ಬೆಂಗಳೂರು : ನಮ್ಮ ಪಕ್ಷದ ನಾಯಕರ ಜೊತೆ ನಡೆದ ಮಾತುಕತೆಯನ್ನ ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಹೇಳಿದ್ದಾರೆ.
ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ಭೇಟಿ
ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಹೊಸ ವಿಚಾರಗಳು ಬಯಲಿಗೆ ಬರುತ್ತಿದೆ. ಅದರಲ್ಲೂ ಸಿಎಂ ಬದಲಾವಣೆ ವಿಚಾರವಾಗಿ ಕುತೂಹಲ ಹೆಚ್ಚಾಗುತ್ತಿದೆ. ಹೀಗಿರುವಾಗ ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಅವರನ್ನ ಭೇಟಿ ಮಾಡಿದ್ದಾರೆ. ಈ ಭೇಟಿ ಬಹಳ ಕುತೂಹಲವನ್ನ ಸೃಷ್ಟಿ ಮಾಡಿದೆ. ಅದರಲ್ಲೂ ವಿಮಾನ ನಿಲ್ದಾಣದ ರನ್ವೇಯಲ್ಲಿ ನಡೆದ ಕೆಲ ನಿಮಿಷಗಳ ಮಾತುಕತೆಗೆ ಅನೇಕ ರೆಕ್ಕೆ ಪುಕ್ಕಗಳು ಅಂಟಿಕೊಳ್ಳುತ್ತಿವೆ. ಹೀಗಿರುವಾಗ ಡಿಸಿಎಂ ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯ ಬಿಜೆಪಿ ಬಗ್ಗೆ ಚರ್ಚೆ ಮಾಡಲಾಗಿದೆ
ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ತಾವು ಕೆಪಿಸಿಸಿ ಅಧ್ಯಕ್ಷರಾಗಿರುವುದರಿಂದ ಶಿಷ್ಟಾಚಾರದ ಪ್ರಕಾರ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದ್ದೇನೆ. ನರೇಗಾ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಮಾಡುತ್ತಿರುವ ಕಾರ್ಯಕ್ರಮಗಳ ಬಗ್ಗೆ ಅವರಿಗೆ ತಿಳಿಸಿದ್ದೇನೆ. ಅಲ್ಲದೇ ರಾಜ್ಯ ಬಿಜೆಪಿಯಲ್ಲಿ ಆಗುತ್ತಿರುವ ರಾಜಕಾರಣದ ಕುರಿತು ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಏರ್ಪೋರ್ಟ್ ರನ್ವೇಯಲ್ಲಿ ಡಿಕೆಶಿ-ರಾಹುಲ್ ಮಾತುಕತೆ, ಕುತೂಹಲ ಮೂಡಿಸಿದ ನಾಯಕರ ಭೇಟಿ
