Duniya Vijay: ಜಾಂಬಿ ಡ್ರಗ್ ಬಗ್ಗೆ ಆತಂಕ ವ್ಯಕ್ತಪಡಿಸಿದ ನಟ ದುನಿಯಾ ವಿಜಯ್

Duniya Vijay request youths not to take zombie drug

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಹರಿದಾಡುತ್ತಿರುವ ಕೆಲವು ವಿಡಿಯೋಗಳು ಜನರಲ್ಲಿ ಆತಂಕ ಮೂಡಿಸಿವೆ. ಆ ವಿಡಿಯೋಗಳಲ್ಲಿ ಯುವಕರು ಪ್ರಜ್ಞೆ ಇಲ್ಲದವರಂತೆ ನಿಂತಲ್ಲೇ ವಾಲಾಡುತ್ತಾ, ಸಿನಿಮಾಗಳಲ್ಲಿ ಕಾಣುವ ‘ಜಾಂಬಿ’ಗಳಂತೆ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಇದಕ್ಕೆ ‘ಜಾಂಬಿ ಡ್ರಗ್’ ಎಂಬ ಭೀಕರ ಮಾದಕ ವಸ್ತುವೇ ಕಾರಣ ಎನ್ನಲಾಗುತ್ತಿದ್ದು, ಈ ಪಿಡುಗು ಬೆಂಗಳೂರಿಗೂ ಕಾಲಿಟ್ಟಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಗಂಭೀರ ಬೆಳವಣಿಗೆಯ ಬಗ್ಗೆ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ (Duniya Vijay) ಈಗ ಕಳವಳ ವ್ಯಕ್ತಪಡಿಸಿದ್ದಾರೆ.

ಯುವಕರಿಗೆ ದೂರ ಇರುವಂತೆ ಮನವಿ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ದುನಿಯಾ ವಿಜಯ್, ಯುವ ಸಮೂಹ ಮತ್ತು ಪೋಷಕರು ಈ ಬಗ್ಗೆ ತೀವ್ರ ಜಾಗೃತರಾಗಿರಬೇಕು ಎಂದು ಮನವಿ ಮಾಡಿದ್ದಾರೆ. ‘ನಮ್ಮ ಭೀಮ ಸಿನಿಮಾದಲ್ಲಿ ಗಾಂಜಾ ಮತ್ತು ಇತರ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸಲು ಶ್ರಮಿಸಿದ್ದೆವು. ಆದರೆ ಈಗ ಕೇಳಿಬರುತ್ತಿರುವ ಈ ಜಾಂಬಿ ಡ್ರಗ್ ಅತ್ಯಂತ ಭಯಾನಕವಾಗಿ ಕಾಣುತ್ತಿದೆ’ ಎಂದು ಅವರು ಆತಂಕ ಹಂಚಿಕೊಂಡಿದ್ದಾರೆ.

ಯುವಕರ ರಕ್ಷಣೆಗೆ ಆಗ್ರಹ

ಈ ಜಾಂಬಿ ಡ್ರಗ್ಸ್ ಸುದ್ದಿ ನಿಜವೇ ಅಥವಾ ಕೇವಲ ವದಂತಿಯೇ ಎಂಬ ಬಗ್ಗೆ ಪೊಲೀಸರು ತಕ್ಷಣ ತನಿಖೆ ನಡೆಸಬೇಕು ಎಂದು ಅವರು ವಿನಂತಿಸಿದ್ದಾರೆ. ಕರ್ನಾಟಕ ಪೊಲೀಸರು ಈಗಾಗಲೇ ಮಾದಕ ವಸ್ತುಗಳ ವಿರುದ್ಧ ಕಠಿಣ ಹೋರಾಟ ನಡೆಸುತ್ತಿದ್ದಾರೆ. ಇದೀಗ ಈ ಹೊಸ ರೀತಿಯ ಡ್ರಗ್ಸ್ ಬಗ್ಗೆಯೂ ಕೂಲಂಕಷವಾಗಿ ಪರಿಶೀಲಿಸಿ ಯುವಕರನ್ನು ರಕ್ಷಿಸಬೇಕಿದೆ. ಸಾರ್ವಜನಿಕರು ಸಹ ಇಂತಹ ಅಮಲಿನಲ್ಲಿರುವವರು ಎಲ್ಲಿಯಾದರೂ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಅವರು ಕೇಳಿಕೊಂಡಿದ್ದಾರೆ.

ದುನಿಯಾ ವಿಜಯ್ ಅವರು ಸದಾ ತಮ್ಮ ಸಿನಿಮಾಗಳ ಮೂಲಕ ಸಮಾಜದ ಕೆಟ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತುತ್ತಾ ಬಂದಿದ್ದಾರೆ. ಅವರ ನಿರ್ದೇಶನದ ‘ಭೀಮ’ ಸಿನಿಮಾ ಬೆಂಗಳೂರಿನ ಡ್ರಗ್ಸ್ ಮಾಫಿಯಾವನ್ನು ಜಗತ್ತಿನ ಮುಂದೆ ತೆರೆದಿಟ್ಟಿತ್ತು. ಸಿನಿಮಾ ರಿಲೀಸ್‌ಗೂ ಮುನ್ನವೇ ವೈದ್ಯರ ಚೀಟಿ ಇಲ್ಲದೆ ಮಾತ್ರೆಗಳನ್ನು ಮಾರುವ ಮೆಡಿಕಲ್ ಸ್ಟೋರ್‌ಗಳ ಅಸಲಿ ಮುಖವನ್ನು ಅವರು ಬಯಲು ಮಾಡಿದ್ದರು. ಈಗ ಈ ಹೊಸ ಮಾದರಿಯ ಸಂಕಷ್ಟದ ಬಗ್ಗೆಯೂ ಅವರು ಯುವಜನತೆಯನ್ನು ಎಚ್ಚರಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ವೆಬ್‌ ಸೀರೀಸ್‌ನತ್ತ ಡಾಲಿ ಚಿತ್ತ, ಓಟಿಟಿಗೆ ಬಂದ ಧನಂಜಯ

Leave a Reply

Your email address will not be published. Required fields are marked *