ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಲೋಪದೋಷಗಳಾಗಿವೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, (Priyank Kharge) ಈ ಗೊಂದಲಗಳಿಗೆ ರಾಜ್ಯ ಸರ್ಕಾರ ಕಾರಣವಲ್ಲ, ಬದಲಿಗೆ ಚುನಾವಣಾ ಆಯೋಗವೇ ನೇರ ಹೊಣೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಆಯೋಗದ ಕಾರ್ಯವೈಖರಿಯನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. “ಚುನಾವಣಾ ಆಯೋಗ ಕತ್ತೆ ಕಾಯ್ತಾ ಇದೆಯಾ? ಜವಾಬ್ದಾರಿ ಅವರದ್ದೇ ತಾನೆ?” ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಎಸ್‌ಐಆರ್ ಪ್ರಕ್ರಿಯೆಯ ಸುತ್ತ ಎದ್ದಿರುವ ಅನುಮಾನಗಳಿಗೆ ಆಯೋಗವೇ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ.
“ನಿಯಮ ರೂಪಿಸೋದು ನಾವಲ್ಲ, ಆಯೋಗ ಉತ್ತರಿಸಲಿ”
ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, “ಕಾನೂನು ಮೀರಿ ಯಾರೂ ಏನನ್ನೂ ಮಾಡಲು ಸಾಧ್ಯವಿಲ್ಲ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಎಲ್ಲಾದರೂ ಲೋಪವಾಗಿದ್ದರೆ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ಮುಕ್ತ ಅಧಿಕಾರವಿದೆ. ನಾವು ಯಾರನ್ನೂ ಬಲವಂತವಾಗಿ ಸಮುದಾಯ ಭವನದಲ್ಲೋ ಅಥವಾ ಕಚೇರಿಯಲ್ಲೋ ಕುಳಿತು ಪರಿಷ್ಕರಣೆ ಮಾಡಿ ಎಂದು ಒತ್ತಾಯಿಸಿಲ್ಲ” ಎಂದು ಸ್ಪಷ್ಟಪಡಿಸಿದರು.
ಈ ಪ್ರಕ್ರಿಯೆಯ ಬಗ್ಗೆ ಸಾರ್ವಜನಿಕರಲ್ಲಿರುವ ಸಂಶಯಗಳನ್ನು ನಿವಾರಿಸಲು ನಾವು ಆಯೋಗಕ್ಕೆ 12 ಪ್ರಮುಖ ಪ್ರಶ್ನೆಗಳನ್ನು ಕೇಳಿ ಪತ್ರ ಬರೆದಿದ್ದೆವು. ಆದರೆ ಆಯೋಗ ಇದುವರೆಗೆ ಒಂದಕ್ಕೂ ಉತ್ತರ ನೀಡಿಲ್ಲ. ಅನುಮಾನಗಳಿದ್ದರೆ ಅದಕ್ಕೆ ಸರ್ಕಾರವನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ಬಿಎಲ್‌ಒ (BLO) ಫೋಟೋ ವಿವಾದ ಮತ್ತು ಜಯನಗರ ಉದಾಹರಣೆ
ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ರಾಜ್ಯದ ಆಡಳಿತ ವ್ಯವಸ್ಥೆಯ ಅಡಿಯಲ್ಲೇ ಬಂದರೂ, ಅವರಿಗೆ ಮಾರ್ಗದರ್ಶನ ಹಾಗೂ ಆಜ್ಞೆ ನೀಡುವುದು ಚುನಾವಣಾ ಆಯೋಗವೇ ಎಂದು ಸಚಿವರು ನೆನಪಿಸಿದರು. ಬಿಎಲ್‌ಒಗಳ ಫೋಟೋ ವಿವಾದದ ಕುರಿತು ಮಾತನಾಡುತ್ತಾ ಜಯನಗರದ ಉದಾಹರಣೆ ನೀಡಿದ ಅವರು, “ಅಲ್ಲಿ ಬಿಎಲ್‌ಒ ಆಗಿ ಯಾರು ಇದ್ದಾರೆ? ಫೋಟೋ ಹಾಕಬಾರದು ಎಂಬ ಮಾನದಂಡಗಳಿವೆ, ಅದನ್ನು ಪಾಲಿಸಬೇಕು. ಎಲ್ಲ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತದಾರರಿಗೋಸ್ಕರ ಶ್ರಮಿಸುತ್ತಿದ್ದಾರೆ, ಆದರೆ ನಿಯಮ ಉಲ್ಲಂಘನೆಯಾಗಬಾರದು” ಎಂದರು.
ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಲ್ಲಿ ಆತಂಕ
ಎಸ್‌ಐಆರ್ ಪ್ರಕ್ರಿಯೆ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರಲ್ಲಿ ಆತಂಕ ಮೂಡಿಸಿದೆ ಎಂದು ಕಳವಳ ವ್ಯಕ್ತಪಡಿಸಿದ ಸಚಿವರು, “ಬಿಹಾರ ಮತ್ತು ಬಂಗಾಳದಂತಹ ರಾಜ್ಯಗಳಲ್ಲಿ ಎಸ್‌ಐಆರ್ ಪಟ್ಟಿ ಇದ್ದರೆ ಮಾತ್ರ ಸರ್ಕಾರಿ ಯೋಜನೆಗಳು ಸಿಗುತ್ತವೆ ಎಂದು ಕಡ್ಡಾಯ ಮಾಡಲಾಗಿದೆ. ಅಂತಹ ಗೊಂದಲ ಇಲ್ಲಿಯೂ ಸೃಷ್ಟಿಯಾಗಬಾರದು. ಇಂತಹ ಆತಂಕಗಳನ್ನು ನಿವಾರಿಸಬೇಕಾದ್ದು ಆಯೋಗದ ಕರ್ತವ್ಯ. ನಾವು ಸ್ಪಷ್ಟನೆಗಾಗಿ ಕಾಲಾವಕಾಶ ಕೇಳಿದರೂ ಆಯೋಗ ಸಮಯ ನೀಡುತ್ತಿಲ್ಲ” ಎಂದು ಅಸಮಾಧಾನ ಹೊರಹಾಕಿದರು.
ಕುಮಾರಸ್ವಾಮಿ ಹಾಗೂ ಶೋಭಾ ಕರಂದ್ಲಾಜೆಗೆ ತಿರುಗೇಟು
ಕೇಂದ್ರ ಚುನಾವಣಾ ಆಯೋಗದ ಮೂಲಕವೇ ಎಸ್‌ಐಆರ್ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಿಸಬೇಕು ಎಂಬ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಶೋಭಾ ಕರಂದ್ಲಾಜೆ ಅವರ ಹೇಳಿಕೆಗೆ ಸಚಿವ ಖರ್ಗೆ ಖಾರವಾಗಿ ಪ್ರತಿಕ್ರಿಯಿಸಿದರು.
“ಕೇಂದ್ರದಲ್ಲಿ ನಿಮ್ಮದೇ ಬಿಜೆಪಿ ನೇತೃತ್ವದ ಸರ್ಕಾರ ಇಲ್ವಾ? ನಿಮ್ಮ ಕೈಯಲ್ಲೇ ಅಧಿಕಾರ ಇದೆ, ತಕ್ಷಣವೇ ಕೇಂದ್ರ ಸರ್ಕಾರದಿಂದ ಮಾನಿಟರ್ ಮಾಡಿಸಿ, ಯಾರು ಬೇಡ ಅಂದಿದ್ದಾರೆ? ನಾವು ಎಸ್‌ಐಆರ್ ವಿರೋಧಿಗಳಲ್ಲ, ಆದರೆ ಇಡೀ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು ಅನ್ನೋದು ನಮ್ಮ ಒತ್ತಾಯ. ದುರಂತವೆಂದರೆ, ಇಲ್ಲಿ ಚುನಾವಣಾ ಆಯೋಗವೇ ಸ್ವತಃ ಆತಂಕ ಸೃಷ್ಟಿಯಾಗಲು ಅವಕಾಶ ನೀಡುತ್ತಿದೆ.” — ಪ್ರಿಯಾಂಕ್ ಖರ್ಗೆ, ಗೃಹ ಸಚಿವ
