ನವದೆಹಲಿ: ಟೀ20 ವಿಶ್ವಕಪ್ ಪಂದ್ಯಗಳನ್ನ ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಮಾಡಿದ್ದ ಮನವಿಯನ್ನ ಐಸಿಸಿ ತಿರಸ್ಕರಿಸಿದ ಬೆನ್ನಲ್ಲೆ ಈ ವಿಚಾರವಾಗಿ ಪಾಕಿಸ್ತಾನ (Pakistan) ಸಹ ಪಂದ್ಯಗಳನ್ನ ಆಡದಿರಲು ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ.
ಭಾರತದ ವಿರುದ್ಧ ಆಡದಿರಲು ಯೋಚನೆ
ಮಾಹಿತಿಗಳ ಪ್ರಕಾರ,ಫೆಬ್ರವರಿ 15 ರಂದು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿರುವ ಭಾರತದ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ಭಾಗವಹಿಸದಿರಲು ಪಾಕಿಸ್ತಾನ ಯೋಚಿಸುತ್ತಿದೆ ಎನ್ನಲಾಗಿದೆ. ಪಾಕಿಸ್ತಾನದ ಸುದ್ದಿ ಸಂಸ್ಥೆ ಜಿಯೋ ನ್ಯೂಸ್ ವರದಿ ಮಾಡಿರುವಂತೆ, ಪಾಕಿಸ್ತಾನ ತನ್ನ ಮುಂದೆ ಇರುವ ಆಯ್ಕೆಗಳ ಬಗ್ಗೆ ಆಲೋಚನೆ ಮಾಡುತ್ತಿದೆ. ಮುಖ್ಯವಾಗಿ ಕೇವಲ ಭಾರತದ ಜೊತೆ ಮಾತ್ರ ಆಡದಿರಲು ಹಾಗೂ ಪೂರ್ತಿ ಪಂದ್ಯಾವಳಿಯಿಂದ ಹಿಂದೆ ಸರಿಯುವ ಆಯ್ಕೆಗಳ ಬಗ್ಗೆ ಚಿಂತನೆ ಮಾಡುತ್ತಿದೆ.
ಪಾಕಿಸ್ತಾನ ಪಂದ್ಯದಿಂದ ಹಿಂದೆ ಹರಿದರೆ ಏನಾಗುತ್ತೆ?
ವರದಿಯ ಪ್ರಕಾರ, ಪಾಕಿಸ್ತಾನ ಪಂದ್ಯವನ್ನು ಬಹಿಷ್ಕರಿಸಿದರೆ, ಭಾರತ ತಂಡಕ್ಕೆ ಎರಡು ಅಂಕಗಳನ್ನು ಹಸ್ತಾಂತರಿಸುವುದರೊಂದಿಗೆ ಪಂದ್ಯವು ಈಗಿರುವಂತೆ ರದ್ದಾಗುತ್ತದೆ. ಆದರೆ ಪಾಕಿಸ್ತಾನ ಆಡದಿರಲು ನಿರ್ಧಾರ ಮಾಡಿದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಗಮನಾರ್ಹ ಆರ್ಥಿಕ ನಷ್ಟವನ್ನ ಉಂಟುಮಾಡಬಹುದು. ಈ ವಿಚಾರವಾಗಿ ಪಾಕಿಸ್ತಾನಕ್ಕೆ ಐಸಿಸಿ ಈಗಾಗಲೇ ಎಚ್ಚರಿಕೆ ನೀಡಿದೆ ಎನ್ನಲಾಗಿದೆ. ಮುಖ್ಯವಾಗಿ ವಿಶ್ವ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಸ್ಥಾನಮಾನಕ್ಕೂ ಹಾನಿ ಆಗಬಹುದು.
ಸದ್ಯ ಈ ವಿಚಾರವಾಗಿ ಪಿಸಿಬಿ ಅಧ್ಯಕ್ಷ ಮೋಶಿನ್ ನಖ್ವಿ ಪ್ರಧಾನಿ ಶೆಹಬಾಜ್ ಷರೀಫ್ ಸಭೆ ಮಾಡುತ್ತಿದ್ದು, ಈ ಸಭೆಯಲ್ಲಿ ನಡೆಯುವ ಚರ್ಚೆಯ ಆಧಾರದ ಮೇಲೆ ಎಲ್ಲಾ ನಿರ್ಧಾರಗಳು ಆಗುತ್ತದೆ ಎನ್ನಲಾಗಿದೆ.
ಬಾಂಗ್ಲಾ ನಡೆಯನ್ನ ಬೂಟಾಟಿಕೆ ಎಂದ ಐಸಿಸಿ, ಸ್ಕಾಟ್ಲೆಂಡ್‌ಗೆ ಆಡಲು ಅವಕಾಶ
ಭದ್ರತೆಯ ದೃಷ್ಟಿಯಿಂದ ಭಾರತದಲ್ಲಿ ತನ್ನ ತಂಡವನ್ನ ಬಾಂಗ್ಲಾ ಕ್ರಿಕೆಟ್ ಮಂಡಳಿ ಆಡಿಸಲು ನಿರಾಕರಿಸಿ, ಬೇರೆ ಸ್ಥಳ ನಿಗದಿ ಮಾಡುವಂತೆ ಮಾಡಿರುವ ಮನವಿಯನ್ನ ಐಸಿಸಿ (ICC) ನಿರಾಕರಿಸಿದೆ. ಮಾಹಿತಿಗಳ ಪ್ರಕಾರ, ಆಂತರಿಕ ಮತ್ತು ಬಾಹ್ಯ ತಜ್ಞರೊಂದಿಗೆ ಭದ್ರತೆಯ ವಿಚಾರವಾಗಿ ಐಸಿಸಿ ಅನೇಕ ಪರಿಶೀಲನೆಗಳನ್ನ ಮಾಡಿದ್ದು, ಬಾಂಗ್ಲಾದೇಶ ಆಟಗಾರರಿಗೆ ಯಾವುದೇ ಭದ್ರತಾ ಸಮಸ್ಯೆ ಆಗುವುದಿಲ್ಲ ಎಂದು ತೀರ್ಮಾನ ಮಾಡಿ ಬಾಂಗ್ಲಾ ಕ್ರಿಕೆಟ್ ಮಂಡಳಿಯ ಮನವಿಯನ್ನ ನಿರಾಕರಣೆ ಮಾಡಿದೆ. ಅದರ ಜೊತೆಗೆ ಕಳೆದ ವರ್ಷ ಅತಿಯಾದ ಭದ್ರತಾ ಸಮಸ್ಯೆ ಇದ್ದರೂ ಸಹ ಚಾಂಪಿಯನ್ಸ್ ಟ್ರೋಫಿಗಾಗಿ ಬಾಂಗ್ಲಾದೇಶ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು ಎಂಬುದನ್ನ ಐಸಿಸಿ ಗಮನಿಸಿದ್ದು, ಬಾಂಗ್ಲಾದ ಈ ನಡೆಯನ್ನ ಬೂಟಾಟಿಕೆ ಎಂದು ಟೀಕೆ ಮಾಡಿದೆ.
ಇದನ್ನೂ ಓದಿ: ಬಾಂಗ್ಲಾ ನಡೆಯನ್ನ ಬೂಟಾಟಿಕೆ ಎಂದ ಐಸಿಸಿ, ಸ್ಕಾಟ್ಲೆಂಡ್‌ಗೆ ಆಡಲು ಅವಕಾಶ
