ಬೆಂಗಳೂರು: ರಾಜ್ಯ ಸರ್ಕಾರದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳ ದುರುಪಯೋಗಕ್ಕೆ ತಡೆ ಒಡ್ಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಶುಕ್ರವಾರ ನಡೆದ ಗ್ಯಾರಂಟಿ ಯೋಜನೆಗಳ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅರ್ಹರಾದ ಯಾವುದೇ ಒಬ್ಬ ನಾಗರಿಕನಿಗೂ ಯೋಜನೆಯ ಸೌಲಭ್ಯ ಸಿಗುವುದು ತಪ್ಪಬಾರದು, ಆದರೆ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಖಜಾನೆಗೆ ಕನ್ನ ಹಾಕುವ ಅನರ್ಹರ ಆಟಕ್ಕೆ ತಕ್ಷಣವೇ ಮುಕ್ತಿ ಹಾಡಬೇಕು ಎಂದು ಅವರು ಆದೇಶಿಸಿದರು.
ಯಾರೆಲ್ಲಾ ಸಭೆಯಲ್ಲಿ ಭಾಗವಹಿಸಿದ್ದರು?
ಈ ಉನ್ನತ ಮಟ್ಟದ ಸಭೆಯಲ್ಲಿ ಸಚಿವರಾದ ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಪ್ರಿಯಾಂಕ್ ಖರ್ಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಗ್ಯಾರಂಟಿ ಪ್ರಾಧಿಕಾರದ ಪ್ರಮುಖ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಆಡಿಟರ್ ಜನರಲ್ (ಎಜಿ) ನೀಡಿರುವ ವರದಿಯಲ್ಲಿ ಉಲ್ಲೇಖವಾಗಿರುವ ದೋಷಗಳನ್ನು ಕಂಡು ಸಭೆಯಲ್ಲಿದ್ದ ಗಣ್ಯರು ದಂಗಾಗಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಮೃತಪಟ್ಟಿರುವ ಮಹಿಳೆಯರ ಬ್ಯಾಂಕ್ ಖಾತೆಗಳಿಗೂ ಇಂದಿಗೂ ಗೃಹಲಕ್ಷ್ಮಿ ಯೋಜನೆಯ ಮಾಸಿಕ ಹಣ ತಲುಪುತ್ತಿರುವುದು ಸಭೆಯಲ್ಲಿ ಚರ್ಚೆಗೆ ಬಂದಿತು. ಇ-ಕೆವೈಸಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಇದಕ್ಕಿಂತಲೂ ಮಿಗಿಲಾಗಿ, ಒಂದೇ ಬ್ಯಾಂಕ್ ಖಾತೆಯನ್ನು ಬಳಸಿ ಹಲವು ಜನ ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದು, ಈವರೆಗೆ ಬರೋಬ್ಬರಿ 60 ಕೋಟಿ ರೂಪಾಯಿ ಹಣ ದುರುಪಯೋಗವಾಗಿದೆ ಎಂಬ ಕಹಿ ಸತ್ಯ ಬಯಲಾಗಿದೆ. ಒಬ್ಬನೇ ವ್ಯಕ್ತಿ ಬೇರೆ ಬೇರೆ ಹೆಸರಿನಲ್ಲಿ ಹಲವು ಖಾತೆಗಳನ್ನು ತೆರೆದಿರುವುದು ಪತ್ತೆಯಾಗಿದ್ದು, ಇದರ ತನಿಖೆಗೆ ಸಿಎಂ ಸೂಚಿಸಿದ್ದಾರೆ.
ಹೊರರಾಜ್ಯಗಳಿಗೆ ಹೋಗುತ್ತಿದೆ ಹಣ
ಮತ್ತೊಂದೆಡೆ, ಸಾರ್ವಜನಿಕ ಹಣದ ಹರಿವು ಹೊರರಾಜ್ಯಗಳಿಗೆ ಹೋಗುತ್ತಿರುವುದಕ್ಕೆ ಡಿ.ಕೆ. ಶಿವಕುಮಾರ್ ತೀವ್ರ ಕಳವಳ ವ್ಯಕ್ತಪಡಿಸಿದರು. ಏರ್ಟೆಲ್ ಡಿಜಿಟಲ್ ಬ್ಯಾಂಕ್ ಮೂಲಕ ಯುಪಿಐ ಖಾತೆಗಳನ್ನು ಕ್ರಿಯೇಟ್ ಮಾಡಿ ಅಕ್ರಮ ಎಸಗಲಾಗುತ್ತಿದೆ. ಕರ್ನಾಟಕದ ತೆರಿಗೆದಾರರ ಹಣ ನೆರೆ ರಾಜ್ಯಗಳ ಬ್ಯಾಂಕ್ ಖಾತೆಗಳಿಗೆ ಹಾಗೂ ಅಲ್ಲಿನ ಮತದಾರರ ಕೈಸೇರುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ, ಇಂತಹ ಖಾತೆಗಳನ್ನು ತಕ್ಷಣವೇ ಬ್ಲಾಕ್ ಮಾಡಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಗೃಹಜ್ಯೋತಿಯ ಮಾದರಿಯಲ್ಲೇ ಆರಂಭದಲ್ಲೇ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದ್ದರೆ ಈ ನಷ್ಟವಾಗುತ್ತಿರಲಿಲ್ಲ ಎಂದ ಸಿಎಂ, ಬ್ಯಾಂಕ್ ಲೋನ್ ಹೊಂದಾಣಿಕೆಗಾಗಿ ಮಹಿಳೆಯರು ಖಾತೆ ಬದಲಾಯಿಸಿದ್ದರೆ ಅವರಿಗೆ ತೊಂದರೆ ಕೊಡಬೇಡಿ ಎಂದರು. ಹಣ ಸಂದಾಯವಾದ ತಕ್ಷಣ ಮೊಬೈಲ್ಗೆ ಧ್ವನಿ ಸಂದೇಶ (ವಾಯ್ಸ್ ಮೆಸೇಜ್) ಕಳುಹಿಸುವ ವ್ಯವಸ್ಥೆ ತರಲು ಹಾಗೂ ಶ್ರೀಮಂತರು ಸ್ವಯಂಪ್ರೇರಿತರಾಗಿ ಗ್ಯಾರಂಟಿಗಳನ್ನು ಬಿಟ್ಟುಕೊಟ್ಟರೆ ಅವರನ್ನು ಗೌರವಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಇದೆ ವೇಳೆ ದೇಶದಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆ ಹಾಗೂ ತಲಾ ಆದಾಯ ಕುಸಿತಕ್ಕೆ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳೇ ಕಾರಣ ಎಂದು ಸಭೆಯಲ್ಲಿ ಆಕ್ಷೇಪಿಸಲಾಯಿತು.
ಇದನ್ನೂ ಓದಿ: ಬೆಂಗಳೂರಲ್ಲಿ ಮೆಟ್ರೋ ಫೇಸ್-3 ಅಬ್ಬರ: 3,600ಕ್ಕೂ ಹೆಚ್ಚು ಮರಗಳ ಕತ್ತರಿಸಲು ಬಿಎಂಆರ್ಸಿಎಲ್ ಪ್ಲಾನ್
