ಬೆಂಗಳೂರು: ರಾಜ್ಯದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಎರಡು ಪ್ರಮುಖ ವಿಚಾರಗಳ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ (G Parameshwar) ಅವರು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಡಿಜಿಪಿ ರಾಮಚಂದ್ರರಾವ್ ಅವರ ಅಮಾನತು ಆದೇಶ ವಾಪಸ್ ಹಾಗೂ ಐಪಿಎಲ್ ಪಂದ್ಯಗಳು ಬೆಂಗಳೂರಿನಿಂದ ಕೈತಪ್ಪಿರುವ ಬಗ್ಗೆ ಅವರು ಸುದೀರ್ಘವಾಗಿ ಮಾತನಾಡಿದ್ದಾರೆ.
ನಿವೃತ್ತಿ ಹಿನ್ನೆಲೆ ಡಿಜಿಪಿ ಅಮಾನತು ವಾಪಸ್: ಡಿಜಿಪಿ ರಾಮಚಂದ್ರರಾವ್ ಅವರು ಇದೇ ತಿಂಗಳ ಕೊನೆಯಲ್ಲಿ ನಿವೃತ್ತರಾಗುತ್ತಿರುವುದರಿಂದ, ಅವರ ಅಮಾನತನ್ನು ಮುಖ್ಯಮಂತ್ರಿಗಳ ಒಪ್ಪಿಗೆಯೊಂದಿಗೆ ರದ್ದುಗೊಳಿಸಲಾಗಿದೆ. “ನಿವೃತ್ತಿಯ ನಂತರ ಪಿಂಚಣಿ ಮತ್ತು ಇತರ ಸೌಲಭ್ಯಗಳ ವಿಲೇವಾರಿಗೆ ತಾಂತ್ರಿಕ ತೊಂದರೆಯಾಗಬಾರದು ಎಂದು ಅವರು ಮನವಿ ಮಾಡಿದ್ದರು. ಆದರೆ, ಅವರ ಮೇಲಿರುವ ರಾಸಲೀಲೆ ಪ್ರಕರಣದ ತನಿಖೆಯು ನಿಲ್ಲುವುದಿಲ್ಲ. ತನಿಖೆ ಎಂದಿನಂತೆ ಮುಂದುವರಿಯಲಿದ್ದು, ವರದಿಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು,” ಎಂದು ಸಚಿವರು ವಿವರಿಸಿದರು.
ಐಪಿಎಲ್ ಸ್ಥಳಾಂತರಕ್ಕೆ ಆಸನಗಳ ಸಂಖ್ಯೆಯೇ ಕಾರಣ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಪಂದ್ಯಗಳು ಅಹಮದಾಬಾದ್‌ಗೆ ಸ್ಥಳಾಂತರಗೊಳ್ಳಲು ಭದ್ರತಾ ಕಾರಣಗಳಿಲ್ಲ, ಬದಲಾಗಿ ವಾಣಿಜ್ಯ ಲೆಕ್ಕಾಚಾರಗಳಿವೆ ಎಂದು ಸಚಿವರು ತಿಳಿಸಿದರು. “ಬೆಂಗಳೂರಿನಲ್ಲಿ ಕೇವಲ 33 ಸಾವಿರ ಆಸನಗಳಿವೆ, ವಿಐಪಿ ಮತ್ತು ಸ್ಪಾನ್ಸರ್‌ಗಳ ಕೋಟಾ ಕಳೆದರೆ ಆಯೋಜಕರಿಗೆ ಹೆಚ್ಚಿನ ಲಾಭ ಸಿಗುವುದಿಲ್ಲ. ಆದರೆ ಅಹಮದಾಬಾದ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಆಸನಗಳಿರುವುದರಿಂದ ಲಾಭದ ದೃಷ್ಟಿಯಿಂದ ಅಲ್ಲಿಗೆ ಪಂದ್ಯ ವರ್ಗಾಯಿಸಲಾಗಿದೆ. ಶಾಸಕರಿಗೆ ಪಾಸ್ ಕೊಡುವುದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ,” ಎಂದು ಅವರು ಟೀಕಾಕಾರರಿಗೆ ಪ್ರತ್ಯುತ್ತರ ನೀಡಿದರು.
ಚುನಾವಣಾ ಅಕ್ರಮ ಹಾಗೂ ಹಿಂಸಾಚಾರ: ಶೃಂಗೇರಿ ಕ್ಷೇತ್ರದ ಫಲಿತಾಂಶದ ಅಕ್ರಮದ ಬಗ್ಗೆ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ತನಿಖೆಯಲ್ಲಿ ಸತ್ಯಾಂಶ ಹೊರಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದರು. ಇದೇ ವೇಳೆ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರಗಳನ್ನು ತಡೆಗಟ್ಟುವಲ್ಲಿ ಚುನಾವಣಾ ಆಯೋಗವು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅಣುವಿದ್ಯುತ್ ಸ್ಥಾವರ ವಿರೋಧಿಸಿ ಪ್ರತಿಭಟನೆ, ಮಾಜಿ ಶಾಸಕ ಹರತಾಳು ಹಾಲಪ್ಪ ಭಾಗಿ
