ದಾವಣಗೆರೆ: ದಾವಣಗೆರೆ ದಕ್ಷಿಣ (By Election) ವಿಧಾನಸಭಾ ಕ್ಷೇತ್ರದ ಉಪಸಮರದಲ್ಲಿ ಕಾಂಗ್ರೆಸ್‌ನ ಸಮರ್ಥ್ ಮಲ್ಲಿಕಾರ್ಜುನ್ ಅವರು ಸುಮಾರು 7,000 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ. ಈ ಗೆಲುವು ಕೇವಲ ಅಭ್ಯರ್ಥಿಯ ಯಶಸ್ಸಷ್ಟೇ ಅಲ್ಲದೆ, ರಾಜ್ಯ ಕಾಂಗ್ರೆಸ್ ಘಟಕದ ಪ್ರಭಾವಿ ನಾಯಕರ ನಡುವಿನ ಶಕ್ತಿ ಪ್ರದರ್ಶನಕ್ಕೂ ಸಾಕ್ಷಿಯಾಗಿದೆ.
ರಿಜ್ವಾನ್-ಸಲೀಂ ಕಾರ್ಯತಂತ್ರಕ್ಕೆ ಯಶಸ್ಸು; ಜಮೀರ್ ಬಣಕ್ಕೆ ಮುಖಭಂಗ? ಸಮರ್ಥ್ ಅವರ ಈ ವಿಜಯವು ಶಾಸಕ ರಿಜ್ವಾನ್ ಅರ್ಷದ್ ಮತ್ತು ಸಲೀಂ ಅಹ್ಮದ್ ಅವರ ಬಣಕ್ಕೆ ಸಂದ ದೊಡ್ಡ ಜಯ ಎಂದು ವಿಶ್ಲೇಷಿಸಲಾಗುತ್ತಿದೆ. ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದ ಈ ಇಬ್ಬರು ನಾಯಕರು ಅಲ್ಪಸಂಖ್ಯಾತ ಮತದಾರರನ್ನು ಸಂಘಟಿಸುವಲ್ಲಿ ಯಶಸ್ವಿಯಾದರು. ಮತ್ತೊಂದೆಡೆ, ಮುಸ್ಲಿಂ ಸಮುದಾಯದ ನಾಯಕರಿಗೇ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಬಣಕ್ಕೆ ಈ ಫಲಿತಾಂಶ ಸ್ವಲ್ಪ ಮಟ್ಟಿಗೆ ಹಿನ್ನಡೆ ಉಂಟುಮಾಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬಂಡಾಯದ ನಡುವೆಯೂ ಕೈಹಿಡಿದ ಮುಸ್ಲಿಂ ಮತದಾರರು ಚುನಾವಣಾ ಕಣದಲ್ಲಿ ಎಸ್‌ಡಿಪಿಐನ ಅಪ್ಸರ್ ಕೊಡ್ಲಿಪೇಟೆ ಸೇರಿದಂತೆ ಹಲವು ಮುಸ್ಲಿಂ ಅಭ್ಯರ್ಥಿಗಳಿದ್ದರೂ, ಅಂತಿಮವಾಗಿ ಶೇ. 70ರಷ್ಟು ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ಪರವಾಗಿ ಚಲಾವಣೆಯಾಗಿರುವುದು ರಿಜ್ವಾನ್ ಅರ್ಷದ್ ಅವರ ಶ್ರಮಕ್ಕೆ ಸಂದ ಫಲ ಎಂದು ಹೇಳಲಾಗುತ್ತಿದೆ. ಕೊನೆಯ ಕ್ಷಣದಲ್ಲಿ ಸಾದಿಕ್ ಪೈಲ್ವಾನ್ ಅವರ ಮನವೊಲಿಸಿ ಬಂಡಾಯ ಶಮನ ಮಾಡಿದ್ದು ಪಕ್ಷಕ್ಕೆ ವರದಾನವಾಯಿತು.
ಪಕ್ಷದೊಳಗಿನ ಬಿರುಕು ಬಹಿರಂಗ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್‌ನ ಮುಸ್ಲಿಂ ನಾಯಕರ ನಡುವಿನ ಅಸಮಾಧಾನ ಸ್ಫೋಟಗೊಂಡಿತ್ತು. ಜಮೀರ್ ಅಹ್ಮದ್ ಮತ್ತು ನಸೀರ್ ಅಹ್ಮದ್ ಅಂತಹ ನಾಯಕರು ಪ್ರಚಾರದಿಂದ ದೂರ ಉಳಿದಿದ್ದರು. ಇದರ ಬೆನ್ನಲ್ಲೇ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದು ಮತ್ತು ನಸೀರ್ ಅಹ್ಮದ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಿದ್ದು ಪಕ್ಷದೊಳಗಿನ ಆಂತರಿಕ ಕಚ್ಚಾಟವನ್ನು ಎತ್ತಿ ತೋರಿಸಿತ್ತು.
ಮತಗಳ ಹಂಚಿಕೆ ಹೀಗಿದೆ: ಸಮರ್ಥ್ ಅವರು ಗೆದ್ದಿದ್ದರೂ, ಎಸ್‌ಡಿಪಿಐ ಅಭ್ಯರ್ಥಿ ಅಪ್ಸರ್ ಕೊಡ್ಲಿಪೇಟೆ 15,303 ಮತಗಳನ್ನು ಪಡೆಯುವ ಮೂಲಕ ಪ್ರಬಲ ಪೈಪೋಟಿ ನೀಡಿದ್ದಾರೆ. ಉಳಿದ ಪಕ್ಷೇತರ ಮುಸ್ಲಿಂ ಅಭ್ಯರ್ಥಿಗಳು ಸಾವಿರದ ಗಡಿ ದಾಟಲು ಸಾಧ್ಯವಾಗಲಿಲ್ಲ. ಇದರಿಂದ ಮುಸ್ಲಿಂ ಮತದಾರರು ಚದುರಿ ಹೋಗದೆ ಕಾಂಗ್ರೆಸ್ ಮತ್ತು ಎಸ್‌ಡಿಪಿಐ ನಡುವೆ ಹಂಚಿಕೆಯಾಗಿರುವುದು ಸ್ಪಷ್ಟವಾಗಿದೆ.
ಈ ಗೆಲುವು ಸಮರ್ಥ್ ಅವರ ವೈಯಕ್ತಿಕ ಸಾಧನೆಯ ಜೊತೆಗೆ ದಾವಣಗೆರೆಯ ಸರ್ವ ಧರ್ಮಗಳ ಸಾಮರಸ್ಯಕ್ಕೆ ಸಂದ ಜಯ ಎಂದು ಸಾದಿಕ್ ಪೈಲ್ವಾನ್ ಬಣ್ಣಿಸಿದ್ದಾರೆ. ಈ ಫಲಿತಾಂಶವು ರಾಜ್ಯ ರಾಜಕೀಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಆಪ್ತ ಬಣಗಳ ನಡುವಿನ ಭವಿಷ್ಯದ ಲೆಕ್ಕಾಚಾರಗಳಿಗೆ ಹೊಸ ತಿರುವು ನೀಡುವ ಸಾಧ್ಯತೆಯಿದೆ.
ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳೇ ನಮ್ಮ ಗೆಲುವಿನ ಶ್ರೀರಕ್ಷೆ: ಡಿಕೆಶಿ
