TOP NEWS

BJP: ಅಡ್ಡ ಮತದಾನದ ತನಿಖೆ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್‌ನಿಂದ ತುರ್ತು ಬುಲಾವ್! ದೆಹಲಿಗೆ ದೌಡಾಯಿಸಿದ ವಿಜಯೇಂದ್ರ, ಆರ್‌. ಅಶೋಕ್

R Ashok and BY Vijayendra went to regarding cross voting BJP

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಸಂಭವಿಸಿದ ಅಡ್ಡ ಮತದಾನದ (Cross Voting) ಆಘಾತಕಾರಿ ಬೆಳವಣಿಗೆಯು ಕರ್ನಾಟಕ ಬಿಜೆಪಿಯಲ್ಲಿ (BJP) ತಲ್ಲಣ ಸೃಷ್ಟಿಸಿದ್ದು, ಈ ಬೆನ್ನಲ್ಲೇ ಹೈಕಮಾಂಡ್‌ನಿಂದ ತುರ್ತು ಕರೆ ಬಂದ ಹಿನ್ನೆಲೆಯಲ್ಲಿ ರಾಜ್ಯ ಪ್ರಮುಖ ನಾಯಕರು ದೆಹಲಿಗೆ ಧಾವಿಸಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಇಂದು ಮುಂಜಾನೆಯೇ ರಾಷ್ಟ್ರ ರಾಜಧಾನಿ ತಲುಪಿದ್ದರೆ, ಅವರ ಹಿಂದೆಯೇ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಕೂಡ ದೆಹಲಿ ವಿಮಾನವೇರಿದ್ದಾರೆ.

ವರಿಷ್ಠರ ಮುಂದೆ ನಾಯಕರ ಅಗ್ನಿಪರೀಕ್ಷೆ ಪಕ್ಷದ ಶಾಸಕರಿಂದಲೇ ಮೈತ್ರಿಕೂಟದ ಅಭ್ಯರ್ಥಿಗಳಿಗೆ ನಿರೀಕ್ಷಿತ ಮತಗಳು ಬಾರದೆ ಉಂಟಾಗಿರುವ ಮುಖಭಂಗದ ಕುರಿತು ನಾಳೆ (ಜೂನ್ 23) ಮಧ್ಯಾಹ್ನ 12 ಗಂಟೆಗೆ ಬಿಜೆಪಿ ರಾಷ್ಟ್ರೀಯ ನಾಯಕರಾದ ನಿತಿನ್ ನಬಿನ್ ಅವರ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ವೇಳೆ ಬಿ.ವೈ. ವಿಜಯೇಂದ್ರ ಹಾಗೂ ಆರ್. ಅಶೋಕ್ ಇಬ್ಬರೂ ಜಂಟಿಯಾಗಿ ವರಿಷ್ಠರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ವಿವರಣೆ ನೀಡಲಿದ್ದಾರೆ. ಪಕ್ಷದ ವೀಪ್ ಇದ್ದಾಗಲೂ ಮೈತ್ರಿ ಅಭ್ಯರ್ಥಿಗಳಿಗೆ ದ್ರೋಹ ಬಗೆದು ಅಡ್ಡ ಮತ ಚಲಾಯಿಸಿದ ಶಾಸಕರು ಯಾರು ಮತ್ತು ಈ ಭಿನ್ನಮತಕ್ಕೆ ಕಾರಣವಾದ ಆಂತರಿಕ ಒಳಜಗಳಗಳೇನು ಎಂಬುದರ ಕುರಿತು ಹೈಕಮಾಂಡ್ ಇವರಿಂದ ನೇರ ಸ್ಪಷ್ಟನೆ ಕೇಳಲಿದೆ.

ಸಿದ್ಧವಾಗುತ್ತಿದೆ ಬಂಡಾಯಗಾರರ ರಿಪೋರ್ಟ್ ಕಾರ್ಡ್ ಇನ್ನೊಂದೆಡೆ, ಈ ಇಡೀ ಪ್ರಹಸನದ ಹಿಂದಿರುವ ರೂವಾರಿಗಳನ್ನು ಪತ್ತೆಹಚ್ಚಲು ಬಿಜೆಪಿ ವರಿಷ್ಠರು ಈಗಾಗಲೇ ಹಿರಿಯ ನಾಯಕರಾದ ಸಿ.ಟಿ. ರವಿ, ಎನ್. ಮಹೇಶ್ ಮತ್ತು ಮಹೇಶ್ ತೆಂಗಿನಕಾಯಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿದ್ದಾರೆ. ಈ ಸಮಿತಿಯು ರಾಜ್ಯದ ಶಾಸಕರು ಹಾಗೂ ಸ್ಥಳೀಯ ಮುಖಂಡರಿಂದ ಆಂತರಿಕ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದು, ಜೂನ್ 25 ರೊಳಗೆ ತನ್ನ ಅಂತಿಮ ವರದಿಯನ್ನು ದೆಹಲಿ ನಾಯಕರಿಗೆ ತಲುಪಿಸಲಿದೆ.

ನಾಳೆ ನಡೆಯಲಿರುವ ಹೈಕಮಾಂಡ್ ಭೇಟಿಯ ಫಲಿತಾಂಶ ಮತ್ತು ಜೂನ್ 25ಕ್ಕೆ ಸಲ್ಲಿಕೆಯಾಗಲಿರುವ ತನಿಖಾ ವರದಿಯ ಆಧಾರದ ಮೇಲೆ ಕೇಂದ್ರ ನಾಯಕರು ರಾಜ್ಯ ಬಿಜೆಪಿ ನಾಯಕತ್ವದ ಕುರಿತು ಕಠಿಣ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಈ ಚುನಾವಣಾ ವೈಫಲ್ಯವು ವಿಜಯೇಂದ್ರ ಮತ್ತು ಅಶೋಕ್ ಅವರ ಅಧಿಕಾರದ ಸ್ಥಾನಕ್ಕೆ ಕುತ್ತು ತಂದಿಟ್ಟಿದ್ದು, ನಾಳೆಯ ದೆಹಲಿ ಸಭೆಯು ಇವರಿಬ್ಬರ ರಾಜಕೀಯ ಭವಿಷ್ಯವನ್ನು ನಿರ್ಧರಿಸುವಲ್ಲಿ ಅತ್ಯಂತ ನಿರ್ಣಾಯಕ ಎನಿಸಿದೆ.

ಇದನ್ನೂ ಓದಿ: ಅನ್ನಭಾಗ್ಯಕ್ಕೂ ಗ್ಯಾರಂಟಿ ಕತ್ತರಿ?; 14 ಲಕ್ಷ ನಕಲಿ ಬಿಪಿಎಲ್ ಕಾರ್ಡ್ ರದ್ದತಿಗೆ ಮುನಿಯಪ್ಪ ಮಾಸ್ಟರ್ ಪ್ಲಾನ್

Leave a Reply

Your email address will not be published. Required fields are marked *