ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ (ಮೇ 18) ಎಸ್ಎಸ್ಎಲ್ಸಿ (SSLC) ಎರಡನೇ ಪರೀಕ್ಷೆಗಳು ಆರಂಭಗೊಂಡಿವೆ. ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತಗಳನ್ನು ಧರಿಸಲು ಅನುಮತಿ ನೀಡುವ ಕುರಿತು ಸರ್ಕಾರ ಇತ್ತೀಚೆಗಷ್ಟೇ ಹೊಸ ಮಾರ್ಗಸೂಚಿ ಪ್ರಕಟಿಸಿತ್ತಾದರೂ, ಪ್ರಸಕ್ತ ಪರೀಕ್ಷೆಯಲ್ಲಿ ಹಿಜಾಬ್ (Hijab) ಧರಿಸಿ ಬರೆಯಲು ವಿದ್ಯಾರ್ಥಿನಿಯರಿಗೆ ಅವಕಾಶ ಸಿಕ್ಕಿಲ್ಲ. ಜನಿವಾರ, ಶಿವದಾರ, ಲಿಂಗ ಮತ್ತು ರುದ್ರಾಕ್ಷಿ ಧರಿಸಲು ಸಮ್ಮತಿ ಇದ್ದರೂ, ಹಿಜಾಬ್ ನಿಷೇಧ ಮುಂದುವರಿದಿದೆ.
ಹಳೆಯ ನಿಯಮದಂತೆಯೇ ಪರೀಕ್ಷೆ ಮೊದಲನೇ ಪರೀಕ್ಷೆಯ ಮಾದರಿಯಲ್ಲೇ ಈ ಬಾರಿಯೂ ಪರೀಕ್ಷಾ ಪ್ರಕ್ರಿಯೆಗಳು ನಡೆಯುತ್ತಿವೆ. ವಸ್ತ್ರಸಂಹಿತೆಗೆ ಸಂಬಂಧಿಸಿದಂತೆ ಪರೀಕ್ಷಾ ಮಂಡಳಿಗೆ ಸರ್ಕಾರದಿಂದ ಯಾವುದೇ ಪ್ರತ್ಯೇಕ ಹೊಸ ಆದೇಶ ಬಾರದೇ ಇರುವುದರಿಂದ ಹಳೆಯ ನಿಯಮವನ್ನೇ ಪಾಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ, ಹಿಜಾಬ್ ಧರಿಸಿ ಕೇಂದ್ರಕ್ಕೆ ಬಂದ ವಿದ್ಯಾರ್ಥಿನಿಯರಿಂದ ಅದನ್ನು ತೆಗೆಸಿದ ನಂತರವೇ ಕೊಠಡಿಯೊಳಗೆ ಪ್ರವೇಶ ನೀಡಲಾಗುತ್ತಿದೆ. ಮೇ 25 ರವರೆಗೆ ನಡೆಯಲಿರುವ ಈ ಪರೀಕ್ಷೆಗೆ ಒಟ್ಟು 1,15,112 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ 7,658 ಅಭ್ಯರ್ಥಿಗಳು ತಮ್ಮ ಅಂಕಗಳನ್ನು ಸುಧಾರಿಸಿಕೊಳ್ಳಲು (ಇಂಪ್ರೂವ್ಮೆಂಟ್) ಪರೀಕ್ಷೆ ಬರೆಯುತ್ತಿದ್ದಾರೆ.
ಸರ್ಕಾರದ ಹೊಸ ನಿರ್ಧಾರಕ್ಕೆ ಹಿಂದೂ ಸಂಘಟನೆಗಳ ತೀವ್ರ ವಿರೋಧ ಮತ್ತೊಂದೆಡೆ, ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಮುಕ್ತ ಅವಕಾಶ ಕಲ್ಪಿಸಿರುವ ರಾಜ್ಯ ಸರ್ಕಾರದ ಇತ್ತೀಚಿನ ತೀರ್ಮಾನಕ್ಕೆ ಬಿಜೆಪಿ ಹಾಗೂ ವಿವಿಧ ಹಿಂದೂ ಸಂಘಟನೆಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರದ ಈ ಕ್ರಮವನ್ನು ಖಂಡಿಸಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಹಿಂದಿನ ಬಿಜೆಪಿ ಸರ್ಕಾರವು 2022ರ ಫೆಬ್ರವರಿ 5ರಂದು ಶಾಲಾ ಆವರಣದಲ್ಲಿ ಹಿಜಾಬ್ ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ಪ್ರಸ್ತುತ ಕಾಂಗ್ರೆಸ್ ಸರ್ಕಾರ ಅಧಿಕೃತವಾಗಿ ಹಿಂಪಡೆದಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೊಸ ನಿಯಮಾವಳಿಗಳ ಅನ್ವಯ, ವಿದ್ಯಾರ್ಥಿಗಳು ಸಮವಸ್ತ್ರದ ಜೊತೆಗೆ ಹಿಜಾಬ್, ಪೇಟ, ಜನಿವಾರ ಹಾಗೂ ರುದ್ರಾಕ್ಷಿಯಂತಹ ಸಾಂಪ್ರದಾಯಿಕ ಸಂಕೇತಗಳನ್ನು ಧರಿಸಬಹುದು. ಆದರೆ, ಇದು ಶಾಲೆಯ ಶಿಸ್ತಿಗೆ ಭಂಗ ತರಬಾರದು ಮತ್ತು ವಿದ್ಯಾರ್ಥಿಗಳನ್ನು ಗುರುತಿಸಲು ಅಡ್ಡಿಯಾಗಬಾರದು ಎಂಬ ಷರತ್ತನ್ನು ವಿಧಿಸಲಾಗಿದೆ.
ಸರ್ಕಾರದ ಈ ಹೊಸ ನಿಲುವಿನಿಂದಾಗಿ ಶಾಲೆಗಳಲ್ಲಿ ಸಮಾನತೆ ಹಾಗೂ ಶಿಸ್ತು ಇಲ್ಲದಂತಾಗುತ್ತದೆ ಎಂದು ಹಿಂದೂ ಸಂಘಟನೆಗಳು ದೂರಿದ್ದು, ಹೈಕೋರ್ಟ್ ಮಾರ್ಗಸೂಚಿಗಳು ಚಾಲ್ತಿಯಲ್ಲಿದ್ದರೂ ಸರ್ಕಾರ ಓಲೈಕೆ ರಾಜಕಾರಣಕ್ಕಾಗಿ ಇಂತಹ ನಿರ್ಧಾರಕ್ಕೆ ಬಂದಿದೆ ಎಂದು ತೀವ್ರವಾಗಿ ಟೀಕಿಸಿವೆ.
ಹಿಜಾಬ್ಗೆ ಕಾಂಗ್ರೆಸ್ ಅಸ್ತು: “ಅಲ್ಪಸಂಖ್ಯಾತರ ಓಲೈಕೆಗಾಗಿ ಸರ್ಕಾರದಿಂದ ಷಡ್ಯಂತ್ರ” ಎಂದು ಗುಡುಗಿದ ವಿಜಯೇಂದ್ರ
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ಗೆ ಹಸಿರು ನಿಶಾನೆ ತೋರಿಸಿರುವ ಕಾಂಗ್ರೆಸ್ ಸರ್ಕಾರದ ಕ್ರಮದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಕಿಡಿಹೊತ್ತಿಸಿದ್ದಾರೆ. ಸರ್ಕಾರದ ಈ ನಡೆಯು ರಾಜ್ಯದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಎಂದು ಅವರು ನೇರ ವಾಗ್ದಾಳಿ ನಡೆಸಿದ್ದಾರೆ.
ಆಡಳಿತ ವೈಫಲ್ಯ ಮುಚ್ಚಿಡಲು ಷಡ್ಯಂತ್ರ: ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, “ರಾಜ್ಯ ಸರ್ಕಾರಕ್ಕೆ ಜನಹಿತಕ್ಕಿಂತ ರಾಜಕೀಯವೇ ಮುಖ್ಯವಾಗಿದೆ. ಆಡಳಿತದ ಮೇಲೆ ಹಿಡಿತ ಕಳೆದುಕೊಂಡಿರುವ ಇವರು, ಜನಸಾಮಾನ್ಯರ ಗಮನವನ್ನು ಬೇರೆಡೆ ಸೆಳೆಯಲು ಧರ್ಮಗಳ ನಡುವೆ ಕಲಹ ಸೃಷ್ಟಿಸುತ್ತಿದ್ದಾರೆ. ಕಾಂಗ್ರೆಸ್ನ ಇಂತಹ ಪ್ರಚೋದನಾಕಾರಿ ನಡೆಗಳಿಗೆ ಸಾರ್ವಜನಿಕರೇ ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ” ಎಂದು ಎಚ್ಚರಿಸಿದರು.
ಓಲೈಕೆಗಾಗಿ ನ್ಯಾಯಾಂಗದ ಕಡೆಗಣನೆ: ಹಿಜಾಬ್ ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಸರ್ಕಾರ ಇಂತಹ ನಿರ್ಧಾರ ಕೈಗೊಂಡಿರುವುದು ಕೇವಲ ಒಂದು ವರ್ಗದ ಮತಗಳ ಓಲೈಕೆಗಾಗಿ ಎಂದು ಅವರು ಟೀಕಿಸಿದರು. ಅಲ್ಪಸಂಖ್ಯಾತ ಸಮುದಾಯವನ್ನು ಸಂತುಷ್ಟಗೊಳಿಸಲು ಕಾನೂನು ಮತ್ತು ಶಿಸ್ತನ್ನು ಬಲಿಕೊಡಲಾಗುತ್ತಿದೆ ಎಂದು ಅವರು ದೂರಿದರು.
ಹಿಂದೂಗಳ ಭಾವನೆಗೆ ಧಕ್ಕೆ: ಉಪಚುನಾವಣೆಯ ಫಲಿತಾಂಶದಿಂದ ಬೀಗುತ್ತಿರುವ ಕಾಂಗ್ರೆಸ್, ಸಮಾಜದಲ್ಲಿ ಒಡಕು ಮೂಡಿಸುವ ಕೆಲಸಕ್ಕೆ ಕೈ ಹಾಕಿದೆ. ಅಭಿವೃದ್ಧಿ ಮರೆತು ಕೇವಲ ತುಷ್ಟೀಕರಣದ ಅಜೆಂಡಾವನ್ನು ಜಾರಿಗೆ ತರುತ್ತಿರುವ ಸರ್ಕಾರ, ಹಿಂದೂಗಳ ಹಿತಾಸಕ್ತಿಯನ್ನು ಸತತವಾಗಿ ನಿರ್ಲಕ್ಷಿಸುತ್ತಿದೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ. ಪ್ರತಿ ಹೆಜ್ಜೆಯಲ್ಲೂ ಜನರನ್ನು ಪರಸ್ಪರ ಎತ್ತಿಕಟ್ಟುವ ಮೂಲಕ ರಾಜಕೀಯ ಲಾಭ ಪಡೆಯಲು ಸರ್ಕಾರ ಹೊಂಚು ಹಾಕುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಹಿಜಾಬ್ ಬಂದರೆ ಕೇಸರಿ ಶಾಲೂ ಬಂದೇ ಬರುತ್ತೆ, ಸರ್ಕಾರದ ವಿರುದ್ಧ ಬಿಜೆಪಿ ಕಿಡಿ
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ (Hijab) ಮೇಲಿದ್ದ ನಿರ್ಬಂಧವನ್ನು ತೆಗೆದುಹಾಕಲು ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ಬಿಜೆಪಿ (BJP) ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ನಿರ್ಧಾರವು ಶಾಲಾ ಆವರಣದಲ್ಲಿ ಶಿಸ್ತು ಮತ್ತು ಸಮಾನತೆಯನ್ನು ಕದಡಲಿದೆ ಎಂದು ಆಪಾದಿಸಿರುವ ಬಿಜೆಪಿ ನಾಯಕರು, ಒಂದು ಸಮುದಾಯಕ್ಕೆ ವಿಶೇಷ ರಿಯಾಯಿತಿ ನೀಡಿದರೆ ಹಿಂದೂ ವಿದ್ಯಾರ್ಥಿಗಳೂ ಕೇಸರಿ ಶಾಲು ಧರಿಸಿ ಬರಲು ಅನುಮತಿ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸಿ.ಟಿ. ರವಿ ಕಿಡಿ: “ಸಮವಸ್ತ್ರದ ಪರಿಕಲ್ಪನೆಗೆ ಧಕ್ಕೆ”
ಈ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಕಿಡಿಕಾರಿದ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ‘ಮರಿ ತಾಲಿಬಾನ್’ ಸರ್ಕಾರ ಎಂದು ಟೀಕಿಸಿದರು. “ಸಮವಸ್ತ್ರ ಎಂದರೆ ಎಲ್ಲರೂ ಸಮಾನರು ಎಂದರ್ಥ. ಆದರೆ ಸರ್ಕಾರ ಹಿಜಾಬ್ಗೆ ಮಣೆ ಹಾಕುವ ಮೂಲಕ ಭೇದಭಾವ ಮಾಡುತ್ತಿದೆ. ಧಾರ್ಮಿಕ ಆಚರಣೆಗಳನ್ನು ಮನೆಗೆ ಸೀಮಿತಗೊಳಿಸಬೇಕೇ ಹೊರತು ಶಾಲೆಗಳಿಗಲ್ಲ. ಶಿಕ್ಷಣ ಕಾಯ್ದೆಯನ್ನು ಮೀರಿ ಇಂತಹ ನಿರ್ಧಾರ ಕೈಗೊಳ್ಳುವುದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತದೆ” ಎಂದು ಅವರು ಆಕ್ರೋಶ ಹೊರಹಾಕಿದರು.
