TOP NEWS

Gold: ಬಂಗಾರದ ಬೆಲೆ ಏರಿಕೆಗೆ ಬೆಚ್ಚಿದ ಗ್ರಾಹಕರು: ಶೇಕಡಾ 70 ರಷ್ಟು ಕುಸಿದ ಬಂಗಾರ ಆಮದು, ಮಾರುಕಟ್ಟೆ ಮಂಕು!

Gold purchase decreased in india after modi call

ಬೆಂಗಳೂರು: ಆಭರಣಗಳೆಂದರೆ ಅಪಾರ ಒಲವು ಹೊಂದಿರುವ ಭಾರತೀಯರು ಸದ್ಯ ಚಿನ್ನ (Gold) ಖರೀದಿಯಿಂದ ಕೊಂಚ ದೂರ ಸರಿದಿದ್ದಾರೆ. ದೇಶಾದ್ಯಂತ ಹಳದಿ ಲೋಹದ ಬೇಡಿಕೆಯಲ್ಲಿ ಭಾರಿ ಇಳಿಮುಖ ಕಂಡುಬಂದಿದ್ದು, ಪರಿಣಾಮವಾಗಿ ವಿದೇಶಗಳಿಂದ ಭಾರತಕ್ಕೆ ಆಗುತ್ತಿದ್ದ ಚಿನ್ನದ ಆಮದು ಪ್ರಮಾಣ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 27 ಟನ್ ಚಿನ್ನ ಭಾರತಕ್ಕೆ ಆಮದಾಗಿತ್ತು. ಆದರೆ ಈ ಬಾರಿ ಕೇವಲ 7.5 ಟನ್ ಮಾತ್ರ ಆಮದು ಮಾಡಿಕೊಳ್ಳಲಾಗಿದ್ದು, ಒಟ್ಟಾರೆ ಆಮದಿನಲ್ಲಿ ಶೇ. 70 ರಷ್ಟು ದಾಖಲೆಯ ಕುಸಿತವಾಗಿದೆ. ಇದರ ಬಿಸಿ ಸ್ಥಳೀಯ ವ್ಯಾಪಾರಿಗಳಿಗೂ ತಟ್ಟಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಪ್ರಸಿದ್ಧ ಜ್ಯುವೆಲ್ಲರಿ ಶಾಪ್‌ಗಳಲ್ಲಿ ವಹಿವಾಟು ಅರ್ಧಕ್ಕಿಂತ ಹೆಚ್ಚು ಮಂಕಾಗಿದೆ.

ಏರುತ್ತಿದೆ ಚಿನ್ನದ ಬೆಲೆಗಳು

ಬಂಗಾರದ ಆಮದು ಸುಂಕದ ದರಗಳು ಹೆಚ್ಚಾಗಿರುವುದು ಮತ್ತು ಮಾರುಕಟ್ಟೆಯಲ್ಲಿ ನಿರಂತರವಾಗಿ ಏರುತ್ತಿರುವ ಬೆಲೆಗಳು ಗ್ರಾಹಕರು ಅಂಗಡಿಗಳತ್ತ ಸುಳಿಯದಂತೆ ಮಾಡಿದೆ. ಇದರ ನಡುವೆ, ಪ್ರಸಕ್ತ ಸಾಲಿನಲ್ಲಿ ‘ಅಧಿಕ ಮಾಸ’ ಬಂದಿರುವುದರಿಂದ ಶುಭ ಮುಹೂರ್ತಗಳಿಲ್ಲದೆ ಮದುವೆ ಮತ್ತು ಧಾರ್ಮಿಕ ಸಮಾರಂಭಗಳ ಸೀಸನ್ ಕಳೆಗುಂದಿದೆ. ಯಾವುದೇ ಹಬ್ಬ ಅಥವಾ ಮದುವೆಯ ಧೂಡಂ ಇಲ್ಲದ ಕಾರಣ, ಗ್ರಾಹಕರು ಹೊಸದಾಗಿ ಆಭರಣ ಮಾಡಿಸಲು ಆಸಕ್ತಿ ತೋರುತ್ತಿಲ್ಲ.

ಜಾಗತಿಕ ಮಟ್ಟದಲ್ಲಿ ಚೀನಾ ದೇಶವನ್ನು ಬಿಟ್ಟರೆ ಅತಿ ಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವುದು ಭಾರತವೇ ಆಗಿದೆ. ಇಲ್ಲಿನ ಮಧ್ಯಮ ವರ್ಗದ ಜನರಿಗೆ ಬಂಗಾರ ಎನ್ನುವುದು ಕೇವಲ ಅಲಂಕಾರದ ವಸ್ತುವಲ್ಲ, ಬದಲಿಗೆ ಅದೊಂದು ಸುರಕ್ಷಿತ ಹೂಡಿಕೆ. ಆದರೆ, ಜನ ಸಾಮಾನ್ಯರು ಚಿನ್ನದ ಮೇಲೆ ಅತಿಯಾಗಿ ಹಣ ಸುರಿಯುವುದರಿಂದ ದೇಶದ ಬೊಕ್ಕಸದಿಂದ ವಿದೇಶಿ ವಿನಿಮಯದ ರೂಪದಲ್ಲಿ ದೊಡ್ಡ ಮೊತ್ತ ಹೊರಹೋಗಿ ಆರ್ಥಿಕತೆಯ ಮೇಲೆ ಒತ್ತಡ ಸೃಷ್ಟಿಯಾಗುತ್ತದೆ. ಸದ್ಯ ಜಾಗತಿಕ ಇಂಧನ ದರಗಳ ಏರಿಕೆ ಹಾಗೂ ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ದೇಶದ ಆರ್ಥಿಕ ಹಿತದೃಷ್ಟಿಯಿಂದ ಮಿತವ್ಯಯ ಸಾಧಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಕರೆ ನೀಡಿದ್ದರು. ಈ ಕರೆಗೆ ಸ್ಪಂದಿಸಿರುವ ಭಾರತೀಯರು ತಮ್ಮ ಆಭರಣ ಪ್ರೇಮವನ್ನು ಸದ್ಯಕ್ಕೆ ಹತ್ತಿಕ್ಕಿ, ಬಂಗಾರ ಖರೀದಿಗೆ ಬ್ರೇಕ್ ಹಾಕಿರುವುದು ಮಾರುಕಟ್ಟೆಯಲ್ಲಿ ಈ ಮಹತ್ವದ ಬದಲಾವಣೆಗೆ ಕಾರಣವಾಗಿದೆ.

ಇದನ್ನೂ ಓದಿ: ಪೆಟ್ರೋಲ್ ಬೆಲೆ ಏರಿಕೆಗೆ ಆಕ್ರೋಶ: ಶನಿವಾರ ಆ್ಯಪ್ ಆಧಾರಿತ ಸೇವೆಗಳು ಸ್ಥಗಿತ

Leave a Reply

Your email address will not be published. Required fields are marked *