Census: ಜಾತಿಗಣತಿ ವಿಳಂಬ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ

Census congress accused central government for delaying

ನವದೆಹಲಿ: ದೇಶದಲ್ಲಿ ಜಾತಿಗಣತಿ ನಡೆಸುವ ಪ್ರಕ್ರಿಯೆಯನ್ನು (Census) ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಆರೋಪಿಸಿದೆ. ಜಾತಿಗಣತಿ ನಡೆಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿ ಇಂದಿಗೆ ಸರಿಯಾಗಿ ಒಂದು ವರ್ಷ ಪೂರೈಸಿದ್ದರೂ, ಈವರೆಗೂ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.

ಕಾಂಗ್ರೆಸ್‌ ಹೇಳಿದ್ದೇನು?

ಈ ಕುರಿತು ಸರ್ಕಾರದ ನಡೆಯನ್ನು ಪ್ರಶ್ನಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್, “ಕಳೆದ ವರ್ಷ ಏಪ್ರಿಲ್ 30ರಂದು ಪ್ರಧಾನಿಯವರು ಮುಂದಿನ ಜನಗಣತಿಯಲ್ಲಿ ಜಾತಿವಾರು ಅಂಕಿಅಂಶಗಳನ್ನು ಸಂಗ್ರಹಿಸುವುದಾಗಿ ಭರವಸೆ ನೀಡಿದ್ದರು. ಆದರೆ ಆ ಭರವಸೆ ನೀಡಿ ವರ್ಷ ಕಳೆದರೂ ಸರ್ಕಾರ ಯಾವುದೇ ಅಧಿಕೃತ ಕ್ರಮ ಕೈಗೊಂಡಿಲ್ಲ. ಗಣತಿಯ ರೂಪುರೇಷೆಗಳ ಬಗ್ಗೆ ವಿರೋಧ ಪಕ್ಷಗಳಾಗಲಿ ಅಥವಾ ವಿಷಯ ತಜ್ಞರ ಜೊತೆಯಾಗಲಿ ಯಾವುದೇ ಸಮಾಲೋಚನೆ ನಡೆಸದೆ ಕಾಲಹರಣ ಮಾಡಲಾಗುತ್ತಿದೆ” ಎಂದು ಕಿಡಿಕಾರಿದ್ದಾರೆ.

ಹಿಂದೆ ಇದೇ ವಿಚಾರವಾಗಿ ಬಿಜೆಪಿ ಸರ್ಕಾರ ತಳೆದಿದ್ದ ಭಿನ್ನ ನಿಲುವುಗಳನ್ನು ಜೈರಾಮ್ ರಮೇಶ್ ನೆನಪಿಸಿದ್ದಾರೆ. “2021ರಲ್ಲಿ ಗೃಹ ಸಚಿವಾಲಯವು ಜಾತಿ ಗಣತಿ ನಡೆಸದಿರಲು ನಿರ್ಧರಿಸಿತ್ತು. ಅಷ್ಟೇ ಅಲ್ಲದೆ, ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದ್ದ ಮೋದಿ ಸರ್ಕಾರ, ಜಾತಿ ಗಣತಿ ವಿಷಯದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಬಾರದು ಎಂದು ವಾದಿಸಿತ್ತು. ಈ ಹಿಂದೆ ಇದೇ ಬೇಡಿಕೆ ಇಟ್ಟಿದ್ದ ಕಾಂಗ್ರೆಸ್ ಪಕ್ಷವನ್ನು ‘ನಗರ ನಕ್ಸಲರು’ ಎಂದು ಪ್ರಧಾನಿ ಟೀಕಿಸಿದ್ದರು. ಈಗ ಅವರೇ ಘೋಷಣೆ ಮಾಡಿ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ” ಎಂದು ರಮೇಶ್ ಟೀಕಿಸಿದ್ದಾರೆ.

ಪತ್ರ ಬರೆದಿರುವ ಮಲ್ಲಿಕಾರ್ಜುನ್‌ ಖರ್ಗೆ

ಈಗಾಗಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಲವು ಬಾರಿ ಪತ್ರ ಬರೆದು ಜಾತಿಗಣತಿಯ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ. ಇತ್ತೀಚಿನ ವಿಶೇಷ ಅಧಿವೇಶನದಲ್ಲೂ ಸರ್ಕಾರದ ವಿಳಂಬ ನೀತಿ ಸ್ಪಷ್ಟವಾಗಿ ಗೋಚರಿಸಿದೆ. ದೇಶದ ಜನರಿಗೆ ಈ ಪ್ರಕ್ರಿಯೆಯ ಬಗ್ಗೆ ಸ್ಪಷ್ಟನೆ ನೀಡಬೇಕು ಮತ್ತು ಕೂಡಲೇ ಜಾತಿಗಣತಿಯ ರೂಪುರೇಷೆಗಳನ್ನು ಪ್ರಕಟಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಇದನ್ನೂ ಓದಿ: ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆ: ಭರ್ಜರಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ

Leave a Reply

Your email address will not be published. Required fields are marked *