ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಉಕ್ರೇನ್ ಯುದ್ಧದ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದು, ತನ್ನ ಗುರಿಗಳನ್ನು ಸಾಧಿಸಿದ ನಂತರವೇ ಕಾರ್ಯಾಚರಣೆಯನ್ನು ನಿಲ್ಲಿಸುತ್ತದೆ ಎಂದು ಹೇಳಿದ್ದಾರೆ.
ರಷ್ಯಾ ಯುದ್ಧವನ್ನ ಆರಂಭ ಮಾಡಿಲ್ಲ
ರಷ್ಯಾ ಉಕ್ರೇನ್ ಯುದ್ಧವನ್ನು ಪ್ರಾರಂಭಿಸಲಿಲ್ಲ , ಆದರೆ ಪಶ್ಚಿಮದ ಪ್ರಭಾವದಿಂದ ಉಕ್ರೇನ್ ತೆಗೆದುಕೊಂಡ ನಿರ್ಧಾರವೇ ರಷ್ಯಾವನ್ನು ಸಂಘರ್ಷಕ್ಕೆ ಎಳೆದಿದೆ, ಇದು ಸುಮಾರು ನಾಲ್ಕು ವರ್ಷಗಳಿಂದ ನಡೆಯುತ್ತಿದೆ ಎಂದು ಹೇಳಿದ್ದಾರೆ.
ನಮ್ಮ ವಿಶೇಷ ಮಿಲಿಟರಿ ಕಾರ್ಯಾಚರಣೆಯು ಯುದ್ಧದ ಆರಂಭವಲ್ಲ, ಬದಲಾಗಿ ಉಕ್ರೇನಿಯನ್ ರಾಷ್ಟ್ರೀಯವಾದಿಗಳನ್ನು ಬಳಸಿಕೊಂಡು ಪಶ್ಚಿಮ ದೇಶಗಳು ಹೊತ್ತಿಸಿದ ಯುದ್ಧವನ್ನು ಕೊನೆಗೊಳಿಸುವ ಪ್ರಯತ್ನವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದೆಲ್ಲವೂ ಒಂದೇ ವಿಷಯಕ್ಕೆ ಬರುತ್ತದೆ: ಒಂದೋ ನಾವು ಈ ಪ್ರದೇಶಗಳನ್ನು ಬಲವಂತವಾಗಿ ಹಿಂದಕ್ಕೆ ತೆಗೆದುಕೊಳ್ಳುತ್ತೇವೆ, ಅಥವಾ ಅಂತಿಮವಾಗಿ ಉಕ್ರೇನಿಯನ್ ಪಡೆಗಳು ಹಿಂದೆ ಸರಿಯುತ್ತವೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ರಷ್ಯಾದ ಹಿತಾಸಕ್ತಿ ಕಾಪಾಡಿಕೊಳ್ಳಲು ಯಾವಾಗಲೂ ಸಿದ್ದ
ಎರಡೂ ದೇಶಗಳ ನಡುವಿನ ವೈರತ್ವಗಳನ್ನು ಪುಟಿನ್ ಎತ್ತಿ ತೋರಿಸಿದ್ದು, ಹಲವಾರು ಪ್ರದೇಶಗಳಲ್ಲಿ ರಷ್ಯನ್ ಭಾಷೆಯನ್ನು ನಿಷೇಧಿಸುವ ಮೂಲಕ ಮತ್ತು ದೇವಾಲಯಗಳು, ಚರ್ಚ್‌ಗಳು ಇತ್ಯಾದಿಗಳಿಂದ ಜನರನ್ನು ದೂರ ಓಡಿಸುವ ಮೂಲಕ ಉಕ್ರೇನ್ ರಷ್ಯಾಗೆ ಹಾನಿ ಮಾಡಿದೆ. ಯಾವುದೇ ಬೆಲೆ ತೆತ್ತಾದರೂ ರಷ್ಯಾ ತನ್ನ ಜನರನ್ನ ಹಾಗೂ ತನಗೆ ಬೇಕಾಗಿರುವುದನ್ನ ಕಾಪಾಡಿಕೊಳ್ಳಲು ಪ್ರಯತ್ನ ಮಾಡಲು ಸಿದ್ಧವಾಗಿದೆ ಎಂದು ಪುಟಿನ್ ತಿಳಿಸಿದ್ದಾರೆ.
ವ್ಲಾಡಿಮಿರ್ ಪುಟಿನ್ ಉಕ್ರೇನ್ ಯುದ್ಧಕ್ಕೆ ಕಾರಣವಾದ ಘಟನೆಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ. ಪಶ್ಚಿಮ ದೇಶಗಳು ಉಕ್ರೇನ್ ಅನ್ನು ಬೆಂಬಲಿಸಿವೆ ಮತ್ತು ದಂಗೆಯನ್ನು ಆಯೋಜಿಸುವ ಮೂಲಕ ಎಲ್ಲಾ ಸಮಸ್ಯೆಗೆ ಕಾರಣವಾಗಿದೆ ಎನ್ನುವ ಆರೋಪಗಳಿದೆ. ಆದರೆ ಈ ವಿಚಾರವಾಗಿ ಅವರು ಯಾವುದೇ ಮಾತನ್ನೂ ಸಹ ಆಡಿಲ್ಲ.
