CM Siddaramaiah: ಹುಲಿಕಲ್‌ ಘಾಟ್‌ ಮಣ್ಣು ಕುಸಿತ, ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ

CM Siddaramaiah announces 5 lakh compensation

ಬೆಂಗಳೂರು: ಹೊಸನಗರ ತಾಲ್ಲೂಕಿನ ಹುಲಿಕಲ್ ಘಾಟಿ ತಿರುವಿನಲ್ಲಿ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿಯ ಸಮಯದಲ್ಲಿ ಮಣ್ಣು ಕುಸಿದು ಮೂವರು ಕಾರ್ಮಿಕರು ಸಾವಿಗೀಡಾಗಿರುವ ಘಟನೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಬೇಸರ ವ್ಯಕ್ತಪಡಿಸಿದ್ದಾರೆ.

ಸುದ್ದಿ ಕೇಳಿ ಬಹಳ ದುಃಖವಾಯಿತು

ಈ ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿರುವ ಅವರು, ನನಗೆ ಮೂವರು ಕಾರ್ಮಿಕರು ಮೃತಪಟ್ಟ ಸುದ್ದಿ ಕೇಳಿ‌ ದುಃಖವಾಯಿತು. ಮೃತ ದುರ್ದೈವಿ ಕಾರ್ಮಿಕರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ಸದಸ್ಯರಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಘಟನೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರೊಂದಿಗೆ ಮಾತುಕತೆ ನಡೆಸಿ, ಮಾಹಿತಿ ಪಡೆದಿದ್ದೇನೆ. ಕುಟುಂಬಕ್ಕೆ ಆಧಾರವಾಗಿದ್ದ ದುಡಿಯುವ ಜೀವಗಳು ಈ ಘಟನೆಯಲ್ಲಿ ಬಲಿಯಾಗಿದ್ದು, ಮಾನವೀಯ ನೆಲೆಯಲ್ಲಿ ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಹುಲಿಕಲ್ ಘಾಟ್‌ನ ಹೇರ್ ಪಿನ್ ಕ್ರಾಸ್ ಬಳಿ ನಡೆದ ಭೀಕರ ಗುಡ್ಡ ಕುಸಿತ ಪ್ರಕರಣದ ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಂಡಿದ್ದು, ಮಣ್ಣಿನಡಿ ಸಿಲುಕಿದ್ದ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಘಾಟ್ ರಸ್ತೆಯ ತಡೆಗೋಡೆ ದುರಸ್ತಿ ಕಾಮಗಾರಿ ನಡೆಸುತ್ತಿದ್ದ ವೇಳೆ ಆಕಸ್ಮಿಕವಾಗಿ ಗುಡ್ಡದ ಮಣ್ಣು ಕುಸಿದು ಬಿದ್ದಿದ್ದರಿಂದ ಈ ದುರಂತ ಸಂಭವಿಸಿತ್ತು. ಘಟನೆಯಲ್ಲಿ ಗಾಯಗೊಂಡಿದ್ದ ಇತರ ಮೂವರು ಕಾರ್ಮಿಕರನ್ನು ಈಗಾಗಲೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರಿದಿದೆ.

ಗುಡ್ಡ ಕುಸಿತದ ಸುದ್ದಿ ತಿಳಿಯುತ್ತಿದ್ದಂತೆಯೇ ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹಗಲಿರುಳು ಕಾರ್ಯಾಚರಣೆ ನಡೆಸಿದ್ದರು. ಭಾರಿ ಪ್ರಮಾಣದ ಮಣ್ಣು ಬಿದ್ದಿದ್ದರಿಂದ ಶವಗಳನ್ನು ಹೊರತೆಗೆಯುವುದು ರಕ್ಷಣಾ ತಂಡಕ್ಕೆ ದೊಡ್ಡ ಸವಾಲಾಗಿತ್ತು. ಗುರುವಾರ ನಡೆದ ಕಾರ್ಯಾಚರಣೆಯಲ್ಲಿ ಕಾಮಗಾರಿ ಮೇಲ್ವಿಚಾರಕ ರಾಘು (37) ಮತ್ತು ಹಾವೇರಿ ಮೂಲದ ರಾಜು (30) ಎಂಬುವವರ ಮೃತದೇಹಗಳು ಪತ್ತೆಯಾಗಿದ್ದವು. ಇಂದು ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಶಬ್ಬೀರ್ (40) ಎಂಬ ಮತ್ತೊಬ್ಬ ಕಾರ್ಮಿಕನ ಶವವನ್ನೂ ಹೊರತೆಗೆಯಲಾಗಿದೆ.

ಮುಗಿಲು ಮುಟ್ಟಿದ ಆಕ್ರಂಧನ

ಪತ್ತೆಯಾದ ಮೂರೂ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಾಮಗಾರಿ ನಡೆಯುತ್ತಿದ್ದ ವೇಳೆ ಇಂತಹ ಅವಘಡ ಸಂಭವಿಸಿರುವುದು ಕಾರ್ಮಿಕ ವಲಯದಲ್ಲಿ ವಿಷಾದ ಮೂಡಿಸಿದೆ. ಸದ್ಯಕ್ಕೆ ರಕ್ಷಣಾ ಕಾರ್ಯ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:  ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಹೀಗೆ ಚೆಕ್‌ ಮಾಡಿ

Leave a Reply

Your email address will not be published. Required fields are marked *