ಬೆಂಗಳೂರು: ರಸ್ತೆಯಲ್ಲಿ ಎಲೆ ಅಡಿಕೆ ಉಗುಳಿದಕ್ಕೆ ಗೂಂಡಾಗಿರಿ (Crime) ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಸದ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃದ್ಧೆ ಕುಟುಂಬದ ಮೇಲೆ ಅಟ್ಯಾಕ್
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸರ್ಜಾಪುರ ಸಮೀಪದ ಬಿಲ್ಲಾಪುರದಲ್ಲಿ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಎಲೆ ಅಡಿಕೆ ಉಗುಳಿದ ಹಿನ್ನೆಲೆಯಲ್ಲಿ ವೃದ್ಧೆ ಕುಟುಂಬದ ಮೇಲೆ ಅಟ್ಯಾಕ್ ಮಾಡಲಾಗಿದೆ. ಈ ದಾಳಿಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ.
ಏನಿದು ಘಟನೆ?
ಮಾಹಿತಿಗಳ ಪ್ರಕಾರ, ವೃದ್ಧೆ ಮುನಿಯಮ್ಮ ಎಲೆ ಅಡಿಕೆ ಹಾಕಿಕೊಂಡು ಮನೆಯ ಬಳಿ ಕುಳಿತಿದ್ರು. ಈ ಸಮಯದಲ್ಲಿ ಅದೇ ರಸ್ತೆಯಲ್ಲಿ ಕೃಷ್ಣಮೂರ್ತಿ ಎನ್ನುವವರು ಕೂಡ ಹೋಗುತ್ತಿದ್ದರು. ಈ ವೇಳೆ ಮುನಿಯಮ್ಮ ಅವರು ರಸ್ತೆಗೆ ಎಲೆ ಅಡಿಕೆಯನ್ನ ಉಗುಳಿದ್ದರು. ಇದರಿಂದ ನನಗೆ ಎಲೆ ಅಡಿಕೆ ಉಗುಳಿದ್ದಾರೆ ಎಂದು ಕೃಷ್ಣಮೂರ್ತಿ ಅವರು ಕಿರಿಕ್ ತೆಗೆದಿದ್ದಾರೆ. ಈ ಸಮಯದಲ್ಲಿ ಏಕಾಏಕಿ ಕೃಷ್ಣಮೂರ್ತಿ ಮತ್ತು ಕುಟುಂಬ ಮುನಿಯಮ್ಮ ಹಾಗೂ ಅವರ ಕುಟುಂಬದ ಮೇಲೆ ದಾಳಿ ಮಾಡಿದ್ದಾರೆ. ಇದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿ ವೃದ್ಧೆ ಮುನಿಯಮ್ಮ ಕುಟುಂಬದ ಮೇಲೆ ಕಬ್ಬಿಣದ ರಾಡ್, ಕಲ್ಲು ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಲಾಗಿದೆ. ಅಲ್ಲದೇ, ವೃದ್ದೆ ಸೊಸೆ ಸುಮ ಎಂಬುವವರ ತಲೆಯಿಂದ ರಕ್ತ ಸುರಿಯುತ್ತಿದ್ದರೂ ಸಹ ಹಲ್ಲೆ ಮಾಡಿದ್ದು, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಸದ್ಯ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ವೃದ್ದೆಯ ಸೊಸೆ ಸುಮ ದೂರು ದಾಖಲು ಮಾಡಿದ್ದು, ಕೃಷ್ಣಮೂರ್ತಿ, ಉಷಾ, ಮನೋಜ್, ಪ್ರಿಯಾಂಕ, ಜಯದೇವ್, ನಾರಾಯಣಪ್ಪ, ರತ್ನಮ್ಮ, ಜಯಪ್ಪ, ರಮೇಶ್ ಎಂಬುವವರ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಡೀಸೆಲ್ ಸ್ಮಗ್ಲಿಂಗ್ ದಂಧೆ, ಪೊಲೀಸರ ದಾಳಿಯಲ್ಲಿ ಬಯಲಾಯ್ತು ಶಾಕಿಂಗ್ ಸಮಾಚಾರ
