ನವದೆಹಲಿ: ಮಧ್ಯಪ್ರಾಚ್ಯ ರಾಷ್ಟ್ರಗಳ (West Asia War) ಬಿಕ್ಕಟ್ಟಿನ ಬಗ್ಗೆ ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ನಾಗರಿಕ ವಿಮಾನಯಾನ ಕಾರ್ಯಾಚರಣೆಗಳ ಸುರಕ್ಷತೆ ಖಚಿತಪಡಿಸಿಕೊಳ್ಳಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ರಾಜ್ಯಸಭೆಗಿಂದು ತಿಳಿಸಿದ್ದಾರೆ.
ಸುರಕ್ಷತೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ
ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು, ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ವಿಮಾನಯಾನ ಸಂಸ್ಥೆಗಳೊಂದಿಗೆ ತಕ್ಷಣ ಸಂಪರ್ಕ ಸಾಧಿಸಲಾಗಿದೆ. ಶೇಕಡ 100 ರಷ್ಟು ಸುರಕ್ಷತೆ ಖಾತರಿಪಡಿಸಿದಾಗ ಮಾತ್ರ ವಿಮಾನಗಳು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ಅಗತ್ಯ ಸುತ್ತೋಲೆ ಹೊರಡಿಸಲಾಗಿದೆ ಎಂದು ಹೇಳಿದರು. ಪಶ್ಚಿಮ ಏಷ್ಯಾದ ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುವ ವಿಮಾನಗಳಿಗೆ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಲು ವಿಮಾನಯಾನ ನಿರ್ದೇಶನಾಲಯ, ವಿಮಾನಯಾನ ಸಂಸ್ಥೆಗಳೊಂದಿಗೆ ಹಲವು ಸಭೆಗಳನ್ನು ನಡೆಸಿದೆ. ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ವಿಶೇಷ ಪ್ರಯಾಣ ಸಲಹೆಗಳನ್ನು ನೀಡಿವೆ, ರದ್ದತಿ ಅಥವಾ ಬದಲಾವಣೆಗಳ ಸಂದರ್ಭದಲ್ಲಿ ಗೊಂದಲವನ್ನು ತಪ್ಪಿಸಲು ವಿಮಾನಗಳು ಮತ್ತು ಸಂಪರ್ಕಗಳ ಸ್ಥಿತಿಯನ್ನು ಪರಿಶೀಲಿಸುವಂತೆ ಕೇಳಿಕೊಂಡಿವೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಯಾಚರಣೆ ಮುಂದುವರೆಸಲಾಗಿದೆ
ಕಳೆದ ವಾರವಷ್ಟೇ ಸುಮಾರು 90 ಸಾವಿರ ಪ್ರಯಾಣಿಕರು ಭಾರತ ಮತ್ತು ಪಶ್ಚಿಮ ಏಷ್ಯಾದ ಸ್ಥಳಗಳ ನಡುವೆ ಪ್ರಯಾಣಿಸಿದ್ದಾರೆ. ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದರು. ಇದಕ್ಕೂ ಮುನ್ನ, ರಾಜ್ಯಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ಸಭಾಪತಿ ಸಿ.ಪಿ.ರಾಧಾಕೃಷ್ಣನ್ , ನ್ಯೂಜಿಲೆಂಡ್ ವಿರುದ್ಧ T 20 ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆ ಸಲ್ಲಿಸಿದರು. ಇದು ಭಾರತಕ್ಕೆ ತುಂಬಾ ಹರ್ಷದಾಯಕ ವಿಷಯವಾಗಿದೆ. ಪಂದ್ಯಾವಳಿಯಲ್ಲಿ, ತಂಡದ ಅತ್ಯುತ್ತಮ ಪ್ರದರ್ಶನವು ದೇಶಾದ್ಯಂತ ಲಕ್ಷಾಂತರ ಕ್ರಿಕೆಟ್ ಪ್ರಿಯರಿಗೆ ಅಪಾರ ಸಂತೋಷ ಮತ್ತು ಹೆಮ್ಮೆಯನ್ನು ತಂದಿದೆ ಎಂದು ಸಭಾಪತಿ ಹೇಳಿದರು
ಇದನ್ನೂ ಓದಿ: ದೆಹಲಿಯ 33 ಸಾವಿರದ 500 ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಮಾಡಿದ ಮೋದಿ
