Supreme Court: ಜಾತಿ ಗಣತಿ ತಡೆಗೆ ಸುಪ್ರೀಂ ಕೋರ್ಟ್ ನಿರಾಕರಣೆ: ಅರ್ಜಿದಾರರ ಭಾಷೆಗೆ ಸಿಜೆಐ ಗರಂ

ನವದೆಹಲಿ: ದೇಶದಲ್ಲಿ ಮುಂಬರುವ ಜಾತಿ ಗಣತಿಯನ್ನು ನಿಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ. ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯವು, ಅರ್ಜಿಯಲ್ಲಿ ಬಳಸಿರುವ ಭಾಷೆಯ ಬಗ್ಗೆ ಅರ್ಜಿದಾರರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.‌

ಅರ್ಜಿದಾರರನ್ನ ತರಾಟೆಗೆ ತೆಗೆದುಕೊಂಡ ಕೋರ್ಟ್

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಾಂಚೋಲಿ ಅವರಿದ್ದ ಪೀಠದ ಮುಂದೆ ಈ ವಿಚಾರದ ಸುದೀರ್ಘ ಚರ್ಚೆ ನಡೆಯಿತು. ವಿಚಾರಣೆ ವೇಳೆ ಅರ್ಜಿಯಲ್ಲಿನ ಭಾಷೆಯನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಅರ್ಜಿಯಲ್ಲಿ ಇಂತಹ ಅಸಭ್ಯ ಭಾಷೆಯನ್ನು ಬಳಸಲು ಎಲ್ಲಿಂದ ಕಲಿಯುತ್ತೀರಿ? ಇಂತಹ ಭಾಷೆಯನ್ನೊಳಗೊಂಡ ಅರ್ಜಿಯನ್ನು ಸಿದ್ಧಪಡಿಸಿದ್ದು ಯಾರು?” ಎಂದು ಅರ್ಜಿದಾರರನ್ನು ಖಾರವಾಗಿ ಪ್ರಶ್ನಿಸಿದರು.

ಜಾತಿ ಗಣತಿ ತಡೆಯುವ ಬೇಡಿಕೆಯ ಜೊತೆಗೆ, ಕೇವಲ ಒಂದು ಮಗು ಇರುವ ಕುಟುಂಬಗಳಿಗೆ ಸರ್ಕಾರವು ಆರ್ಥಿಕ ಪ್ರೋತ್ಸಾಹ ನೀಡುವ ನೀತಿಯನ್ನು ರೂಪಿಸಬೇಕು ಎಂಬ ಪ್ರಸ್ತಾವನೆಯನ್ನೂ ಈ ಅರ್ಜಿಯಲ್ಲಿ ಸಲ್ಲಿಸಲಾಗಿತ್ತು. ಆದರೆ ನ್ಯಾಯಾಲಯವು ಇದನ್ನು ಮಾನ್ಯ ಮಾಡದೆ ಅರ್ಜಿಯನ್ನು ವಜಾಗೊಳಿಸಿದೆ. 2027ರಲ್ಲಿ ನಡೆಯಲಿರುವ ಜನಗಣತಿಯು ಭಾರತದ ಮೊದಲ ಸಂಪೂರ್ಣ ಡಿಜಿಟಲ್ ಸಮೀಕ್ಷೆಯಾಗಲಿದ್ದು, 1931ರ ನಂತರ ದೇಶದಲ್ಲಿ ನಡೆಯುತ್ತಿರುವ ಮೊದಲ ಸಮಗ್ರ ಜಾತಿ ಗಣತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸದ್ಯ ಸುಪ್ರೀಂ ಕೋರ್ಟ್ ಈ ಪ್ರಕ್ರಿಯೆಗೆ ಅಡ್ಡಿಪಡಿಸಲು ನಿರಾಕರಿಸಿರುವ ಕಾರಣ ಗಣತಿ ಕಾರ್ಯಕ್ಕೆ ಹಾದಿ ಸುಗಮವಾಗಿದೆ.

ಇದನ್ನೂ ಓದಿ:  ವಾಟ್ಸಾಪ್‌ ನಂಬಲು ಅರ್ಹವಲ್ಲ ಎಂದ ಎಲಾನ್‌ ಮಸ್ಕ್

Leave a Reply

Your email address will not be published. Required fields are marked *