ಮುಂಬೈ: 2047ರ ವಿಕಸಿತ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಸಾಲಿನ ಬಜೆಟ್ ರೂಪಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ (Piyush Goyal) ಹೇಳಿದ್ದಾರೆ.
ಬಜೆಟ್‌ನಲ್ಲಿ ಉತ್ಪಾದನಾ ವಲಯಕ್ಕೆ ಒತ್ತು
ಮುಂಬೈನಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಸಚಿವರು, ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಭಾರತದ ಸ್ಥಾನವನ್ನು ಬಲಪಡಿಸಲು ಬಜೆಟ್, ಉತ್ಪಾದನಾ ವಲಯಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂದರು. ಮುಕ್ತ ವ್ಯಾಪಾರ ಒಪ್ಪಂದ ಸೇರಿದಂತೆ ಇತರ ಎಲ್ಲಾ ಕ್ರಮಗಳು ಮುನ್ನಡೆಸುತ್ತಿರುವ ಅವಕಾಶಗಳನ್ನು ಗ್ರಹಿಸಲು ಈ ಬಜೆಟ್ ಭಾರತವನ್ನು ಸಿದ್ಧಪಡಿಸುತ್ತದೆ. ಸ್ಟಾರ್ಟ್ ಅಪ್ ಇಂಡಿಯಾ, ಯುವಕರಿಗೆ ಉದ್ಯೋಗ, ಜವಳಿ ಉದ್ಯಮಕ್ಕೆ ಉತ್ತೇಜನ, ಮಹಿಳೆಯರ ಏಳಿಗೆ ಸೇರಿದಂತೆ ಈ ಬಜೆಟ್ 140 ಭಾರತೀಯರ ಆಕಾಂಕ್ಷೆಗಳಿಗೆ ರೆಕ್ಕೆಗಳನ್ನು ನೀಡುತ್ತಿದೆ ಎಂದು ಸಚಿವರು ಹೇಳಿದರು.
ಏಳು ಹೈಸ್ಪೀಡ್ ರೈಲು ಕಾರಿಡಾರ್ ನಿರ್ಮಾಣ
ಈ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಡಿರುವ ದೊಡ್ಡ ಘೋಷಣೆಗಳಲ್ಲಿ ನಗರಗಳನ್ನು ಸಂಪರ್ಕಿಸಲು ಮತ್ತು ಅವುಗಳನ್ನು ಬೆಳವಣಿಗೆಯ ಎಂಜಿನ್‌ಗಳಾಗಿ ಪರಿವರ್ತಿಸಲು ಏಳು ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ನಿರ್ಮಿಸುವುದು ಅತ್ಯಂತ ಪ್ರಮುಖವಾಗಿದೆ. ಇದೊಂದು ಅದ್ಭುತ ಕಲ್ಪನೆಯಾಗಿದ್ದು, ದೇಶಾದ್ಯಂತ ಹೆಚ್ಚಿನ ಜನರು ಈ ಹೈ-ಸ್ಪೀಡ್ ಕಾರಿಡಾರ್‌ಗಳಿಂದ ಪ್ರಯೋಜನ ಪಡೆಯಲಿದ್ದಾರೆ ಎಂದರು. ಎಲ್ಲರೂ ಗುಲಾಮಗಿರಿಯ ಮನಸ್ಥಿತಿಯಿಂದ ಹೊರಬಂದು, ರಾಷ್ಟ್ರವೇ ಪ್ರಥಮ ಎನ್ನುವ ಮನೋಭಾವದಿಂದ ನಮ್ಮ ಕರ್ತವ್ಯಗಳನ್ನು ಪೂರೈಸುವ ಉದ್ದೇಶದಿಂದ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು, ಸೇವಾ ತೀರ್ಥವನ್ನು ಉದ್ಘಾಟಿಸಿರುವುದಾಗಿ ಇದೇ ವೇಳೆ ಸಚಿವ ಪಿಯೂಷ್ ಗೋಯಲ್ ತಿಳಿಸಿದರು.
