TOP NEWS

Kannada Activists: ಕನ್ನಡ ಹೋರಾಟಗಾರರ ಮೇಲಿನ ಪೊಲೀಸ್ ಕೇಸ್ ವಾಪಸ್‌ ಪಡೆಯಿರಿ: ಗೃಹ ಸಚಿವರಿಗೆ ಟಿ.ಎ. ನಾರಾಯಣಗೌಡ ಆಗ್ರಹ

karave narayana gowda request regarding Kannada Activists police case

ಬೆಂಗಳೂರು: ನಾಡು, ನುಡಿ ಹಾಗೂ ನೆಲದ ರಕ್ಷಣೆಗಾಗಿ ಹೋರಾಡಿದ ಕನ್ನಡ (Kannada Activists) ಹೋರಾಟಗಾರರ ವಿರುದ್ಧ ದಾಖಲಾಗಿರುವ ಮೊಕದ್ದಮೆಗಳನ್ನು ಸರ್ಕಾರ ಕೂಡಲೇ ಕೈಬಿಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಒತ್ತಾಯಿಸಿದ್ದಾರೆ. ಸೋಮವಾರ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿಯಾದ ಅವರು, ಹೋರಾಟಗಾರರು ಎದುರಿಸುತ್ತಿರುವ ಕಾನೂನು ಸಂಕಷ್ಟಗಳ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಿದರು.

ಸರ್ಕಾರದ ವಿಳಂಬ ನೀತಿಗೆ ಕಿಡಿ ಕನ್ನಡ ಚಳವಳಿಗಾರರ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆಯುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ. ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದಾಗ ತಮ್ಮ ಪಕ್ಷದ ಕಾರ್ಯಕರ್ತರ ಮೇಲಿನ ಕೇಸ್‌ಗಳನ್ನು ಸುಲಭವಾಗಿ ರದ್ದುಗೊಳಿಸುತ್ತವೆ. ಆದರೆ, ನಾಡಿನ ಹಿತಕ್ಕಾಗಿ ಹೋರಾಡುವವರು ಮಾತ್ರ ಕೋರ್ಟ್ ಕಚೇರಿ ಎಂದು ಅಲೆಯುತ್ತಿರುವುದು ಸರಿಯಲ್ಲ. ಈ ತಾರತಮ್ಯವನ್ನು ಕೂಡಲೇ ಸರಿಪಡಿಸಿ, ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಜಾಲತಾಣಗಳಲ್ಲಿ ತೇಜೋವಧೆ ಮಾಡುವವರ ವಿರುದ್ಧ ಕ್ರಮಕ್ಕೆ ಮನವಿ ಸೋಶಿಯಲ್ ಮೀಡಿಯಾದಲ್ಲಿ ಕನ್ನಡ ಹೋರಾಟಗಾರರು ಹಾಗೂ ಮಹಿಳೆಯರ ವಿರುದ್ಧ ಅಶ್ಲೀಲವಾಗಿ ನಿಂದಿಸುವ ವಿಕೃತ ಮನಸ್ಥಿತಿಯವರ ಬಗ್ಗೆ ನಾರಾಯಣಗೌಡರು ಗೃಹ ಸಚಿವರ ಗಮನಕ್ಕೆ ತಂದರು. ಕರವೇ ನಾಯಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಇಂತಹ ಸೈಬರ್ ದಾಳಿಗಳ ಹಿಂದೆ ದೊಡ್ಡ ಮಟ್ಟದ ಹಣಕಾಸಿನ ನೆರವಿನ ಸಂಶಯವಿದೆ. ಇಂತಹ ಜಾಲಗಳನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಒತ್ತಾಯಿಸಿದರು.

ಪರಮೇಶ್ವರ್ ಸಕಾರಾತ್ಮಕ ಭರವಸೆ ಮನವಿಗೆ ಸ್ಪಂದಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಕನ್ನಡ ಮತ್ತು ರೈತ ಹೋರಾಟಗಾರರ ಮೇಲಿನ ಕೇಸ್‌ಗಳನ್ನು ಹಿಂಪಡೆಯುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಶೀಘ್ರದಲ್ಲೇ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಹಾಗೂ ಬೆದರಿಕೆ ಹಾಕುವವರನ್ನು ನಿಯಂತ್ರಿಸಲು ಸರ್ಕಾರ ಶೀಘ್ರವೇ ಕಠಿಣ ನಿಯಮಾವಳಿಗಳನ್ನು ಜಾರಿಗೆ ತರಲಿದೆ ಎಂದು ತಿಳಿಸಿದರು.

ಇದನ್ನೂ ಓದಿ:  ಬಾಗಲಕೋಟೆ ಉಪಸಮರದಲ್ಲಿ ಕಾಂಗ್ರೆಸ್ ಗರ್ಜನೆ: ಚರಂತಿಮಠಗೆ ಸೋಲುಣಿಸಿ ‘ಕೈ’ ಹಿಡಿದ ಉಮೇಶ್ ಮೇಟಿ!

Leave a Reply

Your email address will not be published. Required fields are marked *