Narendra Modi: ಭಾರತ – ಫ್ರಾನ್ಸ್‌ ನಡುವೆ ಹೊಸ ಯುಗ ಆರಂಭ: ನರೇಂದ್ರ ಮೋದಿ

Narendra Modi on France and india relationship

ನವದೆಹಲಿ: ಭಾರತ ಮತ್ತು ಫ್ರಾನ್ಸ್‌ ನಡುವೆ ಹೊಸ ಯುಗ ಆರಂಭವಾಗಿದೆ.  ನಾವು ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಜನರ ಪಾಲುದಾರಿಕೆಯಾಗಿ ಪರಿವರ್ತಿಸುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

ಭಾರತದಲ್ಲಿ ಫ್ರಾನ್ಸ್ ಅಧ್ಯಕ್ಷ  ಎಮ್ಯಾನುಯೆಲ್

ಭಾರತಕ್ಕೆ ಮೂರು ದಿನಗಳ ಭೇಟಿಯಾಗಿ ಆಗಮಿಸಿರುವ  ಫ್ರಾನ್ಸ್ ಅಧ್ಯಕ್ಷ  ಎಮ್ಯಾನುಯೆಲ್ ಮ್ಯಾಕ್ರನ್ ನೇತೃತ್ವದ ನಿಯೋಗದೊಂದಿಗೆ ನಡೆದ ಪ್ರತಿನಿಧಿ ಮಂಡಲದ ಸಭೆಯ ಬಳಿಕ ಜಂಟಿ  ಸುದ್ದಿಗೋಷ್ಠಿಯಲ್ಲಿ  ಪ್ರಧಾನಿ, ಉಭಯ ದೇಶಗಳ ನಡುವೆ ಈ ಭೇಟಿ ಐತಿಹಾಸಿಕವಾಗಿದೆ ಎಂದರು.

ರಕ್ಷಣೆ, ಶುದ್ಧ ಇಂಧನ, ಬಾಹ್ಯಾಕಾಶ, ಉದಯೋನ್ಮುಖ ತಂತ್ರಜ್ಞಾನ ಸೇರಿದಂತೆ ಹಲವು  ಪ್ರಮುಖ  ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ತೆರೆದುಕೊಂಡಿವೆ.  ಸ್ಟಾರ್ಟ್‌ಅಪ್‌ಗಳು ಮತ್ತು MSME ಗಳ ನಡುವೆ ಬಲವಾದ ಜಾಲಗಳನ್ನು ನಿರ್ಮಿಸಲು ಎರಡೂ ದೇಶಗಳು ಬದ್ಧವಾಗಿವೆ ಎಂದು ಪ್ರಧಾನಿ ಹೇಳಿದರು.

 ಇಂದು ನಾವು ನಿರ್ಣಾಯಕ ಖನಿಜಗಳು, ಜೈವಿಕ ತಂತ್ರಜ್ಞಾನ ಮತ್ತು ಸುಧಾರಿತ ಸಾಮಗ್ರಿಗಳಲ್ಲಿ  ಸಹಕಾರವನ್ನು ಬಲಪಡಿಸುತ್ತಿದ್ದೇವೆ. ಇಂಡೋ-ಫ್ರೆಂಚ್ ಆರೋಗ್ಯ ಕೇಂದ್ರ, ಡಿಜಿಟಲ್ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ ಹಾಗೂ ಬಾಹ್ಯಾಕಾಶ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದ ಪ್ರಧಾನಿ, ಇವು ಕೇವಲ ಸಂಸ್ಥೆಗಳಲ್ಲ,  ಯುವಕರ ಭವಿಷ್ಯವನ್ನು ನಿರ್ಮಿಸುವ ವೇದಿಕೆಗಳಾಗಿವೆ ಎಂದರು.

ಭಾರತ ಮತ್ತು ಫ್ರಾನ್ಸ್ ಪಾಲುದಾರಿಕೆ ಒಂದು ಶಕ್ತಿ

ಜಗತ್ತು ಇಂದು ಅನಿಶ್ಚಿತತೆಯನ್ನು  ಎದುರಿಸುತ್ತಿದೆ. ಈ ಪರಿಸರದಲ್ಲಿ, ಭಾರತ ಮತ್ತು ಫ್ರಾನ್ಸ್ ಪಾಲುದಾರಿಕೆಯು ಜಾಗತಿಕ ಸ್ಥಿರತೆಗೆ ಒಂದು ಶಕ್ತಿಯಾಗಿದೆ. ಎರಡೂ ದೇಶಗಳು ಸೇರಿ ವಿಶ್ವಾಸಾರ್ಹ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಪ್ರಧಾನಿ ಹೇಳಿದರು.

ಉಭಯ ದೇಶಗಳು ಜಂಟಿಯಾಗಿ, ಎವರೆಸ್ಟ್‌ ಶಿಖರದ ಎತ್ತರಕ್ಕೆ ಏರಬಲ್ಲ ಹೆಲಿಕಾಪ್ಟರ್‌ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಇದು ಭಾರತದಲ್ಲಿಯೇ ತಯಾರಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದ ಪ್ರಧಾನಿ, ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರವನ್ನು ಫ್ರಾನ್ಸ್‌ನಲ್ಲಿ ಆಂಭಿಸುವುದಾಗಿ  ಘೋಷಿಸಿದರು. 

  ಭಾರತ ಮತ್ತು ಯುರೋಪ್‌ ಒಕ್ಕೂಟದ ನಡುವೆ ನಡೆದಿರುವ ಐತಿಹಾಸಿಕ ವ್ಯಾಪಾರ ಒಪ್ಪಂದದಿಂದಾಗಿ  ಫ್ರಾನ್ಸ್ ಜೊತೆಗಿನ ಭಾರತದ ಸಂಬಂಧ ಕೂಡ ಇನ್ನಷ್ಟು ಆಳವಾಗಿದೆ. ವ್ಯಾಪಾರ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಫ್ರಾನ್ಸ್ ಅಧ್ಯಕ್ಷ  ಎಮ್ಯಾನುಯೆಲ್ ಮ್ಯಾಕ್ರನ್,  ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಸಂಬಂಧವು  ಗಮನಾರ್ಹ ಮತ್ತು ವಿಶಿಷ್ಟವಾಗಿದೆ. ಈ ಸಂಬಂಧವು ನಂಬಿಕೆ, ಮುಕ್ತತೆ ಮತ್ತು ಮಹತ್ವಾಕಾಂಕ್ಷೆಯದ್ದಾಗಿದೆ ಎಂದರು.ಈ ಪಾಲುದಾರಿಕೆಯನ್ನು ವಿಶೇಷ ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಲು ನಾವು ನಿರ್ಧರಿಸಿದ್ದೇವೆ, ಅದಕ್ಕೆ ಹೊಸ ಸ್ಥಾನಮಾನವನ್ನು ನೀಡಲಾಗುವುದು ಎಂದರು. ಪ್ರತಿ ವರ್ಷ, ವಿಭಿನ್ನ ವಿಷಯಗಳಲ್ಲಿ ಕೆಲಸ ಮಾಡುವ ಮೂಲಕ, ಎರಡೂ ದೇಶಗಳು ಅನೇಕ ಹೊಸ ಮಾರ್ಗಗಳನ್ನು ರೂಪಿಸಿದ್ದು,  ಭಾರತ ಮತ್ತು ಫ್ರಾನ್ಸ್    ಜಂಟಿಯಾಗಿ AI ಸೇರಿದಂತೆ ಅಂತರರಾಷ್ಟ್ರೀಯ ಸೌರ ಕ್ಷೇತ್ರದಲ್ಲಿ  ಕಳೆದ ಎಂಟು ವರ್ಷಗಳಲ್ಲಿ  ಹಲವಾರು ಉಪಕ್ರಮಗಳನ್ನು ಒಟ್ಟಿಗೆ ತೆಗೆದುಕೊಂಡಿರುವುದಾಗಿ   ಫ್ರಾನ್ಸ್ ಅಧ್ಯಕ್ಷರು  ಹೇಳಿದರು. ಇದಕ್ಕೂ ಮುನ್ನ,  ಫ್ರಾನ್ಸ್ ಅಧ್ಯಕ್ಷರು, 2008 ರಲ್ಲಿ ಮುಂಬೈನ ತಾಜ್‌ ಹೋಟೆಲ್‌ನಲ್ಲಿ ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಇದನ್ನೂ ಓದಿ: ಎಐ ಇಂಪ್ಯಾಕ್ಟ್ ಶೃಂಗಸಭೆ – 2026ಗೆ ಚಾಲನೆ ನೀಡಿದ ಮೋದಿ

Leave a Reply

Your email address will not be published. Required fields are marked *