ಬೆಂಗಳೂರು: ಬಿಜೆಪಿ ನಾಯಕರ ಮಕ್ಕಳು ಆರ್‌ಎಸ್‌ಎಸ್‌ನಲ್ಲಿ ಪೂರ್ಣಾವಧಿ ಪ್ರಚಾರಕರಾಗಿ ಕೆಲಸ ಮಾಡುತ್ತಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೊಲೆ ಪ್ರಕರಣಗಳಲ್ಲಿ ಸಿಲುಕಿ ಜೈಲು ಪಾಲಾದವರಿಗೆ ಸಂಘ ಪರಿವಾರದವರು ನೆರವು ನೀಡುತ್ತಿಲ್ಲ ಎಂದು ಹಿಂದೂ ಸಂಘಟನೆಗಳೇ ಆರೋಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ತಾವೂ ಮೊದಲಿನಿಂದಲೂ ಇದೇ ಮಾತನ್ನು ಹೇಳುತ್ತಿರುವುದಾಗಿ ನೆನಪಿಸಿದರು. ಧರ್ಮ ರಕ್ಷಣೆ ಮತ್ತು ಗೋ ರಕ್ಷಣೆಯ ಹೆಸರಿನಲ್ಲಿ ಬಡವರ ಮಕ್ಕಳನ್ನು ಮಾತ್ರ ಮುಂಚೂಣಿಗೆ ಬಿಡಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಗರಿಗೆ ಸವಾಲು ಹಾಕಿದ ಸಚಿವರು
ಒಬ್ಬನೇ ಒಬ್ಬ ಬಿಜೆಪಿ ಪ್ರಮುಖ ನಾಯಕನ ಮಗ ಆರ್‌ಎಸ್‌ಎಸ್‌ನಲ್ಲಿ ಪೂರ್ಣಾವಧಿ ಪ್ರಚಾರಕನಾಗಿದ್ದರೆ ತೋರಿಸಲಿ ಎಂದು ಸವಾಲು ಹಾಕಿದ ಸಚಿವರು, ಇವರ ಮಕ್ಕಳು ಕೇವಲ ವಿಜಯದಶಮಿಯ ಒಂದು ದಿನ ಮಾತ್ರ ಸಂಘದ ಗಣವೇಷ ಧರಿಸಿ ಕಾಣಿಸಿಕೊಳ್ಳುತ್ತಾರೆ ಎಂದು ಲೇವಡಿ ಮಾಡಿದರು. ಕೋಮು ಗಲಭೆಗಳಲ್ಲಿ ಬಲಿಯಾಗುತ್ತಿರುವುದು ಕೇವಲ 22 ರಿಂದ 28 ವರ್ಷದ ಬಡ ಯುವಕರೇ ಹೊರತು ನಾಯಕರ ಮಕ್ಕಳಲ್ಲ. ಪರೇಶ್ ಮೆಸ್ತಾ ಹೆಸರಿನಲ್ಲಿ ಚುನಾವಣೆ ಗೆದ್ದವರು ಆ ಬಳಿಕ ಅವರ ಕುಟುಂಬವನ್ನು ತಿರುಗಿಯೂ ನೋಡಿಲ್ಲ ಎಂದು ಅವರು ದೂರಿದರು. ಆದ್ದರಿಂದ ಯುವಕರು ಇನ್ನು ಮುಂದಾದರೂ ಎಚ್ಚೆತ್ತುಕೊಂಡು, ಇಂತಹ ವಿಚಾರಗಳಿಂದ ದೂರವಿದ್ದು ಉದ್ಯೋಗದ ಕಡೆಗೆ ಗಮನ ಹರಿಸಿ ತಮ್ಮ ಕುಟುಂಬಗಳಿಗೆ ನೆರವಾಗಬೇಕು ಎಂದು ಕರೆ ನೀಡಿದರು.
ಕೋಮು ಗಲಭೆಗೆ ಯುವಕರನ್ನ ಬಳಸಿಕೊಳ್ಳಲಾಗುತ್ತಿದೆ
ಕೋಮು ಗಲಭೆಗಳಿಗೆ ಕೇವಲ ದಲಿತರು ಮತ್ತು ಹಿಂದುಳಿದ ವರ್ಗಗಳ ಯುವಕರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಪ್ರಿಯಾಂಕ್ ಖರ್ಗೆ, ರೈತರ ಸಮಸ್ಯೆ, ನಿರುದ್ಯೋಗ ಮತ್ತು ಬೆಲೆ ಏರಿಕೆ ವಿಚಾರಗಳ ಬಗ್ಗೆ ಆರ್‌ಎಸ್‌ಎಸ್ ಎಂದಾದರೂ ಧ್ವನಿ ಎತ್ತಿದೆಯೇ ಎಂದು ಪ್ರಶ್ನಿಸಿದರು. ಕೇವಲ ಪ್ರಚೋದನಕಾರಿ ವಿಷಯಗಳಿಗೆ ಮಾತ್ರ ಯುವಕರನ್ನು ಬಳಸಿ ನರಕಕ್ಕೆ ತಳ್ಳಲಾಗುತ್ತದೆ ಮತ್ತು ಸಂಕಷ್ಟ ಬಂದಾಗ ಯಾರೂ ನೆರವಿಗೆ ಬರುವುದಿಲ್ಲ ಎಂದರು. ತಮಗೆ ಬೆದರಿಕೆ ಹಾಕಿದ್ದ ಯುವಕನಿಗೆ ಕನಿಷ್ಠ ಲಾಯರ್ ವ್ಯವಸ್ಥೆ ಮಾಡಲು ಕೂಡ ಸಂಘಟನೆಯವರು ಬರಲಿಲ್ಲ, ಆತನ ತಾಯಿ ವಿನಂತಿಸಿದ ಕಾರಣ ತಾವು ಬಿಟ್ಟಿದ್ದಾಗಿ ನೆನಪಿಸಿಕೊಂಡರು. ರಾಜಕೀಯ ಲಾಭಕ್ಕಾಗಿ ಮಾತ್ರ ಯುವಕರನ್ನು ಬಳಸಿಕೊಳ್ಳುವವರ ಬಗ್ಗೆ ಈ ಹಿಂದೆ ಮಹೇಂದ್ರ ಕುಮಾರ್ ಅವರು ಆಡಿದ್ದ ಮಾತುಗಳನ್ನು ಉಲ್ಲೇಖಿಸಿದ ಸಚಿವರು, ಯುವಸಮುದಾಯ ಎಷ್ಟು ಬೇಗ ಸತ್ಯವನ್ನು ಅರಿತುಕೊಳ್ಳುತ್ತದೆಯೋ ಅಷ್ಟು ಒಳ್ಳೆಯದು ಎಂದು ಹಿತವಚನ ನುಡಿದರು.
ಇದನ್ನೂ ಓದಿ: ಎಸ್‌ಐಆರ್‌ನಲ್ಲಿ ಸರ್ಕಾರದ ಕೈವಾಡವಿಲ್ಲ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ!
