ಬೆಂಗಳೂರು: ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಕಾರ್ಮೋಡ ಇದೀಗ ಬೆಂಗಳೂರಿನ (Bengaluru) ಅಡುಗೆ ಮನೆಗಳಿಗೂ ತಟ್ಟಿದೆ. ಜಾಗತಿಕವಾಗಿ ಅನಿಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ಮುಂದಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಸಿಗುವುದು ಕಷ್ಟವಾಗಬಹುದು ಎಂಬ ಭೀತಿ ಶುರುವಾಗಿದೆ. ಈ ಕಾರಣದಿಂದಾಗಿ ರಾಜಧಾನಿಯ ಜನ ಸಾಮಾನ್ಯರು ಹಾಗೂ ಹೋಟೆಲ್ ಮಾಲೀಕರು ಅಡುಗೆ ಅನಿಲಕ್ಕೆ ಪರ್ಯಾಯವಾಗಿ ವಿದ್ಯುತ್ ಚಾಲಿತ ಇಂಡಕ್ಷನ್ ಸ್ಟವ್ಗಳ ಖರೀದಿಗೆ ಮುಗಿಬಿದ್ದಿದ್ದಾರೆ.
ಸ್ಟಾರ್ ಹೋಟೆಲ್ಗಳಿಂದಲೂ ಬೇಡಿಕೆ
ನಗರದಲ್ಲಿ ಇಂಡಕ್ಷನ್ ಒಲೆಗಳಿಗೆ ಹಿಂದೆಂದೂ ಇಲ್ಲದಂತಹ ಬೇಡಿಕೆ ಕಂಡುಬರುತ್ತಿದೆ. ಈ ಹಿಂದೆ ದಿನಕ್ಕೆ ಸುಮಾರು 40 ವಾಣಿಜ್ಯ ಬಳಕೆಯ ಇಂಡಕ್ಷನ್ ಸ್ಟವ್ಗಳಿಗೆ ಬೇಡಿಕೆ ಇರುತ್ತಿತ್ತು, ಆದರೆ ಈಗ ಈ ಸಂಖ್ಯೆ 200ಕ್ಕೆ ಏರಿಕೆಯಾಗಿದೆ. ಕೇವಲ ಸಣ್ಣ ಹೋಟೆಲ್ಗಳಷ್ಟೇ ಅಲ್ಲದೆ, ದೊಡ್ಡ ರೆಸ್ಟೋರೆಂಟ್ಗಳು ಹಾಗೂ ಸ್ಟಾರ್ ಹೋಟೆಲ್ಗಳು ಕೂಡ ಗ್ಯಾಸ್ ಸಿಲಿಂಡರ್ ಮೇಲಿನ ಅವಲಂಬನೆ ಕಡಿಮೆ ಮಾಡಲು ಇಂಡಕ್ಷನ್ ಒಲೆಗಳತ್ತ ಮುಖ ಮಾಡಿವೆ. ಇದರಿಂದಾಗಿ ಪೀಣ್ಯ ಕೈಗಾರಿಕಾ ಪ್ರದೇಶದ ತಯಾರಕರು ಹೆಚ್ಚಿನ ಉತ್ಪಾದನೆ ಮಾಡಲು ಹಗಲಿರುಳು ಕೆಲಸ ಮಾಡುವಂತಾಗಿದೆ.
ಗೃಹಬಳಕೆಯ ಸ್ಟವ್ಗಳ ಮಾರುಕಟ್ಟೆಯಲ್ಲೂ ಇಂತದ್ದೇ ಪರಿಸ್ಥಿತಿ ಇದೆ. ಹಿಂದೆ ದಿನಕ್ಕೆ ಒಂದು ಅಥವಾ ಎರಡು ಸ್ಟವ್ಗಳು ಮಾರಾಟವಾಗುತ್ತಿದ್ದ ಅಂಗಡಿಗಳಲ್ಲಿ ಈಗ ಸರಾಸರಿ 20ಕ್ಕೂ ಹೆಚ್ಚು ಒಲೆಗಳು ಮಾರಾಟವಾಗುತ್ತಿವೆ. ಈ ಹಠಾತ್ ಬೇಡಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಸ್ಟಾಕ್ ಕೊರತೆ ಎದುರಾಗಿದ್ದು, ಗ್ರಾಹಕರು ತಮಗೆ ಬೇಕಾದ ಮಾಡೆಲ್ಗಳಿಗಾಗಿ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಜಾಗತಿಕ ಯುದ್ಧದ ಪರಿಣಾಮವಾಗಿ ಬೆಂಗಳೂರಿನ ಜನ ಅನಿವಾರ್ಯವಾಗಿ ಅನಿಲ ಮುಕ್ತ ಅಡುಗೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ದ್ವೇಷದಿಂದ ರಸ್ತೆ ಅಗೆದ ಭೂಪ, ರೋಗಿಯನ್ನ ಹೆಗಲ ಮೇಲೆ ಹೊತ್ತು ಸಾಗಿದ ಹಳ್ಳಿಗರು
