TOP NEWS

HD Kumaraswamy: ಜನರ ಕಿವಿಗೆ ಹೂ ಇಡಲು ಸಿಎಂ ಹೊರಟಿದ್ದಾರೆ; ಎಚ್.ಡಿ. ಕುಮಾರಸ್ವಾಮಿ ಆಕ್ರೋಶ

HD Kumaraswamy slams CM alleges voter list manipulation conspiracy in closed door review meetings

ಬೆಂಗಳೂರು: ರಾಜ್ಯ ಸರ್ಕಾರದ ಆಡಳಿತ ವೈಖರಿ ಹಾಗೂ ಮುಖ್ಯಮಂತ್ರಿಗಳ ದೈನಂದಿನ ನಡವಳಿಕೆಗಳ ವಿರುದ್ಧ ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಭಾರಿ ವಾಗ್ದಾಳಿ ನಡೆಸಿದ್ದಾರೆ. “ಹಿಂದೆ ಕಿವಿಗೆ ಹೂ ಮುಡಿದುಕೊಂಡು ವಿಧಾನಸಭೆಗೆ ಬಂದು ಹೋರಾಟದ ನಾಟಕವಾಡಿದ್ದ ಇದೇ ನಾಯಕರು, ಈಗ ಇಡೀ ಕರ್ನಾಟಕದ ಏಳು ಕೋಟಿ ಜನಸಾಮಾನ್ಯರ ಕಿವಿಗೆ ಹೂ ಇಡಲು ಹೊರಟಿದ್ದಾರೆ” ಎಂದು ಅವರು ಲೇವಡಿ ಮಾಡಿದ್ದಾರೆ. ಜೆಡಿಎಸ್ ಪ್ರಧಾನ ಕಚೇರಿ ಜೆ.ಪಿ. ಭವನದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಎಂಎಲ್‌ಸಿ ಭೋಜೇಗೌಡ ಸೇರಿದಂತೆ ಹಲವು ಮುಖಂಡರ ಸಮ್ಮುಖದಲ್ಲಿ ಅವರು ಸರ್ಕಾರದ ವಿರುದ್ಧ ಹರಿಹಾಯ್ದರು.

ಸುವರ್ಣಸೌಧಕ್ಕೆ ನಮಸ್ಕಾರ, ಇವೆಲ್ಲ ಬರೀ ಬದಲಾವಣೆಯ ನಾಟಕ! ಮುಖ್ಯಮಂತ್ರಿಗಳ ಇತ್ತೀಚಿನ ಉತ್ತರ ಕರ್ನಾಟಕ ಪ್ರವಾಸದ ನಡವಳಿಕೆಗಳನ್ನು ಟೀಕಿಸಿದ ಕುಮಾರಸ್ವಾಮಿ, “ಹೊಸ ಮುಖ್ಯಮಂತ್ರಿಗಳು ಕಲಬುರಗಿ ಮತ್ತು ಬೆಳಗಾವಿಯಲ್ಲಿ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿದ್ದಾರೆ. ಬೆಳಗಾವಿಯ ಸುವರ್ಣಸೌಧಕ್ಕೆ ಪ್ರವೇಶಿಸುವಾಗ ಅಲ್ಲಿನ ಮೆಟ್ಟಿಲುಗಳಿಗೆ ಹಣೆ ಮುಟ್ಟಿ ನಮಸ್ಕರಿಸಿದ್ದಾರೆ. ಅವರ ಈ ಹಠಾತ್ ಶಿಸ್ತು ಹಾಗೂ ನಾಟಕೀಯ ಬದಲಾವಣೆಯನ್ನು ನೋಡಿದರೆ, ರಾಜ್ಯದಲ್ಲಿ ಇವರೇನೋ ದೊಡ್ಡ ಕ್ರಾಂತಿಕಾರಕ ಆಡಳಿತ ನೀಡಲಿದ್ದಾರೆ ಎಂಬ ಭ್ರಮೆ ಮೂಡಿಸುವ ತಂತ್ರವಿದು” ಎಂದು ಕಿಡಿಕಾರಿದರು.

ಅಧಿಕೃತ ಸಭೆಗಳಿಗೆ ಮಾಧ್ಯಮಗಳನ್ನು ಬ್ಯಾನ್ ಮಾಡಿದ್ದೇಕೆ? ಸರ್ಕಾರದ ಸಭೆಗಳ ಗೌಪ್ಯತೆಯನ್ನು ಪ್ರಶ್ನಿಸಿದ ಹೆಚ್‌ಡಿಕೆ, “ಮುಖ್ಯಮಂತ್ರಿಗಳು ಬೀದರ್‌ನ ಅನುಭವ ಮಂಟಪಕ್ಕೆ ಭೇಟಿ ನೀಡಿ ಬಳಿಕ ಕಾಂಗ್ರೆಸ್ ಪಕ್ಷದ ಸಭೆ ನಡೆಸಿದ್ದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಕಲಬುರಗಿಯಲ್ಲಿ ನಡೆದ ಸರ್ಕಾರದ ಅಧಿಕೃತ ಪ್ರಗತಿ ಪರಿಶೀಲನಾ ಸಭೆಗೆ ಮಾಧ್ಯಮ ಪ್ರತಿನಿಧಿಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿದ್ದು ಏಕೆ? ಇಷ್ಟೊಂದು ರಹಸ್ಯವಾಗಿ ಸಭೆ ನಡೆಸುವ ಅಗತ್ಯವೇನಿದೆ? ಸರ್ಕಾರದ ಜನವಿರೋಧಿ ನಿರ್ಧಾರಗಳು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ತಲುಪಬಾರದು ಎಂಬ ಏಕೈಕ ಕೀಳು ಉದ್ದೇಶದಿಂದ ಈ ನಿರ್ಬಂಧ ಹೇರಲಾಗಿದೆ” ಎಂದು ಗಂಭೀರವಾಗಿ ಆರೋಪಿಸಿದರು.

ರಹಸ್ಯ ಸಭೆಯಲ್ಲಿ ಕುಡಿಯುವ ನೀರಿಗಿಂತ ‘ಮತಪಟ್ಟಿ ಅಕ್ರಮ’ದ್ದೇ ಚಿಂತೆ! ಬೆಳಗಾವಿ ಮತ್ತು ಕಲಬುರಗಿ ಸಭೆಗಳ ನೈಜ ಅಜೆಂಡಾವನ್ನು ಬಯಲಿಗೆಳೆದ ಕೇಂದ್ರ ಸಚಿವರು, “ರಾಜ್ಯದ ಜನಸಾಮಾನ್ಯರ ಕುಡಿಯುವ ನೀರು ಅಥವಾ ರಸಗೊಬ್ಬರ ಕೊರತೆಯ ಬಗ್ಗೆ ಮುಖ್ಯಮಂತ್ರಿಗಳಿಗೆ ಕಾಳಜಿಯಿಲ್ಲ. ಪತ್ರಕರ್ತರನ್ನು ಹೊರಗಿಟ್ಟು ನಡೆಸಿದ ಆ ರಹಸ್ಯ ಸಭೆಗಳಲ್ಲಿ ಚರ್ಚೆಯಾಗಿರುವುದು ಕೇವಲ ‘SIR’ (ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯ ಬಗ್ಗೆ ಮಾತ್ರ. ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮತದಾರರ ಪಟ್ಟಿಯಲ್ಲಿ ಹೇಗೆ ಅಕ್ರಮ ಎಸಗಬೇಕು ಮತ್ತು ತಮಗೆ ಪೂರಕವಾಗಿ ಹೇಗೆ ಬದಲಾವಣೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಖುದ್ದಾಗಿ ರಹಸ್ಯ ಗೈಡ್‌ಲೈನ್ಸ್ ನೀಡಿದ್ದಾರೆ. ಈ ಕುರಿತು ನಮ್ಮ ಬಳಿ ಖಚಿತ ಮಾಹಿತಿಯಿದೆ” ಎಂದು ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕನ್ನಡದ ಹೆಮ್ಮೆಯ ಕಾದಂಬರಿಕಾರ್ತಿ ಸಿ.ಎನ್. ಮುಕ್ತಾ ಇನ್ನಿಲ್ಲ: ಮೈಸೂರಿನಲ್ಲಿ ಹಿರಿಯ ಸಾಹಿತಿ ಕೊನೆಯುಸಿರು

Leave a Reply

Your email address will not be published. Required fields are marked *