TOP NEWS

DK Shivakumar: ರೈತರಿಂದ ಬಲವಂತವಾಗಿ ಜಮೀನು ಪಡೆಯಲ್ಲ: ಸಿಎಂ

Will Not Acquire Land from Farmers Forcibly CM DK Shivakumar

ಬೆಂಗಳೂರು: “ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಸರ್ಕಾರವು ಯಾವುದೇ ರೈತರಿಂದ ಬಲವಂತವಾಗಿ ಜಮೀನು ಪಡೆಯುವುದಿಲ್ಲ. ಸ್ವಇಚ್ಛೆಯಿಂದ ಮುಂದೆ ಬಂದು ಭೂಮಿ ಕೊಟ್ಟವರಿಗೆ ಪರಿಹಾರ ನೀಡುತ್ತೇವೆ. ಈ ವಿಚಾರದಲ್ಲಿ ರೈತರ ಅಹವಾಲು, ಅಭಿಪ್ರಾಯ ಪಡೆಯಲು ಸಮಿತಿ ರಚಿಸಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.

ಯಾವ ಪ್ರತಿಭಟನೆ ಅಗತ್ಯವಿಲ್ಲ, ನಿಮ್ಮ ಜಮೀನಿನಲ್ಲಿ ನೆಮ್ಮದಿಯಾಗಿರಿ

“ಯಾರ ಆಸ್ತಿಯನ್ನು ನಾವು ಬಲವಂತವಾಗಿ ಪಡೆಯುವುದಿಲ್ಲ. ಜಮೀನು ನೀಡಲು ಇಷ್ಟವಿಲ್ಲದವರು ನೆಮ್ಮದಿಯಾಗಿ ತಮ್ಮ ಜಮೀನಿನಲ್ಲಿ ಇರಬಹುದು. ಯಾವ ಧರಣಿ, ಪ್ರತಿಭಟನೆ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿಗಳಾಗಿದ್ದಾಗ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪನವರು ಮಾರ್ಗದರ್ಶನದಂತೆ ಯೋಜನೆ ಪ್ರಕ್ರಿಯೆ ಮುಂದುವರಿದಿದೆ. ನಾನು ಯಾರಿಗೂ ಬಲವಂತ ಮಾಡುವುದಿಲ್ಲ. ಅವರು ಹೊರಡಿಸಿರುವ ರೆಡ್ ಜೋನ್ ಆದೇಶ ಮುಂದುವರಿಯುತ್ತದೆ. ಭೂಮಿ ನೀಡಲು ಇಷ್ಟವಿಲ್ಲದವರಿಗೆ ನಾನು ಬಲವಂತ ಮಾಡುವುದಿಲ್ಲ. ನಾನು ರೈತರು ಹಾಗೂ ಅಧಿಕಾರಿಗಳ ಜೊತೆ ಸಭೆ ಮಾಡಿ ಈ ತೀರ್ಮಾನ ಮಾಡಿದ್ದೇವೆ. ಇಷ್ಟವಿಲ್ಲದವರು ಅವರ ಭೂಮಿ ಅವರೇ ಇಟ್ಟುಕೊಳ್ಳಲಿ. ಕುಮಾರಸ್ವಾಮಿ ಅವರು ಪ್ರತಿ ಎಕರೆಗೆ 8 ಸಾವಿರ ಅಡಿ ಅಭಿವೃದ್ಧಿಪಡಿಸಿದ ಭೂಮಿ ನೀಡಲು ಮುಂದಾಗಿದ್ದರು. ನಾವು 50% ಅಂದರೆ 9500 ಅಡಿ ಭೂಮಿ ನೀಡಲು ತೀರ್ಮಾನಿಸಿದೆವು. ಸ್ವಯಂ ಇಚ್ಛೆಯಿಂದ ಬರುವವರಿಗೆ ಪರಿಹಾರ ನೀಡಿ ಭೂಮಿ ಪಡೆಯುತ್ತೇವೆ” ಎಂದು ಸ್ಪಷ್ಟಪಡಿಸಿದರು.

ರಾಜಕೀಯಕ್ಕೆ ಬಲಿಯಾಗಬೇಡಿ, ನಿಮ್ಮ ಬದುಕು ನೀವು ಕಟ್ಟಿಕೊಳ್ಳಿ; ರೈತರಿಗೆ ಮನವಿ

“ರೈತರು ಹೋರಾಟ ಧರಣಿ ಬಿಟ್ಟು ನಿಮ್ಮ ಬದುಕು ಕಟ್ಟಿಕೊಳ್ಳಿ. ರಾಜಕೀಯಕ್ಕಾಗಿ ಇವರು ನಿಮ್ಮನ್ನು ಬಲಿ ಕೊಡುತ್ತಿದ್ದಾರೆ. ನೀವು ಬಲಿಯಾಗಬೇಡಿ. ಸಮಿತಿಯವರು ನಿಮ್ಮ ಬಳಿಗೆ ಬಂದಾಗ, ಸಮಿತಿ ಮುಂದೆ ನಿಮ್ಮ ಅಭಿಪ್ರಾಯ ಹೇಳಿಕೊಳ್ಳಿ. ಹೊಡೆಯುವುದಾದರೆ ಬಂದು ನನಗೆ ಹೊಡೆಯಿರಿ” ಎಂದು ಮನವಿ ಮಾಡಿದರು.

ನನ್ನನ್ನು ಜೈಲಿಗೆ ಕಳುಹಿಸುವ ಅವರ ಪ್ರಯತ್ನ ಮುಂದುವರಿಯಲಿ, ನಾನು ಸಿದ್ಧನಿದ್ದೇನೆ

“ನಿಮಗೆ ಆಸೆ ಇದ್ದರೆ ನಿಮ್ಮ ಪ್ರಯೋಗಗಳು ನನ್ನ ಮೇಲೆ ಆಗಲಿ. ಈಗಾಗಲೇ ನನ್ನ ಮೇಲೆ ಕೇಸು, ಕೌಂಟರ್ ಕೇಸು ಪ್ರಯೋಗಗಳು ನಡೆಯುತ್ತಿವೆ. ಜೈಲಿಗೆ ಹೋಗುವ ದಿನ ಹತ್ತಿರ ಬಂದಿದೆ ಎಂದು ಕುಮಾರಣ್ಣ ಹೇಳಿದ್ದಾರೆ. ನಾನು ಸಿದ್ಧನಿದ್ದೇನೆ ಕುಮಾರಣ್ಣ. ನಿನ್ನ ಆಶೀರ್ವಾದ. ನಾನು ಕೃಷ್ಣನ ಜನ್ಮ ಸ್ಥಳದಲ್ಲಿ ಇದ್ದವನು. ನೀನು ಬಂದು ಭೇಟಿ ಮಾಡಿದ್ದೆ. ನಿಮ್ಮ ಪ್ರಯತ್ನ ಹೋರಾಟ, ನಿಮ್ಮ ಶ್ರಮ ಎಲ್ಲವೂ ನನಗೆ ಗೊತ್ತಿದೆ. ಬೇರೆ ಯಾವ ನಾಯಕರು ಬೆಳೆಯಬಾರದು ಎಂಬ ನಿಮ್ಮ ಮನಸ್ಥಿತಿ ನನಗೆ ಅರಿವಿದೆ. ಆದರೂ ನಿಮ್ಮ ಹಿರಿತನಕ್ಕೆ ನಮಸ್ಕರಿಸುವುದು ನನ್ನ ಧರ್ಮ. ನಾನು ಕೊಡುವ ಗೌರವ ನಿಮ್ಮಿಂದ ಸ್ವೀಕರಿಸಲು ಆಗದಿದ್ದರೆ ಅದು ನಿಮ್ಮ ಪಾಡು. ನಾನು ಯಾರಿಗೂ ಕೆಟ್ಟದ್ದು ಬಯಸುವವನಲ್ಲ, ನಿಮಗೂ ಕೆಟ್ಟದ್ದನ್ನು ಬಯಸುವುದಿಲ್ಲ. ನನ್ನನ್ನು ಜೈಲಿಗೆ ಕಳಿಸಬೇಕು ಎಂಬ ಸಂಕಲ್ಪ ಮಾಡಿದ್ದಿರೋ ಅದನ್ನು ಮುಂದುವರಿಸಿ. ಆ ಜೈಲಿಗೆ ಹೋಗಿ ಬಂದೇ ನಾನು ರಾಜ್ಯದ ಮುಖ್ಯಮಂತ್ರಿಯಾಗಿ ಕೂತಿದ್ದೇನೆ. ನಾನು ಜೈಲಿಗೆ ಹೋದಾಗ ಜನ ಹೇಗೆ ನನ್ನ ಪರವಾಗಿ ನಿಂತರು ಎಂಬುದನ್ನು ನಾನು ಕಣ್ಣಾರೆ ನೋಡಿದ್ದೇನೆ. ನಾನು ಜೈಲಿಗೆ ಹೋಗಿದ್ದ ಕೇಸ್ ಎರಡೂವರೆ ವರ್ಷಗಳಲ್ಲಿ ವಜಾವಾಗಿದೆ. ಸುಪ್ರೀಂ ಕೋರ್ಟ್ ಪಾದಕ್ಕೆ ನಾನು ಇಲ್ಲಿಂದಲೇ ನಮಿಸುತ್ತೇನೆ. ಆ ಜೈಲಿನ ಕೋಣೆಯಲ್ಲಿ ನಾನು ನನ್ನ ಕುಟುಂಬ ಅನುಭವಿಸಿದ ನೋವು ನಮಗೆ ಮಾತ್ರ ಗೊತ್ತು. ನನಗಾಗಿ ರಾಜ್ಯದ ನನ್ನ ತಾಯಂದಿರು, ಯುವಕರು ಕಣ್ಣೀರು ಹಾಕಿ, ಪ್ರಾರ್ಥಿಸಿ ನನ್ನನ್ನು ಜೈಲಿಂದ ಹೊರಗೆ ಕರೆತಂದು ಈ ಸ್ಥಾನದಲ್ಲಿ ಕೂರಿಸಿದ್ದಾರೆ” ಎಂದರು.

ಪೆನ್ನು ಪೇಪರ್ ರಾಜ್ಯದ ಜನರಿಗೆ ಅವರ ಬದುಕಿಗೆ ಸೀಮಿತ

“ನಾನು ರಾಜ್ಯದ ಜನರ ಆಶೀರ್ವಾದ ಕೇಳಿದೆ, ರಾಮನಗರ, ಚನ್ನಪಟ್ಟಣ, ಬಿಡದಿ, ಕನಕಪುರಕ್ಕೆ ಹೋದೆ. ನನಗೆ ಪೆನ್ನು ಪೇರ್ ಕೊಡಿ ಎಂದು ಕೇಳಿದೆ. ಅವರು ಕೊಟ್ಟಿದ್ದಾರೆ. ಈ ಪೆನ್ನು ಪೇಪರ್ ರಾಜ್ಯದ ಜನರಿಗೆ ಅವರ ಬದುಕಿಗೆ ಸೀಮಿತ. ಯಾರಿಗೂ ತೊಂದರೆ ಕೊಡುವ ತೀರ್ಮಾನ ಈ ಪೆನ್ನು ಪೇಪರ್ ನಿಂದ ಬರುವುದಿಲ್ಲ. ನನ್ನ ಜೀವ ಇರುವವರೆಗೂ ಈ ದೇಹ ರಾಜ್ಯದ ಜನತೆಗಾಗಿ ಮುಡಿಪಾಗಿ ಇಡುತ್ತೇನೆ. ಜನಪರ ಆಡಳಿತ ಕೊಟ್ಟು ರಾಜ್ಯದಲ್ಲಿ ಸಾಕ್ಷಿಗುಡ್ಡೆ ಬಿಡಬೇಕು. ನನ್ನ ಆಡಳಿತದಲ್ಲಿ ರಾಜ್ಯ ಸುಭೀಕ್ಷವಾಗಿರಬೇಕು ಎಂದು ಕೆಲಸ ಮಾಡುವುದು ನನ್ನ ಕರ್ತವ್ಯವಾಗಿದೆ. ನಿಮ್ಮ ಆಲೋಚನೆ ನನ್ನನ್ನು ಜೈಲಿಗೆ ಕಳುಹಿಸುವುದು” ಎಂದು ಹರಿಹಾಯ್ದರು.

ಡಿಎಲ್ಎಫ್ ಗೆ ಟೆಂಡರ್ ನೀಡಿ ರಿಯಲ್ ಎಸ್ಟೇಟ್ ದಂಧೆ ಮಾಡಿದ್ದು ಯಾರು?

“ಕುಮಾರಸ್ವಾಮಿ ಅವರು ಮಾಡಲು ಮುಂದಾಗಿದ್ದ ಟೌನ್ ಶಿಪ್ ನಲ್ಲಿ ಇಡಿ ಹಳ್ಳಿಗಳು, ಅಲ್ಲಿ ಬದುಕು ಕಟ್ಟಿಕೊಂಡಿದ್ದವರ ಮನೆಗಳನ್ನು ಸೇರಿ ಎಲ್ಲರನ್ನು ಒಕ್ಕಲೆಬ್ಬಿಸಲು ಆದೇಶ ಹೊರಡಿಸಿದ್ದರು. ಅವರದೇ ಆದ ಪರಿಹಾರ ಮಾರ್ಗಸೂಚಿ ಹೊರಡಿಸಿದ್ದರು. ನಮ್ಮಣ್ಣ ಮಾತೆತ್ತಿದರೆ ಬಿಡದಿ ಟೌನ್ ಶಿಪ್ ಅನ್ನು ರಿಯಲ್ ಎಸ್ಟೇಟ್ ಎಂದು ಹೇಳುತ್ತಾರೆ. ಅವರು ಈ ಟೌನ್ ಶಿಪ್ ನಿರ್ಮಾಣವನ್ನು ರಿಯಲ್ ಎಸ್ಟೇಟ್ ಕಂಪನಿ ಡಿಎಲ್ಎಫ್ ಗೆ ಜವಾಬ್ದಾರಿ ನೀಡಿ ಅವರಿಂದ 400 ಕೋಟಿ ರೂ. ಹಣ ಕೂಡ ಕಟ್ಟಿಸಿಕೊಂಡಿದ್ದರು. ಕುಮಾರಸ್ವಾಮಿ ಅವರು ಅನಾರೋಗ್ಯದದಲ್ಲಿದ್ದರೂ ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ರೈತರಿಗೆ ಅಭಿವೃದ್ಧಿಪಡಿಸಿದ ಪ್ರದೇಶದಲ್ಲಿ 40% ಜಮೀನನ್ನು (ಪ್ರತಿ ಎಕರೆಗೆ ಸುಮಾರು 8 ಸಾವಿರ ಅಡಿ) ಪರಿಹಾರವಾಗಿ ನೀಡುವುದಾಗಿ ಹೇಳಿದ್ದಾರೆ. ಆಗ ಪ್ರತಿ ಎಕರೆಗೆ 22-25 ಲಕ್ಷ ಪರಿಹಾರ ನಿಗದಿ ಪಡಿಸಿದರು. ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸಿದ್ದರು” ಎಂದು ದಾಖಲೆ ಸಮೇತ ವಿವರಿಸಿದರು.

“ಡಿಎಲ್ಎಫ್ ಸಂಸ್ಥೆಗೆ ಪತ್ರ ಬರೆದು ಭದ್ರತಾ ಠೇವಣಿ ಕಟ್ಟಬೇಕು, 15 ದಿನಗಳಲ್ಲಿ ಒಪ್ಪಂದ ಮಾಡಿಕೊಳ್ಳಬೇಕು ಎಂದು ಪತ್ರ ಬರೆದು ರಿಯಲ್ ಎಸ್ಟೇಟ್ ದಂಧೆ ಮಾಡಿದವನು ನಾನಾ ಅಣ್ಣಾ? 23-09-2006ರಲ್ಲಿ ಮುಖ್ಯಮಂತ್ರಿಯಾಗಿದ್ದ ನಮ್ಮ ಅಣ್ಣನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಖಾಸಗಿ ಸಂಸ್ಥೆಯವರಿಗೆ ಈ ಜಮೀನನ್ನು ಹಂತ ಹಂತವಾಗಿ ಬಿಟ್ಟುಕೊಡಬೇಕು ಎಂದು ಸೂಚಿಸಿದ್ದರು. ಇದು ರಿಯಲ್ ಎಸ್ಟೇಟ್ ದಂಧೆ ಎಂದು ಕರೆಯಬೇಕಾ? ಕುಟುಂಬದ ದಂಧೆ ಎಂದು ಕರೆಯಬೇಕಾ? ರಿಯಲ್ ಎಸ್ಟೇಟ್ ದಂಧೆ ಮಾಡಿದ್ದು ಯಾರು ಅಪ್ಪಾಜಿ? ಈಗ ಯಾರ ಮೇಲೆ ಆರೋಪ ಮಾಡುತ್ತಿದ್ದೀರಾ? ಯಾವ ಕಾರಣಕ್ಕೆ ಹೋರಾಟ ಮಾಡುತ್ತಿದ್ದೀರಾ? ಯಾವ ರೈತರನ್ನು ಬಳಸಿಕೊಂಡು ಹೋರಾಟ ಮಾಡುತ್ತಿದ್ದೀರಾ?” ಎಂದು ಪ್ರಶ್ನಿಸಿದರು.

ನಿಮ್ಮ ಜಮೀನು ಈ ಯೋಜನೆ ವ್ಯಾಪ್ತಿಗೆ ಬರಲಿಲ್ಲ ಯಾಕೆ?

“ನಿಮ್ಮ ರಾಜಕಾರಣದ ಬದುಕಿಗೆ ಶಕ್ತಿ ತುಂಬಿದ ಜನರ ಬದುಕು, ಆಸ್ತಿಗಳನ್ನು ಕಸಿಯಲು ನೀವು ಮಾಡಿದ ಸಂಚನ್ನು ನೀವು ಎಷ್ಟು ದಿನ ಮುಚ್ಚಿಡುತ್ತೀರಿ? ಬಿಡದಿ, ದೇವಗೆರೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನೀವು ಖರೀದಿ ಮಾಡಿರುವ ಜಮೀನಿನ ಪೈಕಿ ಈ ಟೌನ್ ಶಿಪ್ ನಲ್ಲಿ ಒಂದು ಎಕರೆಯೂ ಹೋಗದಂತೆ ನೋಡಿಕೊಂಡರಲ್ಲ. ಕೇವಲ ರೈತರ ಜಮಾನು ಮಾತ್ರ ಹೋಗುವಂತೆ ಟೌನ್ ಶಿಪ್ ಮಾಡಲಿಲ್ಲವೇ? ಇದೇ ಟೌನ್ ಶಿಪ್ ನಲ್ಲಿ ನಿಮ್ಮ ಕುಟುಂಬದವರು 36 ಎಕರೆ ಜಮೀನು ಖರೀದಿ ಮಾಡಲಿಲ್ಲವೇ? ಅಕ್ಕನವರು ಏನು ಪತ್ರ ಬರೆದಿದ್ದರು ಎಂದು ನಾನು ಈಗ ಚರ್ಚೆ ಮಾಡುವುದಿಲ್ಲ. ಆ ಭಾಗದ ರೈತರು ಕಷ್ಟ ಕಾಲದಲ್ಲಿ ತನ್ನ ಜಮೀನು ಮಾರಿಕೊಳ್ಳದಂತೆ ರೆಡ್ ಜೋನ್ ಮಾಡಿದಿರಲ್ಲಾ ಇದು ಈ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ. ಯಾವ ಜನರು ನಿಮ್ಮನ್ನು ಮುಖ್ಯಮಂತ್ರಿ, ಪ್ರಧಾನಮಂತ್ರಿ ಹಾಗೂ ಸಂಸದರನ್ನಾಗಿ ಮಾಡಿದರೋ ಅವರಿಗೆ ಈ ರೀತಿ ಮಾಡುವುದೇ? ನೀವು ಹಾಕಿದ ಮುನ್ನುಡಿಯ ಮೇಲೆ ನಾನು ಮುನ್ನಡೆಯುತ್ತಿದ್ದೇನೆ. ಈ ವಿಚಾರದಲ್ಲಿ ಮಾತ್ರ ನಾನು ನಿಮ್ಮ ಉತ್ತರಾಧಿಕಾರಿಯಾಗಿದ್ದೇನೆ ಹೊರತು ರಾಜಕೀಯವಾಗಿ ಅಲ್ಲ. ನಿಮ್ಮ ತೀರ್ಮಾನಕ್ಕೆ ನಾನು ಬದ್ಧನಾಗಿ ನಿಮ್ಮ ಆದೇಶ ಪಾಲಿಸಿ, ನಿಮ್ಮ ಸಹಿಗೆ ಗೌರವ ನೀಡುತ್ತಿದ್ದೇನೆ. ನಿಮ್ಮ ಚಿಂತನೆ, ಸಂತೋಷವನ್ನು ನಾನು ಮುಂದುವರಿಸುತ್ತಿದ್ದೇನೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಅಭಿವೃದ್ಧಿಗೆ ನೀವು ಮಾಡಿದ ಆಲೋಚನೆಯನ್ನು ನಾನು ಮುಂದುವರಿಸುತ್ತಿದ್ದೇನೆ” ಎಂದು ಸ್ಪಷ್ಟಪಡಿಸಿದರು.

“ಬಿಡದಿ ಟೌನ್ ಶಿಪ್ ಮುನ್ನ ಕೈಗಾರಿಕ ಪ್ರದೇಶ ಮಾಡಿದಿರಿ. ಆಗ ನಿಮ್ಮ ಬೀಗರೇ ಕೆಐಎಡಿಬಿಯಲ್ಲಿ ಅಧಿಕಾರಿಯಾಗಿದ್ದರು. ಆಗ ನಿಮ್ಮ ಕೇತಗಾನಹಳ್ಳಿ ಜಮೀನು ಭೂಸ್ವಾಧೀನವಾಗಲಿಲ್ಲ. ನಿಮ್ಮ ಭೂಮಿ ಸ್ವಾಧೀನವಾಗದಂತೆ ಪಕ್ಕದಲ್ಲಿ ಒಂದು ವಿಶೇಷ ರಸ್ತೆ ನಿರ್ಮಿಸಿ ಕೈಗಾರಿಕಾ ಪ್ರದೇಶ ಮಾಡಿದಿರಿ. ಶಾನಮಂಗಲ, ಹಾರೋಹಳ್ಳಿಯಲ್ಲಿ ಕೈಗಾರಿಕಾ ಟೌನ್ ಶಿಪ್ ಮಾಡಿದಿರಿ. ಅಲ್ಲಿ ನೀವು ಕೊಟ್ಟ ಪರಿಹಾರ ಮೊತ್ತ ಆರೂವರೆ ಲಕ್ಷ, 16 ಲಕ್ಷ, 25 ಲಕ್ಷ, 40 ಲಕ್ಷ. ಕೊನೆ ಹಂತದಲ್ಲಿ 1 ಕೋಟಿ ನೀಡಿದಿರಿ” ಎಂದರು.

ನಾನು ಸಿಎಂ ಆದ ಮೇಲೆ ಬಂದ ಛಲ, ಯಡಿಯೂರಪ್ಪ ಸರ್ಕಾರದ ತೀರ್ಮಾನದ ವಿರುದ್ಧ ಇರಲಿಲ್ಲ ಯಾಕೆ?

“ಈ ವಿಚಾರದಲ್ಲಿ ಕುಮಾರಸ್ವಾಮಿ ಹಾಗೂ ದೇವೇಗೌಡರ ಹೆಸರು ತೆಗೆದುಕೊಳ್ಳಲು ನನಗೆ ಇಷ್ಟವಿಲ್ಲ. ಆದರೆ ಅವರು ಆ ಸ್ಥಾನದಲ್ಲಿ ಕೂತಿದ್ದಾರೆ. ಈ ಯೋಜನೆ ಆರಂಭವಾಗಿ 15 ವರ್ಷಗಳ ಬಳಿಕ 2019ರಲ್ಲಿ ಅವರ ಮೈತ್ರಿ ಪಕ್ಷ ಬಿಜೆಪಿ ಸರ್ಕಾರದ ಅವಧಿಯಲ್ಲಿ 80 ಲಕ್ಷದಿಂದ 1 ಕೋಟಿ ಪರಿಹಾರ ನೀಡಿ 900 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡರಲ್ಲ. ಆಗ ನಿಮ್ಮ ಹೋರಾಟ, ಧ್ವನಿ ಏನಾಗಿತ್ತು? ನಿಮ್ಮ ಕಿಚ್ಚು ಏನಾಗಿತ್ತು? ಆಗ ನಿಮ್ಮ ಧರಣಿ ಯಾಕೆ ನಡೆಯಲಿಲ್ಲ? ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ನಿಮಗೆ ಈ ಛಲ ಬಂದಿದೆಯೇ? ಆ ಸಮಯದಲ್ಲಿ ಅಶೋಕಣ್ಣ ಕಂದಾಯ ಮಂತ್ರಿಯಾಗಿದ್ದರು. ಆಗ ಅಶೋಕಣ್ಣ ಅವರು ಯಾಕೆ ಧ್ವನಿ ಎತ್ತಲಿಲ್ಲ?” ಎಂದು ಪ್ರಶ್ನಿಸಿದರು.

ಅಧಿಕಾರಿಗಳಿಗೆ ಪೊರಕೆಯಲ್ಲಿ ಹೊಡೆಯುವ ಅಗತ್ಯವಿಲ್ಲ, ನಾನು ಹೊಡೆಸಿಕೊಳ್ಳಲು ಸಿದ್ಧ

“2019ರಲ್ಲಿ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಅಶೋಕ್ ಅವರು ಸಚಿವರಾಗಿದ್ದಾಗ ಬೆಂಗಳೂರು ಸಮೀಪದಲ್ಲಿ ಬಂಡವಾಳ ಹೂಡಿಕೆಗೆ ಸಹಾಯವಾಗಲು ಬಿಡದಿಯ 9000 ಎಕರೆ ಜಾಗ ಸೂಕ್ತವಾಗಿದೆ ಎಂದು ಮುಖ್ಯಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವರರದಿ ತರಿಸಿಕೊಂಡರು. ಆಗ 35%ರಷ್ಟು ಕೈಗಾರಿಕೆ, 30% ವಸತಿ, ಉಳಿದ ಪ್ರದೇಶವನ್ನು ಇತರೆ ಉದ್ದೇಶಕ್ಕೆ ಬಳಸಿಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದ್ದರು. ಇಳಿ ವಯಸ್ಸಿನಲ್ಲಿ ಗಾಂಧಿ ಪ್ರತಿಮೆ ಬಂದು ಧರಣಿ ಕೂರಿಸಿ, ಅವರ ಮನಸ್ಸು ನೋಯಿಸಲು ನನಗೆ ಇಷ್ಟವಿಲ್ಲ. ನಮ್ಮ ತಾಯಂದಿರು ಯಾವ ಅಧಿಕಾರಿಗಳಿಗೆ ಪೊರಕೆ ಏಟು ಹೊಡೆಯುವ ಅಗತ್ಯವಿಲ್ಲ. ನಾನು ಅವರ ಬದುಕಿಗೆ ಕೈಹಾಕಿ ತಪ್ಪು ಮಾಡಿದ್ದರೆ, ಅವರು ನನಗೆ ಬೇಕಾದರೆ ಹೊಡೆಯಲಿ, ನಾನು ಹೊಡೆಸಿಕೊಳ್ಳಲು ಸಿದ್ಧನಿದ್ದೇನೆ” ಎಂದು ತಿಳಿಸಿದರು.

“ರೈತರ ಬಗ್ಗೆ ಇಷ್ಟು ಕಾಳಜಿ ಇರುವವರು ಟೌನ್ ಶಿಪ್ ಯಾಕೆ ಮಾಡಿದರು. ಕೈಗಾರಿಕಾ ಪ್ರದೇಶಕ್ಕೆ ಕೇತಗಾನಹಳ್ಳಿ, ದೇವಗೆರೆಯನ್ನು ಯಾಕೆ ಸೇರಿಸಿಕೊಳ್ಳಲಿಲ್ಲ? ಎಲ್ಲೆಲ್ಲಿ ಏನಾಗಿದೆ ಎಂದು ಬೇರೆ ದಿನ ಮಾತನಾಡುತ್ತೇನೆ. ದಯವಿಟ್ಟು ನನ್ನನ್ನು ಕೆಣಕಬೇಡಿ. ನಿಮ್ಮ ಬದುಕು ನೀವು ಕಟ್ಟಿಕೊಳ್ಳಿ. ನಿಮಗೆ ಶುಭವಾಗಲಿ. ಇದು ನನ್ನ ಕನಸಿನ ಯೋಜನೆಯಲ್ಲ, ನಿಮ್ಮ ಯೋಜನೆ, ಅದಕ್ಕೆ ನೀವು ಬರೆದ ಮುನ್ನುಡಿ ನಾನು ಮುಂದುವರಿಸುತ್ತಿದ್ದೇನೆ. ನಮ್ಮದು ಸರ್ಕಾರದ ಯೋಜನೆ, ಯಾವುದೇ ಖಾಸಗಿಯವರಿಗೆ ನೀಡುವುದಿಲ್ಲ. ದಂಧೆ ಮಾಡುವುದಿಲ್ಲ.

ಇದಕ್ಕೆ ಸಣ್ಣ ಸಮಿತಿ ಮಾಡುತ್ತೇನೆ. ಶಾಸಕರು, ಅಧಿಕಾರಿಗಳು ನ್ಯಾಯಾಧೀಶರನ್ನು ಸೇರಿಸಿಕೊಳ್ಳಬೇಕೆ ಎಂದು ತೀರ್ಮಾನಿಸಿ ಮುಂದಿನ ಎರಡು ಮೂರು ತಿಂಗಳಲ್ಲಿ ಸಮಿತಿ ಮಾಡುತ್ತೇನೆ. ಅವರು ವರದಿ ನೀಡಲಿ. ನನಗೆ ಯಾವುದೇ ಆತುರವಿಲ್ಲ. ಡಿಕೆ ಮುಖ್ಯಮಂತ್ರಿ ಆಗಿಹೋದನಲ್ಲಾ ಎಂದು ಅಸೂಯೆ ನಿಮ್ಮನ್ನು ಕಾಡುತ್ತಿದೆ. ನಿಮ್ಮ ಭಾವನೆ ನನಗೆ ಅರ್ಥವಾಗುತ್ತದೆ. ವರದಿ ಬರುವವರೆಗೂ ನಾನು ಕಾಯುತ್ತೇನೆ. ಇದು ನನಗೂ ರೈತರಿಗೂ ಇರುವ ಸಂಬಂಧ.

ಸಮಿತಿ ರಚನೆಯಾಗಿ ವರದಿ ಬರುವವರೆಗೂ ಪ್ರಕ್ರಿಯೆ ನಿಲ್ಲುತ್ತದೆಯೇ ಎಂದು ಕೇಳಿದಾಗ, “ಯಾರು ರೆಡ್ ಜೋನ್ ನಿಂದ ಮುಕ್ತಿ ಪಡೆಯಲು ಸ್ವಇಚ್ಛೆಯಿಂದ ಮುಂದೆ ಬಂದು ಭೂಮಿ ನೀಡುತ್ತಾರೋ ಅವರಿಗೆ ಪರಿಹಾರ ನೀಡಿ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುವುದು. ಯಾರು ಬೇಡ ಎನ್ನುತ್ತಾರೋ ಅವರಿಗೆ ಬಲವಂತ ಮಾಡುವುದಿಲ್ಲ. ಈ ಪ್ರಕ್ರಿಯೆ ಮುಂದುವರಿಯುತ್ತದೆ” ಎಂದರು.

ಸಮಿತಿಯ ಉದ್ದೇಶವು ಎಂದು ಕೇಳಿದಾಗ, “ರೈತರ ಅಹವಾಲು ಆಲಿಸಿಸಬೇಕು, ಅವರ ಆಲೋಚನೆ ಏನು, ಕಾನೂನಾತ್ಮಕ ವಿಚಾರವೇನು ಎಂದು ತಿಳಿಯಲು ಸಮಿತಿ ರಚಿಸಲಾಗುವುದು. ಅನೇಕ ಮುಖ್ಯಮಂತ್ರಿಗಳು ಇಂತಹ ವಿಚಾರದಲ್ಲಿ ತೀರ್ಮಾನ ಕೈಗೊಂಡು ತೊಂದರೆ ಅನುಭವಿಸಿದ್ದಾರೆ. ಅದನ್ನು ನಾನು ಅನುಭವಿಸುವುದಿಲ್ಲ. ನನಗೆ ಅಷ್ಟು ತಿಳುವಳಿಕೆ ಇಲ್ಲದಿದ್ದರೂ ನಾಲ್ಕೈದು ಜನರನ್ನು ಕೇಳಿ ತಿಳುವಳಿಕೆ ಪಡೆಯಬೇಕಲ್ಲವೇ” ಎಂದರು.

ನೀವು ಹೈಕಮಾಂಡ್ ಮೆಚ್ಚಿಸಲು ಈ ತೀರ್ಮಾನಕ್ಕೆ ಬಂದಿದ್ದೀರಿ ಎಂದು ದೇವೇಗೌಡರು ಆರೋಪ ಮಾಡಿದ್ದಾರೆ ಎಂದು ಕೇಳಿದಾಗ, “ಇದು ಅವರು ನನಗೆ ತೋರುತ್ತಿರುವ ಪ್ರೀತಿ. ನೀವು 2006ರಲ್ಲಿ ಈ ಯೋಜನೆ ಮಾಡಿದಾಗ, ಯಾವ ಹೈಕಮಾಂಡ್ ಗೆ ಮೆಚ್ಚಿಸಲು ಹೋಗಿದ್ದಿರಿ? ಅವರು ಹಾಸನದಿಂದ ಇಲ್ಲಿಗೆ ಬಂದು ಯಾವ ವರ್ಷದಲ್ಲಿ ಎಲ್ಲೆಲ್ಲಿ ಜಮೀಜು ತೆಗೆದುಕೊಂಡರು ಎಂಬ ಪಟ್ಟಿ ಬೇಕಾ?” ಎಂದರು.

ರೆಡ್ ಜೋನ್ ತೆರವು ಮಾಡುತ್ತೀರಾ ಎಂದು ಕೇಳಿದಾಗ, “ನಾನು ಯಾವುದನ್ನು ಮುಟ್ಟುವುದಿಲ್ಲ. ಈಗಾಗಲೇ ಅವರು ಮಾಡಿರುವ ಆದೇಶಾನುಸಾರ ನಾನು ಮುಂದುವರಿಯುತ್ತೇನೆ” ಎಂದರು.

ಈ ಯೋಜನೆ ನಿಲ್ಲಿಸುತ್ತೀರಾ ಎಂದು ಕೇಳಿದಾಗ, “ಯಾರು ಜಮೀನು ನೀಡುತ್ತಾರೋ ಅವರಿಂದ ಜಮೀನಿನಲ್ಲಿ ನಾವು ಸರ್ಕಾರದ ಯೋಜನೆ ಮಾಡುತ್ತೇವೆ. ಈ ಯೋಜನೆಯನ್ನು ಯಾಕೆ ಕೈಬಿಡೋಣ? ನಾನು ಈ ಯೋಜನೆಯನ್ನು ಯಾಕೆ ಡಿನೋಟಿಫೈ ಮಾಡಲಿ? ಈಗಾಗಲೇ ಜಮೀನು ಕೊಟ್ಟವರಿಗೆ ಮತ್ತೆ ಅಲ್ಲಿ ವ್ಯವಸಾಯ ಮಾಡಲು ಅವಕಾಶ ನೀಡಲು ಸಾಧ್ಯವೇ? ಈ ಯೋಜನೆಯ ಪ್ರತಿಯೊಂದು ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು” ಎಂದರು.

ರೈತರ ಮೇಲಿನ ಕೇಸ್ ಬಗ್ಗೆ ಕೇಳಿದಾಗ, “ಯಾವ ರೈತರ ಮೇಲೂ ಕೇಸ್ ಹಾಕಿಲ್ಲ. ಗಾಬರಿಯಾಗುವುದು ಬೇಡ. ಕಾನೂನು ಪ್ರಕ್ರಿಯೆ ನಡೆಯಲಿದೆ. ಈ ಹಿಂದೆ ಇವರು 2 ಸಾವಿರ ಜನರ ಮೇಲೆ ಎಫ್ಐಆರ್ ಹಾಕಿಸಿದ್ದು ಗೊತ್ತಿದೆಯೇ? ಬೇರೆ ಬೇರೆ ವಿಚಾರದಲ್ಲಿ ಏನಾಯ್ತು ಎಂದು ಪಟ್ಟಿ ಕೊಡಬೇಕಾ? ಈಗ ಅದೆಲ್ಲಾ ಬೇಡ” ಎಂದರು.

ಇದನ್ನೂ ಓದಿ: ಕಾವೇರಿ ನಿಯಂತ್ರಣ ಸಮಿತಿ ಸಭೆಯಲ್ಲೂ ನೀರು ಬಿಡಲು ನಿರಾಕರಿಸಿದ ಕರ್ನಾಟಕ!

Leave a Reply

Your email address will not be published. Required fields are marked *