ನವದೆಹಲಿ: ಲೋಕಸಭೆಯ ಬಳಿಕ ರಾಜ್ಯಸಭೆಯೂ (Rajyasabha) ಅನುಮೋದನೆ ನೀಡುವ ಮೂಲಕ ಸಂಸತ್ತಿನಲ್ಲಿ ಧನ ವಿನಿಯೋಗ ವಿಧೇಯಕ 2026ಕ್ಕೆ ಅಧಿಕೃತವಾಗಿ ಅಂಗೀಕಾರ ದೊರೆತಿದೆ.
ವಿಧೇಯಕದ ವಿಶೇಷತೆ ಏನು?
ಈ ವಿಧೇಯಕವು 2025-26ರ ಹಣಕಾಸು ವರ್ಷದ ಸೇವೆಗಳಿಗಾಗಿ ದೇಶದ ಸಂಚಿತ ನಿಧಿಯಿಂದ ನಿರ್ದಿಷ್ಟ ಮೊತ್ತವನ್ನು ಪಡೆದುಕೊಳ್ಳಲು ಮತ್ತು ಬಳಸಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ರಾಜ್ಯಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರ್ಕಾರದ ಆರ್ಥಿಕ ನೀತಿಗಳ ಬಗ್ಗೆ ಮಾಹಿತಿ ನೀಡಿದರು.
ದೇಶದ ಆರ್ಥಿಕತೆಯಲ್ಲಿ ಬೆಳವಣಿಗೆ
ಸರ್ಕಾರದ ಬಜೆಟ್ ಪ್ರಕ್ರಿಯೆಯು ಪಾರದರ್ಶಕ ಮತ್ತು ವಾಸ್ತವಿಕವಾಗಿದೆ. ಭಾರತದ ಆರ್ಥಿಕತೆಯು ಅತ್ಯಂತ ಸದೃಢವಾದ ಸ್ಥಿತಿಯಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆರ್ಥಿಕ ಸ್ಥಿರೀಕರಣ ನಿಧಿಗಾಗಿ ಕೇಂದ್ರ ಸರ್ಕಾರವು 57,381 ಕೋಟಿ ರೂಪಾಯಿಗಳನ್ನು ನೀಡುತ್ತಿದೆ. ಕೇಂದ್ರ ಸರ್ಕಾರದ ಬಂಡವಾಳ ವೆಚ್ಚವು 2017-18ರಲ್ಲಿ 2.63 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ಅದು 2026-27ರ ವೇಳೆಗೆ 12.20 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಇದು ಸುಮಾರು 4.2 ಪಟ್ಟು ಹೆಚ್ಚಳವಾಗಿದ್ದು, ಇದರಿಂದಾಗಿ ದೇಶದ ಆರ್ಥಿಕ ಬೆಳವಣಿಗೆಯ ವೇಗವು ಸ್ಥಿರವಾಗಿ ಮುಂದುವರಿಯುತ್ತಿದೆ ಎಂದು ಹೇಳಿದರು. ‘ಆತ್ಮನಿರ್ಭರ ಭಾರತ’ ಯೋಜನೆಯಡಿ ಇಂಧನ ಕ್ಷೇತ್ರದಲ್ಲಿ ಸಾಧಿಸಿರುವ ಸ್ವಾವಲಂಬನೆಯು ದೇಶಕ್ಕೆ ದೊಡ್ಡ ಶಕ್ತಿಯಾಗಿ ಪರಿಣಮಿಸಿದೆ. ದೇಶೀಯವಾಗಿ ಎಲ್‌ಪಿಜಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿರುವುದು ಈಗ ಜನರಿಗೆ ವರದಾನವಾಗಿದೆ ಎಂದರು.
