CRIME: ಕೇರಳ ಬಾಲಕಿ ನಾಪತ್ತೆ ಪ್ರಕರಣ, ಮೃತದೇಹ ಪತ್ತೆ

Crime Kerala Girl who was Missing Found Dead

ಚಿಕ್ಕಮಗಳೂರು: ದತ್ತಪೀಠದ ಮಾಣಿಕ್ಯಧಾರಾ ಜಲಪಾತದ ಬಳಿ ಕಳೆದ ಮಂಗಳವಾರ ನಾಪತ್ತೆಯಾಗಿದ್ದ ಕೇರಳ ಮೂಲದ 10ನೇ ತರಗತಿ ವಿದ್ಯಾರ್ಥಿನಿ ಶ್ರೀನಂದಾ (15) ಅವರ ಮೃತದೇಹ ಶುಕ್ರವಾರ (Crime) ಪತ್ತೆಯಾಗಿದೆ. ಅರಿಶಿನಗುಪ್ಪೆ ಬೆಟ್ಟದ ಸಾಲಿನ ಸಾವಿರಾರು ಅಡಿ ಆಳದ ಪ್ರಪಾತದಲ್ಲಿ ಬಾಲಕಿಯ ಶವ ಪತ್ತೆಯಾಗಿದ್ದು, ಇದರೊಂದಿಗೆ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಸುದೀರ್ಘ ಶೋಧ ಕಾರ್ಯ ಅಂತ್ಯಗೊಂಡಿದೆ.

ಪೋಷಕರ ಜೊತೆ ಬಂದಿದ್ದ ಬಾಲಕಿ

ಕೇರಳದ ಪಾಲಕ್ಕಾಡ್ ಜಿಲ್ಲೆಯ ಶ್ರೀನಂದಾ ಅವರು ತಮ್ಮ ಕುಟುಂಬದ ಸುಮಾರು 40 ಮಂದಿ ಸಂಬಂಧಿಕರ ಜೊತೆ ಪ್ರವಾಸಕ್ಕೆ ಬಂದಿದ್ದರು. ಏಪ್ರಿಲ್ 7ರ ಮಂಗಳವಾರ ಸಂಜೆ 5:30ರ ಸುಮಾರಿಗೆ ಮಾಣಿಕ್ಯಧಾರಾ ಜಲಪಾತದ ಬಳಿ ಬಾಲಕಿ ಹಠಾತ್ತನೆ ನಾಪತ್ತೆಯಾಗಿದ್ದಳು. ಕುಟುಂಬಸ್ಥರು ರಾತ್ರಿ 8 ಗಂಟೆಯವರೆಗೆ ಹುಡುಕಾಟ ನಡೆಸಿದರೂ ಪತ್ತೆಯಾಗದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ, ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸುಮಾರು 70ಕ್ಕೂ ಹೆಚ್ಚು ಸಿಬ್ಬಂದಿ ಜಂಟಿ ಕಾರ್ಯಾಚರಣೆ ಆರಂಭಿಸಿದ್ದರು.

ಆಳದ ಕಂದಕದಲ್ಲಿ ಸಿಕ್ಕ ದೇಹ

ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರು ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮಾ ಅವರಿಂದ ಮಾಹಿತಿ ಪಡೆದಿದ್ದರು. ಬಾಲಕಿಯ ಪತ್ತೆಗಾಗಿ ಡಾಗ್ ಸ್ಕ್ವಾಡ್, ಸಾಮಾನ್ಯ ಡ್ರೋನ್ ಹಾಗೂ ಉಷ್ಣತೆಯನ್ನು ಪತ್ತೆಹಚ್ಚುವ ಥರ್ಮಲ್ ಡ್ರೋನ್‌ಗಳನ್ನು ಬಳಸಲಾಗಿತ್ತು. ಅಲ್ಲದೆ ಎಸ್‌ಡಿಆರ್‌ಎಫ್ ತಂಡವೂ ಕಾರ್ಯಾಚರಣೆಯಲ್ಲಿ ಕೈಜೋಡಿಸಿತ್ತು. ಅಂತಿಮವಾಗಿ ಶುಕ್ರವಾರ ಮಾಣಿಕ್ಯಧಾರಾ ಬೆಟ್ಟದ ಅತ್ಯಂತ ಆಳದ ಕಂದಕದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ.

ಸದ್ಯ ಮೃತದೇಹವನ್ನು ಕಷ್ಟಪಟ್ಟು ಮೇಲೆತ್ತಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕಿ ಪ್ರಪಾತಕ್ಕೆ ಕಾಲು ಜಾರಿ ಬಿದ್ದಿದ್ದಾಳೆಯೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಅಹಮದಾಬಾದ್ ಪುಟ್ಟ ಮಕ್ಕಳ ಸಾವು ಪ್ರಕರಣ: ದೋಸೆ ಹಿಟ್ಟಿನ ನಿಗೂಢತೆ ಬೆನ್ನತ್ತಿದ ಪೊಲೀಸರು

Leave a Reply

Your email address will not be published. Required fields are marked *