TOP NEWS

Vijay: ತಮಿಳುನಾಡಿನಲ್ಲಿ ‘ದಳಪತಿ’ ಯುಗ ಆರಂಭ: ನಾಳೆ ಮುಖ್ಯಮಂತ್ರಿಯಾಗಿ ನಟ ವಿಜಯ್ ಪ್ರಮಾಣವಚನ ಸ್ವೀಕಾರ!

rahul gandhi to participate in vijay oath ceremony

ಚೆನ್ನೈ: ತಮಿಳುನಾಡಿನ ರಾಜಕೀಯ ಚಿತ್ರಣ ಸಂಪೂರ್ಣವಾಗಿ ಬದಲಾಗಿದ್ದು, ದ್ರಾವಿಡ ಪಕ್ಷಗಳ ದಶಕಗಳ ಕಾಲದ ಪಾರುಪತ್ಯಕ್ಕೆ ಅಂತ್ಯ ಹಾಡಿ ನಟ ವಿಜಯ್ (Vijay) ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಅಧಿಕಾರಕ್ಕೇರುತ್ತಿದೆ. ಇಂದು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿಯಾದ ವಿಜಯ್, ಅಧಿಕೃತವಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದು, ನಾಳೆ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ.

ಕಾಂಗ್ರೆಸ್ ಹಸ್ತದೊಂದಿಗೆ ಮ್ಯಾಜಿಕ್ ನಂಬರ್: ಇತ್ತೀಚಿನ ಚುನಾವಣೆಯಲ್ಲಿ ವಿಜಯ್ ಅವರ ಪಕ್ಷ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಹುಮತಕ್ಕೆ ಕೇವಲ 10 ಸ್ಥಾನಗಳ ಕೊರತೆಯಿದ್ದ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ಟಿವಿಕೆಗೆ ಬೆಂಬಲ ನೀಡಿದೆ. ಈ ಮೂಲಕ ಮೈತ್ರಿ ಸರ್ಕಾರ ರಚನೆಗೆ ಅಗತ್ಯವಾದ ಸಂಖ್ಯಾಬಲದೊಂದಿಗೆ ವಿಜಯ್ ಅವರು ಈಗ ತಮಿಳುನಾಡಿನ ಚುಕ್ಕಾಣಿ ಹಿಡಿಯಲು ಸನ್ನದ್ಧರಾಗಿದ್ದಾರೆ.

ನೆಹರು ಕ್ರೀಡಾಂಗಣದಲ್ಲಿ ಅದ್ಧೂರಿ ಸಮಾರಂಭ: ನಾಳೆ ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ವಿಜಯ್ ಅವರಿಗೆ ರಾಜ್ಯಪಾಲರು ಪ್ರಮಾಣವಚನ ಬೋಧಿಸಲಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸೇರಿದಂತೆ ದೇಶದ ಪ್ರಮುಖ ರಾಜಕೀಯ ನಾಯಕರು ಆಗಮಿಸುತ್ತಿದ್ದಾರೆ. ಈ ಸಮಾರಂಭಕ್ಕಾಗಿ ಈಗಾಗಲೇ ಚೆನ್ನೈನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಇಡೀ ನಗರವು ಹಬ್ಬದಂತೆ ಸಿಂಗಾರಗೊಂಡಿದೆ.

ಹೊಸ ರಾಜಕೀಯ ಅಧ್ಯಾಯದ ನಿರೀಕ್ಷೆ: ಸಿನಿಮಾ ತೆರೆಯ ಮೇಲೆ ಜನಪ್ರಿಯತೆ ಗಳಿಸಿದ್ದ ವಿಜಯ್, ಈಗ ನೈಜ ಬದುಕಿನಲ್ಲೂ ‘ಜನನಾಯಕ’ನ ಪಟ್ಟಕ್ಕೇರುತ್ತಿರುವುದು ಅಭಿಮಾನಿಗಳಲ್ಲಿ ಸಂಭ್ರಮದ ಅಲೆ ಎಬ್ಬಿಸಿದೆ. ಭ್ರಷ್ಟಾಚಾರ ರಹಿತ ಮತ್ತು ಜನಪರ ಆಡಳಿತ ನೀಡುವ ಭರವಸೆಯೊಂದಿಗೆ ರಾಜಕೀಯಕ್ಕೆ ಬಂದಿರುವ ಅವರು, ತಮಿಳುನಾಡಿನ ಭವಿಷ್ಯವನ್ನು ಹೇಗೆ ರೂಪಿಸಲಿದ್ದಾರೆ ಎಂಬ ಕುತೂಹಲ ಇಡೀ ದೇಶದಾದ್ಯಂತ ಮನೆಮಾಡಿದೆ.

ಇದನ್ನೂ ಓದಿ: ನನ್ನನ್ನು ನನಗಿಂತಲೂ ಚೆಂದವಾಗಿ ತೋರಿಸಿದ್ದಾರೆ!: ಡೀಪ್‌ಫೇಕ್ ಕಿಡಿಗೇಡಿಗಳಿಗೆ ಇಟಲಿ ಪ್ರಧಾನಿ ಮೆಲೋನಿ ವ್ಯಂಗ್ಯಭರಿತ ತಿರುಗೇಟು

Leave a Reply

Your email address will not be published. Required fields are marked *