ಕೊಪ್ಪಳ: ಜಿಲ್ಲೆಯಲ್ಲಿ ನಡೆದ ವಿದೇಶಿ ಮಹಿಳೆಯ ಮೇಲಿನ ಅತ್ಯಾ*ಚಾರ ಮತ್ತು ಕೊಲೆ ಪ್ರಕರಣವನ್ನು ಸಣ್ಣ ಘಟನೆ ಎಂದು ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್ (Rajashekar Hitnal) ಅವರು ಕರೆದಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.
ಅಕ್ರೋಶಕ್ಕೆ ಕಾರಣವಾದ ಸಂಸದರ ಹೇಳಿಕೆ
ಕಳೆದ ವರ್ಷ ಗಂಗಾವತಿ ತಾಲೂಕಿನ ಸಾಣಾಪೂರ ಸಮೀಪದಲ್ಲಿ ನಡೆದಿದ್ದ ವಿದೇಶಿ ಮಹಿಳೆ ಅತ್ಯಾ*ಚಾರ ಹಾಗೂ ಕೊಲೆ ಪ್ರಕರಣವನ್ನ ಸಂಸದರೊಬ್ಬರು ಈ ರೀತಿ ಲಘುವಾಗಿ ಮಾತನಾಡಿದ್ದು ಜನರ ಅಕ್ರೋಶಕ್ಕೆ ಕಾರಣವಾಗಿದ್ದು, ಈ ರೀತಿ ಮಾತನಾಡಿದ್ದು ಎಷ್ಟು ಸರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಎರಡು ಬಾರಿ ಹೇಳಿದ ಸಂಸದ
ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ (ಬೆಂಗಳೂರು ಘಟಕ) ಹಾಗೂ ಜಿಲ್ಲಾ ಪ್ರವಾಸೋದ್ಯಮ ಸಮಿತಿ, ಕೊಪ್ಪಳ ಸಹಯೋಗದಲ್ಲಿ ಆಯೋಜನೆ ಮಾಡಿದ್ದ ಪ್ರವಾಸೋದ್ಯಮ ಅನ್ವೇಷಣೆ ಕಾರ್ಯಕ್ರಮದಲ್ಲಿ ಸಂಸದ ಹಿಟ್ನಾಳ ಅವರು ಈ ಮಾತುಗಳನ್ನ ಆಡಿದ್ದು, ಎರಡು ಬಾರಿ ಸಣ್ಣ ಘಟನೆ ಎಂದು ಉಲ್ಲೇಖ ಮಾಡಿದ್ದಾರೆ. ಹೌದು, ಈ ಕಾರ್ಯಕ್ರಮದಲ್ಲಿ ಮಾತನಾಡುವಾಗ ನಮ್ಮ ಜಿಲ್ಲೆಯಲ್ಲಿ ಒಂದು ಸಣ್ಣ ಘಟನೆ ನಡೆದಿದೆ. ರೇ*ಪ್ ಮತ್ತು ಮರ್ಡರ್ ಆಯಿತು, ಅದು ಸಣ್ಣ ಘಟನೆ ಎಂದಿದ್ದಾರೆ. ಇದು ಕಾರ್ಯಕ್ರಮದಲ್ಲಿ ಇದ್ದವರಿಗೆ ಸಹ ಇರುಸುಮುರಿಸು ಉಂಟುಮಾಡಿತ್ತು.
ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಅದಕ್ಕೆ ಸ್ಪಷ್ಟನೆ ನೀಡಲು ಸಹ ಸಂಸದರು ಪ್ರಯತ್ನ ಮಾಡಿದ್ದು, ಅದು ಬಹಳ ದೊಡ್ಡ ಘಟನೆ. ಆ ರೀತಿಯ ಘಟನೆ ಆಗಬಾರದಿತ್ತು. ಅದು ತುಂಬಾ ಬೇಸರದ ಸಂಗತಿ. ಅದು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರೀ ಪ್ರಚಾರ ಪಡೆದುಕೊಂಡಿತ್ತು, ಅದರ ಪರಿಣಾಮ ಜಿಲ್ಲೆಗೆ ಆಗಿದೆ ಎಂದು ಹೇಳಿದ್ದಾರೆ. ಅಲ್ಲದೇ, ಈ ಘಟನೆಯಿಂದ ಕೊಪ್ಪಳ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿ ಶೇಕಡಾ 50ರಷ್ಟು ಇಳಿಕೆ ಕಂಡುಬಂದಿದೆ ಎಂದಿದ್ದಾರೆ.
ಇದನ್ನೂ ಓದಿ: ರಾಜ್ಯಪಾಲರ ವಿರುದ್ಧ ಕಾನೂನು ಸಮರ, ಸುಪ್ರೀಂಗೆ ಅರ್ಜಿ ಸಲ್ಲಿಸಲು ರಾಜ್ಯದ ನಿರ್ಧಾರ
