Tejasvi Surya: ಸಂಸತ್ತಿನಲ್ಲಿ ತೇಜಸ್ವಿ ಸೂರ್ಯ ಭರ್ಜರಿ ಬ್ಯಾಟಿಂಗ್: ವಿರೋಧ ಪಕ್ಷಗಳದ್ದು ಮೊಸಳೆ ಕಣ್ಣೀರು ಎಂದು ವಾಗ್ದಾಳಿ

Tejasvi Surya taunts opposition regarding delimitation

ನವದೆಹಲಿ: ಲೋಕಸಭೆಯಲ್ಲಿ ಬುಧವಾರ ನಡೆದ ಕ್ಷೇತ್ರ ಪುನರ್ ವಿಂಗಡಣೆ (ಡೆಲಿಮಿಟೇಶನ್) ಕುರಿತಾದ ಚರ್ಚೆಯಲ್ಲಿ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ(Tejasvi Surya) ಅವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ವಾದವನ್ನ ಲೇವಡಿ ಮಾಡಿದ ಸೂರ್ಯ

ವಿರೋಧ ಪಕ್ಷಗಳ ತರ್ಕವನ್ನು ಕಟುವಾಗಿ ಪ್ರಶ್ನಿಸಿದ ಅವರು, ಸಂವಿಧಾನಬದ್ಧವಾಗಿ ನಡೆಯುತ್ತಿರುವ ಈ ಪ್ರಕ್ರಿಯೆಯನ್ನು ವಿರೋಧಿಸುತ್ತಿರುವುದರ ಹಿಂದೆ ಯಾವುದೇ ಸಕಾರಣವಿಲ್ಲ ಎಂದು ಟೀಕಿಸಿದರು. ಕಾಂಗ್ರೆಸ್‌ನ ವಾದವನ್ನು ಲೇವಡಿ ಮಾಡಿದ ಸೂರ್ಯ, ಅವರ ತರ್ಕದ ಪ್ರಕಾರ ಹೋದರೆ ಮುಖೇಶ್ ಅಂಬಾನಿಯಂತಹ ಶ್ರೀಮಂತರಿಗೆ ಲಕ್ಷಾಂತರ ಮತಗಳು ಹಾಗೂ ಸಾಮಾನ್ಯ ಜನರಿಗೆ ಕೇವಲ ಒಂದು ಮತ ಸಿಗುವಂತಾಗುತ್ತದೆ ಎಂದು ಚುಚ್ಚಿದರು. ಶ್ರೀಮಂತರಿಗೆ ಹೆಚ್ಚು ಮತಗಳು ಮತ್ತು ಬಡವರಿಗೆ ಮತಗಳೇ ಇರಬಾರದು ಎಂಬುದು ನಿಮ್ಮ ಉದ್ದೇಶವೇ ಎಂದು ಅವರು ವಿರೋಧ ಪಕ್ಷಗಳನ್ನು ನೇರವಾಗಿ ಪ್ರಶ್ನಿಸಿದರು.

ಕ್ಷೇತ್ರ ಪುನರ್ ವಿಂಗಡಣೆ ವಿಚಾರದಲ್ಲಿ ದಕ್ಷಿಣ ಭಾರತದ ಪ್ರಾದೇಶಿಕ ಪಕ್ಷಗಳು, ಅದರಲ್ಲೂ ಮುಖ್ಯವಾಗಿ ಡಿಎಂಕೆ ಪಕ್ಷವು ದಾರಿ ತಪ್ಪಿಸುವ ಪ್ರಚಾರ ಮಾಡುತ್ತಿದೆ ಎಂದು ಸೂರ್ಯ ಆರೋಪಿಸಿದರು. ಪ್ರತಿಪಕ್ಷಗಳು ಸುರಿಸುತ್ತಿರುವುದು ಕೇವಲ ‘ಮೊಸಳೆ ಕಣ್ಣೀರು’ ಎಂದು ಕರೆದ ಅವರು, ಸಂವಿಧಾನದ ವಿಧಿ 81 ಮತ್ತು 82ರ ಅಡಿಯಲ್ಲಿ ಕ್ಷೇತ್ರಗಳ ಮರುಹಂಚಿಕೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸಮರ್ಥಿಸಿಕೊಂಡರು. 1971ರ ಹಳೆಯ ಜನಗಣತಿಯ ಆಧಾರದ ಮೇಲೆ ಕ್ಷೇತ್ರಗಳನ್ನು ದಶಕಗಳಿಂದ ಸ್ಥಗಿತಗೊಳಿಸಿರುವುದರಿಂದ, ಇಂದಿನ ಜನಸಂಖ್ಯೆ ಮತ್ತು ರಾಜಕೀಯ ಪ್ರಾತಿನಿಧ್ಯದ ನಡುವೆ ಭಾರಿ ಅಂತರ ಸೃಷ್ಟಿಯಾಗಿದೆ. ಈ ಅಸಮತೋಲನವನ್ನು ಸರಿಪಡಿಸುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಅತ್ಯಗತ್ಯ ಎಂದು ಅವರು ವಿವರಿಸಿದರು.

ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಆಗಲ್ಲ

ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂಬ ಆತಂಕವನ್ನು ಸಂಪೂರ್ಣವಾಗಿ ತಳ್ಳಿಹಾಕಿದ ತೇಜಸ್ವಿ ಸೂರ್ಯ, ವಾಸ್ತವದಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಇದಕ್ಕಿಂತ ಉತ್ತಮವಾದ ಅವಕಾಶ ಸಿಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ಪ್ರತಿಪಕ್ಷಗಳು ಕೇವಲ ರಾಜಕೀಯ ಲಾಭಕ್ಕಾಗಿ ವ್ಯವಸ್ಥಿತವಾಗಿ ಸುಳ್ಳು ಸುದ್ದಿಗಳನ್ನು ಹರಡುತ್ತಿವೆ ಎಂದು ಅವರು ದೂರಿದರು. ಇದೇ ವೇಳೆ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಕೂಡ ಸರ್ಕಾರದ ನಿಲುವನ್ನು ಬೆಂಬಲಿಸಿದರು. ಹೊಸ ಜನಗಣತಿಯ ನಂತರ ನಡೆಯುವ ಈ ಮರುಹಂಚಿಕೆ ಪ್ರಕ್ರಿಯೆಯಿಂದ ಯಾವುದೇ ರಾಜ್ಯದ ಪ್ರಾತಿನಿಧ್ಯ ಕಡಿಮೆಯಾಗುವುದಿಲ್ಲ ಎಂದು ಅವರು ಸದನಕ್ಕೆ ಭರವಸೆ ನೀಡಿದರು.

ಲೋಕಸಭೆಯಲ್ಲಿ ಈ ವಿಧೇಯಕಗಳ ಮಂಡನೆ ವೇಳೆ ನಡೆದ ಮತದಾನದಲ್ಲಿ ಸರ್ಕಾರದ ಪರವಾಗಿ 251 ಮತ್ತು ವಿರುದ್ಧವಾಗಿ 185 ಮತಗಳು ಬಿದ್ದವು. ಈ ವಿಷಯದ ಕುರಿತು ಸುಮಾರು 15 ರಿಂದ 18 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಯಲಿದೆ ಎಂದು ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದು, ಶುಕ್ರವಾರ ಸಂಜೆ 4 ಗಂಟೆಗೆ ಅಂತಿಮ ಮತದಾನ ನಡೆಯಲಿದೆ. ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ ಲೋಕಸಭಾ ಸ್ಥಾನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದ್ದು, ಇದು ಮುಂದಿನ ದಿನಗಳಲ್ಲಿ ದೇಶದ ರಾಜಕಾರಣದಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಮುನ್ನುಡಿ ಬರೆಯಲಿದೆ.

ಇದನ್ನೂ ಓದಿ: ಮೀಸಲಾತಿ ವಿರೋಧಿಸುವವರನ್ನ ದೇಶದ ಮಹಿಳೆಯರು ಕ್ಷಮಿಸಲ್ಲ: ನರೇಂದ್ರ ಮೋದಿ

Leave a Reply

Your email address will not be published. Required fields are marked *