ನವದೆಹಲಿ: ರಾತ್ರಿ ಪಾರ್ಟಿಗೆ ಹೋಗಿದ್ದ 36 ವರ್ಷದ ಉದ್ಯಮಿಯೊಬ್ಬರನ್ನು ಮೂವರು ಫುಡ್ ಡೆಲಿವರಿ ಬಾಯ್ಗಳು ಹಲ್ಲೆ ಮಾಡಿ ಕೊಲೆ ಮಾಡಿರುವ ಪ್ರಕರಣ ದೆಹಲಿಯ (Crime) ಕನ್ನಾಟ್ ಪ್ಲೇಸ್ನಲ್ಲಿ ನಡೆದಿದೆ.
ಜನವರಿ 3 ರಂದು ನಡೆದಿದ್ದ ಘಟನೆ
ಜನವರಿ 3 ರ ರಾತ್ರಿ ಈ ಘಟನೆ ನಡೆದಿದ್ದುಮ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೇ, ತೀವ್ರವಾಗಿ ಹಲ್ಲೆಗೊಳಗಾಗಿದ್ದ ಉದ್ಯಮಿ ಶಿವಂ ಗುಪ್ತಾ ಎರಡು ವಾರಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಜನವರಿ 19 ರಂದು ಅವರು ನಿಧನರಾಗಿದ್ದಾರೆ.
ಪೊಲೀಸರು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡುತ್ತಿದ್ದು ಮತ್ತು ಗುಪ್ತಾ ಅವರ ರಕ್ತದ ಕಲೆಗಳಿಂದ ಕೂಡಿದ ಬಟ್ಟೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿ ಪರೀಕ್ಷೆ ಮಾಡಿಸುತ್ತಿದ್ದಾರೆ.
ಏನಿದು ಪ್ರಕರಣ?
ಜನವರಿ 3 ರಂದು ರಾತ್ರಿ, ಕನ್ನಾಟ್ ಪ್ಲೇಸ್ನ ಪಾದಚಾರಿ ಮಾರ್ಗದಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬ ಬಿದ್ದಿರುವ ಬಗ್ಗೆ ಪೊಲೀಸ್ ತಂಡಕ್ಕೆ ಕರೆ ಬಂದಿತು. ಗಂಭೀರ ಗಾಯಗಳಿಂದ ಬಳಲುತ್ತಿದ್ದ ಗುಪ್ತಾ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯರು ಗುಪ್ತಾ ಅವರ ತಲೆಯ ಮೇಲೆ ಗಂಭೀರವಾದ ಗಾಯಗಳನ್ನು ಪತ್ತೆ ಮಾಡಿದ್ದರು. ಗುಪ್ತಾ ಹೇಳಿಕೆ ನೀಡಲು ಸಾಧ್ಯವಾಗಿರಲಿಲ್ಲ, ಹಾಗಾಗಿ ಪೊಲೀಸರಿಗೆ ಹಲ್ಲೆ ಆರೋಪಿಗಳನ್ನ ಹಾಗೂ ಕಾರಣವನ್ನ ಪತ್ತೆ ಮಾಡಲು ಆಗಿರಲಿಲ್ಲ. ಜನವರಿ 4 ರಂದು ಗುಪ್ತಾ ಅವರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಅಲ್ಲಿ ಮರುದಿನ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಈ ಸಮಯದಲ್ಲಿ ಅವರು ಚೇತರಿಸಿಕೊಳ್ಳುತ್ತಾರೆ ಎಂದು ಭಾವಿಸಲಾಗಿತ್ತು, ಆದರೆ ಅವರು ಜನವರಿ 19 ರಂದು ನಿಧನರಾಗಿದ್ದಾರೆ.
ಇನ್ನ ಮಗನಿಗೆ ನ್ಯಾಯ ಕೊಡಿಸುವಂತೆ ಗುಪ್ತಾ ಅವರ ಪೋಷಕರು ಮನವಿ ಮಾಡಿದ್ದು, ನನ್ನ ಮಗನೇ ನನ್ನ ಸರ್ವಸ್ವವಾಗಿದ್ದ. ಈಗ ನಮಗೆ ನ್ಯಾಯ ಸಿಗುತ್ತದೆ ಎಂಬುದೇ ಆಶಯ. ಬೇರೆಯವರ ಮನೆಯೂ ಈ ರೀತಿ ನಾಶವಾಗದಂತೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹ ಮಾಡಿದ್ದಾರೆ. ಸದ್ಯದ ಮಾಹಿತಿಗಳ ಪ್ರಕಾರ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧನ ಮಾಡಿದ್ದಾರೆ.
ಇದನ್ನೂ ಓದಿ: ಅನೈತಿಕ ಸಂಬಂಧ ಕೊಲೆಗೆ ಸ್ಕೆಚ್, ಖ್ಯಾತ ಜ್ಯೋತಿಷಿ ಅರೆಸ್ಟ್
