ನವದೆಹಲಿ: ಪಾಕಿಸ್ತಾನ ಮತ್ತು ಅದರ ಟಿ20 ವಿಶ್ವಕಪ್ (T20 World Cup) ನಾಟಕ ಕೊನೆಯಾಗುತ್ತಿಲ್ಲ. ಭಾನುವಾರ, ಪಾಕಿಸ್ತಾನ ಸರ್ಕಾರ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ 2026 ರ ಟಿ20 ವಿಶ್ವಕಪ್ನಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿತ್ತು, ಆದರೆ ನಂತರ ಮತ್ತೆ ನಾಟಕ ಆರಂಭ ಮಾಡಿದೆ.
ಭಾರತದ ಜೊತೆ ಆಡಲ್ಲ ಎಂದ ಪಾಕ್
ಫೆಬ್ರವರಿ 15 ರಂದು ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಘೋಷಣೆ ಮಾಡಿದೆ. ಈಗ, ಭಾರತದ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವ ಬಗ್ಗೆ ಪಾಕಿಸ್ತಾನ ಐಸಿಸಿಗೆ ಯಾವುದೇ ಇಮೇಲ್ ಕಳುಹಿಸುವುದಿಲ್ಲ ಎನ್ನಲಾಗಿದೆ. ಐಸಿಸಿ ಪಾಕಿಸ್ತಾನದ ಅಧಿಕೃತ ಮೇಲ್ಗಾಗಿ ಕಾಯುತ್ತಿದ್ದು, ಈ ಮೂಲಕ ಮುಂದಿನ ಕ್ರಮವನ್ನ ತೆಗೆದುಕೊಳ್ಳಬಹುದಾಗಿದೆ. ಆದರೆ ಪಾಕಿಸ್ತಾನ ಮಾತ್ರ ತನ್ನ ನಾಟಕವನ್ನ ಮುಂದುವರೆಸಲು ನಿರ್ಧಾರ ಮಾಡಿದೆ.\
ಆರ್ಥಿಕವಾಗಿ ಪಾಕಿಸ್ತಾನಕ್ಕೆ ಹೊಡೆತ
ಫೆಬ್ರವರಿ 15 ರಂದು ಕೊಲಂಬೊದಲ್ಲಿ ಭಾರತ ವಿರುದ್ಧ ನಡೆಯಲಿರುವ ಟಿ20 ವಿಶ್ವಕಪ್ ಗ್ರೂಪ್ ಲೀಗ್ ಪಂದ್ಯವನ್ನು ಬಹಿಷ್ಕರಿಸುವಂತೆ ಪಾಕಿಸ್ತಾನ ಸರ್ಕಾರ ತನ್ನ ರಾಷ್ಟ್ರೀಯ ತಂಡಕ್ಕೆ ಸೂಚನೆ ನೀಡಿರುವುದನ್ನು ಐಸಿಸಿ ಸಹ ಗಮನಿಸಿದೆ. ಐಸಿಸಿ ತನ್ನ ಕಾರ್ಯಕ್ರಮಗಳು “ಕ್ರೀಡಾ ಸಮಗ್ರತೆ, ಸ್ಪರ್ಧಾತ್ಮಕತೆ, ಸ್ಥಿರತೆ ಮತ್ತು ನ್ಯಾಯಸಮ್ಮತತೆ”ಯ ಮೇಲೆ ಸ್ಥಾಪಿತವಾಗಿವೆ ಎಂದು ಸಂಸ್ಥೆ ಹೇಳಿದೆ. ಹಾಗೆಯೇ, ಪಾಕಿಸ್ತಾನ ಬಹಿಷ್ಕರಿಸುವ ನಿರ್ಧಾರ ಮಾಡಿದರೆ ಆರ್ಥಿಕವಾಗಿ ಅದಕ್ಕೆ ದೊಡ್ಡ ಹೊಡೆತ ಎನ್ನಬಹುದು.
ಐಸಿಸಿ ಪುರುಷರ ಟಿ20 ವಿಶ್ವಕಪ್ ಅನ್ನು ಯಶಸ್ವಿಯಾಗಿ ನಡೆಸುವುದು ಐಸಿಸಿಯ ಆದ್ಯತೆಯಾಗಿದೆ, ಇದು ಪಿಸಿಬಿ ಸೇರಿದಂತೆ ಅದರ ಎಲ್ಲಾ ಸದಸ್ಯರ ಜವಾಬ್ದಾರಿಯೂ ಆಗಿರಬೇಕು ಎಂದು ಐಸಿಸಿ ಹೇಳಿದೆ.
