ನವದೆಹಲಿ: ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಲಡಾಖ್ನ ಖ್ಯಾತ ಶಿಕ್ಷಣ ತಜ್ಞ ಹಾಗೂ ಹೋರಾಟಗಾರ ಸೋನಂ ವಾಂಗ್ಚುಕ್ (Sonam Wangchuk) ಅವರ ಪ್ರತಿಭಟನೆ ಶುಕ್ರವಾರಕ್ಕೆ 20ನೇ ದಿನಕ್ಕೆ ಕಾಲಿಟ್ಟಿದೆ. ತೀವ್ರವಾಗಿ ಕ್ಷೀಣಿಸುತ್ತಿರುವ ತಮ್ಮ ಆರೋಗ್ಯದ ನಡುವೆಯೂ ಹೋರಾಟ ಮುಂದುವರಿಸಿರುವ ಅವರು, ಜುಲೈ 20 ರಂದು ಹಮ್ಮಿಕೊಳ್ಳಲಾಗಿರುವ ಬೃಹತ್ ಸಂಸತ್ ಮಾರ್ಚ್ ಮುನ್ನಡೆಸುವವರೆಗೂ ತಾವು ಉಪವಾಸ ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಈ ಜನಾಂದೋಲನ ಯಶಸ್ವಿಯಾಗದಿದ್ದರೆ ತಾವು ‘ಭೂತವಾಗಿ ಮರಳಿ ಬರುವುದಾಗಿ’ ಮಾರ್ಮಿಕವಾಗಿ ನುಡಿದಿದ್ದಾರೆ.
ಜುಲೈ 20ರ ವರೆಗೆ ಜೀವಂತವಾಗಿರುತ್ತೇನೆ
ಜಂತರ್ ಮಂತರ್ನಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸೋನಂ ವಾಂಗ್ಚುಕ್, ಜುಲೈ 20 ರಂದು ನಿಮ್ಮೊಂದಿಗೆ ಸಂಸತ್ ಭವನದತ್ತ ಹೆಜ್ಜೆ ಹಾಕಲು ನಾನು ಹೇಗೆ ಬೇಕಾದರೂ ಜೀವಂತವಾಗಿರುತ್ತೇನೆ. ಆದರೆ ನಮ್ಮ ಆ ನಡಿಗೆ ಯಶಸ್ವಿಯಾಗದಿದ್ದರೆ ನಾನು ಭೂತವಾಗಿ ಮರಳಿ ಬರುತ್ತೇನೆ ಎಂದು ಬೆಂಬಲಿಗರಲ್ಲಿ ಹಾಸ್ಯ ಮಿಶ್ರಿತ ಧಾಟಿಯಲ್ಲಿ ಹೇಳಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕರೂಚ್ ಜನತಾ ಪಾರ್ಟಿ (CJP) ಆಯೋಜಿಸಿರುವ ಈ ಪ್ರತಿಭಟನೆ ಈಗಾಗಲೇ 28 ದಿನಗಳನ್ನು ಪೂರೈಸಿದೆ. ಜುಲೈ 20 ರಂದು ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿರುವ ದಿನವೇ ಈ ‘ಸಂಸದ್ ಚಲೋ’ ಮಾರ್ಚ್ ಹಮ್ಮಿಕೊಳ್ಳಲಾಗಿದ್ದು, ಇದು ಈ ಹೋರಾಟದ ಮುಂದಿನ ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ.
ಕಡಿಮೆ ಆದ ಸೋನಮ್ ತೂಕ
ತಮ್ಮ ಆರೋಗ್ಯ ಹದಗೆಡುತ್ತಿರುವುದನ್ನು ಕಂಡು ಉಪವಾಸ ಕೈಬಿಡುವಂತೆ ಮನವಿ ಮಾಡುತ್ತಿರುವ ಹಿತೈಷಿಗಳಿಗೆ ಉತ್ತರಿಸಿರುವ ವಾಂಗ್ಚುಕ್, ನನಗೆ ಕೇವಲ ನಿಮ್ಮ ಅನುಕಂಪ ಬೇಡ, ಬದಲಿಗೆ ಹೋರಾಟದಲ್ಲಿ ನಿಮ್ಮ ಸಕ್ರಿಯ ಭಾಗವಹಿಸುವಿಕೆ ಬೇಕು ಎಂದು ಕರೆ ನೀಡಿದ್ದಾರೆ. ಉಪವಾಸ ನಿಲ್ಲಿಸುವಂತೆ ಕೇಳುವ ಬದಲು ಜುಲೈ 20ರ ಶಾಂತಿಯುತ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಸದ್ಯ 59 ವರ್ಷದ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಕಳವಳಕಾರಿಯಾಗಿದ್ದು, ಅವರ ತೂಕ 56.65 ಕೆಜಿಗೆ ಕುಸಿದಿದೆ. ಹೋರಾಟ ಆರಂಭವಾದ ದಿನದಿಂದ ಅವರು ಬರೋಬ್ಬರಿ 9 ಕೆಜಿಗೂ ಹೆಚ್ಚು ತೂಕ ಕಳೆದುಕೊಂಡಿದ್ದಾರೆ. ಅವರ ರಕ್ತದೊತ್ತಡ ಹಾಗೂ ಶುಗರ್ ಮಟ್ಟ ಗಣನೀಯವಾಗಿ ಕುಸಿದಿರುವುದರಿಂದ ದೆಹಲಿ ಹೈಕೋರ್ಟ್ ಸಹ ಅವರ ಆರೋಗ್ಯದ ಮೇಲೆ ನಿರಂತರ ನಿಗಾ ಇಡುವಂತೆ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ನಿರುದ್ಯೋಗಿ ಯುವಕರನ್ನು ಹೀಯಾಳಿಸಿ ಈ ಹಿಂದೆ ನೀಡಲಾಗಿದ್ದ ಹೇಳಿಕೆಯ ವಿರುದ್ಧ ವಿದ್ಯಾರ್ಥಿಗಳು ಆರಂಭಿಸಿದ್ದ ಕಾಕ್ರೋಚ್ ಜನತಾ ಪಾರ್ಟಿಯ ಸಾಂಕೇತಿಕ ಪ್ರತಿಭಟನೆಗೆ ಸೋನಂ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹವು ದೊಡ್ಡ ನೈತಿಕ ಶಕ್ತಿಯನ್ನು ತಂದುಕೊಟ್ಟಿದೆ. ಆರಂಭದಲ್ಲಿ ಕೇವಲ ಆನ್ಲೈನ್ ಮತ್ತು ವಿದ್ಯಾರ್ಥಿಗಳ ಅಭಿಯಾನದಂತಿದ್ದ ಈ ಹೋರಾಟ, ವಾಂಗ್ಚುಕ್ ಅವರ ಪ್ರಾಣದ ಹಂಗು ತೊರೆದ ಸತ್ಯಾಗ್ರಹದಿಂದಾಗಿ ಇಂದು ದೇಶವ್ಯಾಪಿ ಧ್ವನಿಯಾಗಿ ಮಾರ್ಪಟ್ಟಿದೆ. ಜುಲೈ 20 ರಂದು ನಡೆಯಲಿರುವ ಈ ಸಂಸತ್ ಮಾರ್ಚ್ನ ಯಶಸ್ಸು ಮಾತ್ರವೇ ತಮ್ಮ ಹೋರಾಟ ಸಾರ್ಥಕವಾಗಿದೆಯೇ ಎಂಬುದನ್ನು ನಿರ್ಧರಿಸುತ್ತದೆ ಎಂದು ವಾಂಗ್ಚುಕ್ ದೃಢವಾಗಿ ಹೇಳಿದ್ದಾರೆ.
ಇದನ್ನೂ ಓದಿ: ನ್ಯೂಜಿಲೆಂಡ್ನಲ್ಲಿ ಸುನಾಮಿ ಭೀತಿ, ವೆನೆಜುವೆಲಾ ದುರಂತದಲ್ಲಿ ಸಾವಿನ ಸಂಖ್ಯೆ 4,829ಕ್ಕೆ ಏರಿಕೆ!
