhanajaya) ಈಗ ನಟನೆಯ ಜೊತೆಗೆ ನಿರ್ಮಾಣದಲ್ಲೂ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಇಷ್ಟು ದಿನ ಬೆಳ್ಳಿಪರದೆಯ ಮೇಲೆ ಮಿಂಚುತ್ತಿದ್ದ ಅವರು, ಇದೀಗ ‘ಜೆರಾಕ್ಸ್’ ಎಂಬ ವೆಬ್ ಸರಣಿಯ ಮೂಲಕ ಅಧಿಕೃತವಾಗಿ ಒಟಿಟಿ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಪ್ರತಿಭಾವಂತ ನಿರ್ದೇಶಕನ ಜೊತೆ ಸೀರೀಸ್
ಇತ್ತೀಚೆಗೆ ‘ಬ್ಲಿಂಕ್’ ಸಿನಿಮಾದ ಮೂಲಕ ಸಿನಿರಸಿಕರ ಗಮನ ಸೆಳೆದಿದ್ದ ಪ್ರತಿಭಾವಂತ ನಿರ್ದೇಶಕ ಶ್ರೀನಿಧಿ ಬೆಂಗಳೂರು ಈ ಸರಣಿಯನ್ನು ನಿರ್ದೇಶಿಸುತ್ತಿದ್ದಾರೆ. ಬಹಳ ದಿನಗಳಿಂದ ಒಂದು ವಿಭಿನ್ನವಾದ ವೆಬ್ ಸರಣಿ ನಿರ್ಮಿಸಬೇಕು ಎಂಬ ಆಸೆ ಧನಂಜಯ್ ಅವರಿಗಿತ್ತು. ಶ್ರೀನಿಧಿ ಹೇಳಿದ ಕಥೆಯಲ್ಲಿದ್ದ ಹೊಸತನ ಮತ್ತು ಕಾಮಿಡಿ ಧನಂಜಯ್ ಅವರಿಗೆ ಎಷ್ಟು ಇಷ್ಟವಾಯಿತೆಂದರೆ, ತಾವೇ ಇದನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈಗ ಈ ಪ್ರಾಜೆಕ್ಟ್‌ಗಾಗಿ ‘ಜೀ-5’ ವೇದಿಕೆಯೂ ಸಿದ್ಧವಾಗಿದೆ.
ನಿರ್ದೇಶಕ ಶ್ರೀನಿಧಿ ಬೆಂಗಳೂರು ಅವರ ಪ್ರಕಾರ, ‘ಜೆರಾಕ್ಸ್’ ಸರಣಿಯು ಕೇವಲ ಹಾಸ್ಯಕ್ಕೆ ಸೀಮಿತವಾಗಿಲ್ಲ. ಇದರಲ್ಲಿ ಫ್ಯಾಂಟಸಿ ಮತ್ತು ಡಾರ್ಕ್ ಕಾಮಿಡಿಯ ಜೊತೆಗೆ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವ ಥ್ರಿಲ್ಲರ್ ಅಂಶಗಳೂ ಇವೆ. ಸಿನಿಮಾಕ್ಕಿಂತ ವೆಬ್ ಸರಣಿಯ ಓಟವೇ ಬೇರೆ ಇರುವುದರಿಂದ, ಪ್ರತಿ ಸಂಚಿಕೆಯಲ್ಲೂ ಕುತೂಹಲ ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಈ ಹೊಸ ಪ್ರಯತ್ನದಲ್ಲಿ ಶ್ರೀನಿಧಿ ಅವರು ಪ್ರೇಕ್ಷಕರನ್ನು ಹೇಗೆ ರಂಜಿಸಲಿದ್ದಾರೆ ಎಂಬ ಕುತೂಹಲ ಸದ್ಯ ಸಿನಿವಲಯದಲ್ಲಿದೆ.
ಸದ್ಯದಲ್ಲಿ ಸಿಗಲಿದೆ ಹೆಚ್ಚಿನ ಮಾಹಿತಿ
ತಮ್ಮ ಮೊದಲ ವೆಬ್ ಸರಣಿಯ ಬಗ್ಗೆ ಮಾತನಾಡಿರುವ ಡಾಲಿ ಧನಂಜಯ್, ಒಂದು ಒಳ್ಳೆಯ ಪ್ರಯತ್ನಕ್ಕಾಗಿ ಹುಡುಕಾಟ ನಡೆಸುತ್ತಿದ್ದ ತಮಗೆ ಈಗ ಸರಿಯಾದ ಕಥೆ ಮತ್ತು ವೇದಿಕೆ ಎರಡೂ ಸಿಕ್ಕಿವೆ ಎಂದು ಖುಷಿ ಹಂಚಿಕೊಂಡಿದ್ದಾರೆ. ‘ಜೆರಾಕ್ಸ್’ ಸರಣಿಯ ಹೆಚ್ಚಿನ ಮಾಹಿತಿ ಹಾಗೂ ಇದರಲ್ಲಿ ನಟಿಸಲಿರುವ ಇತರ ಕಲಾವಿದರ ವಿವರಗಳನ್ನು ಚಿತ್ರತಂಡ ಶೀಘ್ರದಲ್ಲೇ ಪ್ರಕಟಿಸಲಿದೆ. ಡಾಲಿ ಮತ್ತು ಶ್ರೀನಿಧಿ ಕಾಂಬಿನೇಷನ್‌ನ ಈ ಕ್ರೇಜಿ ಸರಣಿ ಸದ್ಯದಲ್ಲೇ ಜೀ-5 ನಲ್ಲಿ ಬಿಡುಗಡೆಯಾಗಲಿದೆ.
